ಕೃಷಿ ಕಾಯ್ದೆ : ಹಠಮಾರಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರ

ಹರಪನಹಳ್ಳಿ :  ಎಂ.ಪಿ.ಪ್ರಕಾಶ್‍ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕಿಡಿ ಕಾರಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಅಮರನಾಥ  

ಹರಪನಹಳ್ಳಿ, ಫೆ.8 –  ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನ ಬರೆದಂತೆ ಎಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಹಠಮಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರಕ್ಕೆ ರೈತರ ಮೇಲೆ ಕರುಣೆಯಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಅಮರನಾಥ ಕಿಡಿ ಕಾರಿದರು. 

ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ತಾಲ್ಲೂಕಿನ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಅನ್ನದಾತನಿಗೆ ಶ್ರಮದಾನ ಮತ್ತು ಸನ್ಮಾನ, ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ ಹಾಗೂ ದಿ.ಎಂ.ಪಿ.ಪ್ರಕಾಶ್ ಅವರ 11ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕೇಂದ್ರ ಸರ್ಕಾರ ಹಲವಾರು ವಲಯಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಿದೆ. ಈಗ ಕೃಷಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದೆ. ಚರ್ಚೆ ಮಾಡದೇ ಕಾಯ್ದೆಗಳನ್ನು ಜಾರಿ ಮಾಡಿರುವುದು ಸಂವಿಧಾನದಲ್ಲಿ ಇಲ್ಲ. ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ತುಳಿಯುವ ಕಾಯ್ದೆಗಳನ್ನು ಜಾರಿ ಮಾಡಿದೆ. ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿಯ ಮೂಲಕ ಬಡವರ ಹೊಟ್ಟೆ ತುಂಬಿಸಿ ದ್ದರು. ಉಳ್ಳವನೇ ಭೂಮಿ ಒಡೆಯ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು. 

ಪ್ರಧಾನಮಂತ್ರಿ ನವಿಲುಗಳ ಜೊತೆ ನಲಿ ದಾಡುವ ಟ್ವೀಟ್ ಮಾಡುತ್ತಾರೆ. ರೈತರು ಜೀವ ಕಳೆದುಕೊಂಡು ಪ್ರತಿಭಟನೆ ಮಾಡುತ್ತಿದ್ದರೂ ಇಲ್ಲಿಯವರೆಗೂ ಒಂದು ಟ್ವೀಟ್ ಇಲ್ಲ. ಬೆಲೆ ಏರಿಕೆಯಲ್ಲಿ ಭಾರತ ದಾಖಲೆ ಸ್ಥಾಪಿಸುತ್ತಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್, ಖಾದ್ಯ ತೈಲಗಳು ದಾಖಲೆ ದರ ಮುಟ್ಟಿವೆ. ಈರುಳ್ಳಿ ಬೆಲೆ ಗಗನಕ್ಕೇ ರಿದೆ. ಅವರಿಗೆ ನೋಬಲ್ ಪ್ರಶಸ್ತಿ ನೀಡಬೇಕು. ಮೇರಾ ಭಾರತ ಮಹಾನ್ ಎನ್ನುವುದು ಬೆಲೆ ಏರಿಕೆ ಮುಖಾಂತರ ಸಾಧಿಸಿದ ಕೀರ್ತಿ ಬಿಜೆಪಿ ಸರ್ಕಾರದ್ದು ಎಂದು ಪುಷ್ಪ ಜರಿದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿಯೋಗಿಗಳು ಸಾನ್ನಿಧ್ಯ ವಹಿಸಿದ್ದರು.

ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಮುಖಂಡರಾದ ಮಹೇಶ್ವರ ಸ್ವಾಮಿ, ತಿಮ್ಮಣ್ಣ, ಪುಷ್ಪ ದಿವಾಕರ, ಕವಿತಾ ಸುರೇಶ, ಮಂಜುಳ ಗುರುಮೂರ್ತಿ, ಭಾಗ್ಯಮ್ಮ, ಉದಯಶಂಕರ್‍, ಜಯಲಕ್ಷ್ಮಿ ಚಿತ್ರದುರ್ಗ, ಕಲ್ಲಹಳ್ಳಿ ಗೋಣೆಪ್ಪ, ಮೈದೂರು ರಾಮಪ್ಪ, ಮೇಘರಾಜ್ , ಕಾನಹಳ್ಳಿ ರುದ್ರಪ್ಪ, ಕೂಲಹಳ್ಳಿ ವೆಂಕಟೇಶ್, ಮತ್ತೂರು ಬಸವರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!