ಸಂವಿಧಾನಕ್ಕೆ ಚ್ಯುತಿ ತರುವ ಕೆಲಸದ ವಿರುದ್ಧ ಧ್ವನಿ ಎತ್ತಬೇಕು

ದಲಿತ ಸೇನೆಯ ಕಾರ್ಯಕರ್ತರಿಗೆ ರಾಜ್ಯ ದಲಿತ ಸೇನೆ ಅಧ್ಯಕ್ಷ ಹನುಮಂತ್ ಜಿ. ಯಳಸಂಗಿ ಕರೆ

ದಾವಣಗೆರೆ, ಫೆ.8- ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸದ ವಿರುದ್ಧ ಧ್ವನಿ ಎತ್ತಿ ತಡೆಗಟ್ಟುವ ಕೆಲಸವನ್ನು ದಲಿತ ಸೇನೆ ಮಾಡಬೇಕಾಗಿದೆ ಎಂದು ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತ್ ಜಿ. ಯಳಸಂಗಿ ತಿಳಿಸಿದರು.

ನಗರದ ಜಯದೇವ ವೃತ್ತದ ಶಂಕರ ಮಠದ ಶ್ರೀ ಶಾರದಾ ಮಂದಿರ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ದಲಿತ ಸೇನೆಯ ರಾಜ್ಯ ಸಮಿತಿ ಪದಾಧಿಕಾರಿಗಳ ಹಾಗೂ ಎಲ್ಲಾ ಜಿಲ್ಲೆಗಳ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಬಗ್ಗೆ ಕೆಲವರು ಟೀಕಿಸುವ, ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ ಅವರು, ಸಂಸತ್ತಿನ ಹೊರಗೆ ಮತ್ತು ಒಳಗೆ ಯಾವುದೇ ಸರ್ಕಾರವಿದ್ದರೂ ಅಂಬೇಡ್ಕರ್ ಸಂವಿಧಾನವನ್ನು ಟೀಕಿಸುತ್ತಿದ್ದವ ರಿಗೆ ರಾಮ್‌ವಿಲಾಸ್ ಪಾಸ್ವಾನ್ ಧ್ವನಿ ಎತ್ತುತ್ತಿದ್ದರು ಎಂದು ಸ್ಮರಿಸಿದರು.

ಪರಿಶಿಷ್ಟರ ಮೇಲಿನ ನಿರಂತರ ದಬ್ಬಾಳಿಕೆಗಳ ಬಗ್ಗೆ ಅಧಿಕಾರ ಹಿಡಿದ ಸರ್ಕಾರಗಳು ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಚಳವಳಿ ಆಗಬೇಕಿದ್ದು, ಅದರಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು. ಮೀಸಲಾತಿ ಕೇಳುವ ಹಾಗೆಯೇ ಸಾಮಾಜಿಕ ಅನ್ಯಾಯಗಳ ವಿರುದ್ಧವೂ ಮಹಿಳೆಯರು ಧ್ವನಿ ಎತ್ತಬೇಕೆಂದರು. 

ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಿದೆ. ಆದರೆ ಮಂಗಳೂರು ಹಾಗೂ ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ಯುವತಿಯರ ಮೇಲೆ ಅತ್ಯಾಚಾರವಾದರೂ ಆರೋಪಿಗಳನ್ನು ಬಂಧಿಸಿಲ್ಲ. ದಲಿತ ಹಾಗೂ ಶೋಷಿತ ಸಮುದಾಯಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸೇನೆ ಉಪಾಧ್ಯಕ್ಷ ರಾಜಶೇಖರ್ ಎಂ. ಚೌರ್, ಪ್ರಸ್ತುತ ದಲಿತರ ಮೇಲೆ ಕಾನೂನು ಬದ್ಧ ದಾಳಿ ನಡೆಯುತ್ತಿವೆ. ದೇಶದ ಬಗ್ಗೆ ನಿಜವಾದ ಅಭಿಮಾನ ಇದ್ದವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಎಸ್ಸಿ ಜಾತಿ ಪ್ರಮಾಣ ಪತ್ರ ಬೇಕೆಂದು ಕೇಳುತ್ತಿರುವ ಬೇಡ ಜಂಗಮರು ಮೊದಲು ಅವರ ಮನೆಗಳಲ್ಲಿ ಅಂಬೇಡ್ಕರ್ ಫೋಟೋ ಹಾಕಿಕೊಂಡು ಆ ನಂತರ ಪರಿಶಿಷ್ಟರ ಸೌಲಭ್ಯ ಪಡೆಯಬೇಕು. ಇಂದು ರಾಜ್ಯದಲ್ಲಿ ಎಸ್ಟಿ ಮೀಸಲಾತಿಗಾಗಿ, 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಮೀಸಲಾತಿಯನ್ನೇ ಕಿತ್ತೊಗೆಯುವ ಹುನ್ನಾ ರದ ಭಾಗವಾಗಿವೆ ಎಂದು ಆರೋಪಿಸಿದರು.

ಸೇನೆಯ ಉಪಾಧ್ಯಕ್ಷ ಎನ್. ಪರಮೇಶ್ವರಪ್ಪ, ಜಿ. ವೆಂಕಟೇಶ್, ಎನ್. ರವಿಕುಮಾರ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಜಿ. ಪವಿತ್ರಾ, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ರಾಜಪ್ಪ, ರಾಜ್ಯ ಸಮಿತಿ ಸದಸ್ಯ ವಿ. ಮುತ್ತಣ್ಣ, ಎಂ. ಮಹೇಶ್ ಇದ್ದರು.

error: Content is protected !!