ಮಲೇಬೆನ್ನೂರು, ಫೆ.6- ಸಂವಿಧಾನಿಕ ಹಕ್ಕುಗಳನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಈ ಹಿಂದೆ ಎಲ್.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಅಧ್ಯಯನ ವರದಿ ಕೊಟ್ಟಾಗ ಆ ವರದಿಯನ್ನು ಸುಟ್ಟು ಹಾಕಿರುವವರು ಈಗ ಮೀಸಲಾತಿ ಕೇಳುತ್ತಿದ್ದಾರೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾ ನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಶನಿವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಅಂಗವಾಗಿ ಕರೆದಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಶ್ರೀಗಳು, ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಇಚ್ಛಾ ಶಕ್ತಿಯನ್ನು ಪ್ರದರ್ಶಿಸಲಿ ಎಂದರು.
ವಿವಿಧ ಸಮುದಾಯಗಳು ಎಸ್ಟಿಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈಗ ನಾವೇ ಹೊಟ್ಟೆ ತುಂಬಾ ಊಟ ಇಲ್ಲವೆಂದು ಹಸಿದು ಕುಳಿತ್ತಿದ್ದೇವೆ. ಬೇರೆಯವರನ್ನು ಎಸ್ಟಿಗೆ ಸೇರಿಸುವುದಾದರೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಕೊಟ್ಟು, ಅವರು ಎಸ್ಟಿಗೆ ಸೇರಲು ಅರ್ಹರಿದ್ದರೆ ಸೇರಿಸಲಿ ಎಂದು ಹೇಳಿದರು.
2001ರ ಜನಸಂಖ್ಯೆ ಆಧರಿಸಿ, ಕುಲದೀಪ್ ಸಿಂಗ್ ನೀಡಿದ ವರದಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿ, 2006ರಲ್ಲಿ ಎಸ್ಟಿಗೆ ಶೇ.7.5 ರ ಮೀಸಲಾತಿ ಪ್ರಮಾಣದಲ್ಲಿ 15 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳನ್ನು ಎಸ್ಟಿಗೆ ಮೀಸಲಿರಿಸಿದೆ. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಶೇ.24.1ಕ್ಕೆ ಹೆಚ್ಚಳ ಮಾಡುವ ಮೂಲಕ ಎಸ್ಟಿ ಸಮುದಾಯಕ್ಕೆ ಆರ್ಥಿಕ ಮೀಸಲಾತಿಯಲ್ಲಿ ನ್ಯಾಯ ಕಲ್ಪಿಸಿಕೊಟ್ಟರು. ಆದರೆ, ಇದೇ ಮಾನದಂಡ ಆಧರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಮಾತ್ರ 20 ವರ್ಷಗಳಿಂದಲೂ ಬಾಕಿ ಉಳಿದಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸಿ, ನಾವು ರಾಜನಹಳ್ಳಿ ಮಠದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿತ್ತು.
ಕಳೆದ ವರ್ಷದ ಫೆ. 8, 9 ರಂದು ನಡೆದ 2ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವ ಹಿಸಿದ್ದ ಸಿಎಂ ಯಡಿಯೂರಪ್ಪ ಅವರು, ಆಯೋಗದ ವರದಿ ಬಂದ ತಕ್ಷಣ ಮೀಸ ಲಾತಿ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆಯೋಗವು 2020ರ ಜುಲೈ 2 ರಂದು ಸರ್ಕಾರಕ್ಕೆ ಅಧ್ಯಯನ ವರದಿ ನೀಡಿದೆ. ಈ ಕುರಿತು ನಾವು ಮತ್ತು ನಮ್ಮ ಸಮಾಜದ ಸಚಿವರು, ಶಾಸಕರು, ಸಂಸದರು ಪಕ್ಷಾತೀತ ವಾಗಿ ಸಿಎಂ ಭೇಟಿ ಮಾಡಿ, ಮನವಿ ಮಾಡಿ ದರೂ ಇದುವರೆಗೂ ಹೆಚ್ಚಳ ಮಾಡಿಲ್ಲ.
ಇದೇ ದಿನಾಂಕ 8 ಮತ್ತು 9 ರಂದು ಜರುಗುವ 3ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನ ಪ್ರಕಟಿಸುತ್ತಾರೆಂಬ ವಿಶ್ವಾಸದಲ್ಲಿ ನಾವಿದ್ದೇವೆ. ಒಂದು ವೇಳೆ ಮತ್ತೆ ಮೂಗಿಗೆ ತುಪ್ಪಾ ಸವರುವ ಕೆಲಸ ಮಾಡಿದರೆ, ಸಮಾಜದವರ ಸಮ್ಮುಖದಲ್ಲಿ ನಮ್ಮ ಮುಂದಿನ ತೀರ್ಮಾನವನ್ನು ಪ್ರಕಟಿಸುತ್ತೇವೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ವಾಲ್ಮೀಕಿ ರತ್ನ ಪ್ರಶಸ್ತಿಗೆ ನಟ ಸುದೀಪ್ ಆಯ್ಕೆ : ವಾಲ್ಮೀಕಿ ಗುರುಪೀಠದಿಂದ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ವಿಶೇಷ ಸಾಧನೆ ಮಾಡಿರುವವರಿಗೆ `ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಿ, ಈ ವರ್ಷ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಡಾ. ಎ.ಬಿ.ರಾಮಚಂದ್ರಪ್ಪ ತಿಳಿಸಿದರು. ಇದೇ ದಿನಾಂಕ 9 ರಂದು ಕಿಚ್ಚ ಸುದೀಪ್ ಅವರಿಗೆ 1 ಲಕ್ಷ ರೂ. ಗೌರವ ಧನ ಹಾಗೂ ವಾಲ್ಮೀಕಿಯ ಬೆಳ್ಳಿ ವಿಗ್ರಹ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
50 ಸಾವಿರ ಆಸನ : ವಾಲ್ಮೀಕಿ ಜಾತ್ರೆಗೆ 60×80 ಅಳತೆಯ ಸುಸಜ್ಜಿತ ವೇದಿಕೆ ನಿರ್ಮಿಸಿದ್ದು, 300×450 ಅಳತೆಯ ಮಹಾಮಂಟಪದಲ್ಲಿ 50 ಸಾವಿರ ಜನ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್ ತಿಳಿಸಿದರು. 15 ಎಲ್‌ಇಡಿ ಟಿವಿ ಪರದೆಗಳನ್ನು ಹಾಕಲಾ ಗುವುದು. 50 ಊಟದ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ ಮಾತನಾಡಿದರು.
ಮಠದ ಆಡಳತಾಧಿಕಾರಿ ಟಿ.ಓಬಳಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಜಗಳೂರಿನ ಡಿ.ದೇವೇಂದ್ರಪ್ಪ, ರಾಜ್ಯ ಸರ್ಕಾರಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ.ನಾಗರಾಜ್, ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ, ಮಠದ ಧರ್ಮದರ್ಶಿ ಶಾಂತ ಸುರಪುರ, ಕೆ.ಬಿ.ಮಂಜುನಾಥ್, ಜಂಭಣ್ಣ ನಾಯಕ, ಮುಖಂಡರಾದ ತಿಮ್ಮೇನಹಳ್ಳಿ ಚಂದ್ರಪ್ಪ, ಮಂಗೇನಹಳ್ಳಿ ಲೋಹಿತ್, ಪಾಳೇಗಾರ್ ನಾಗರಾಜ್, ಹರ್ತಿಕೋಟಿ ವೀರೇಂದ್ರಸಿಂಹ, ಶಿಕ್ಷಕರಾದ ಭಾನುವಳ್ಳಿ ಮಾರುತಿ, ಜಿ.ಆರ್.ನಾಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್, ಹೂವಿನಮಡು ಚನ್ನಬಸಪ್ಪ, ಕೆಟಿಜೆ ನಗರ ಲಕ್ಷ್ಮಣ, ದೇವರಬೆಳಕೆರೆ ಮಹೇಶ್ವರಪ್ಪ, ಶ್ರೀಮತಿ ವಿಜಯಶ್ರೀ ಮಹೇಂದ್ರಕುಮಾರ್, ವಕೀಲ ಸುಭಾಷ್ ಚಂದ್ರಬೋಸ್, ಎ.ಕೆ.ನಾಗೇಂದ್ರಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ಜಿಗಳಿ ಆನಂದಪ್ಪ, ಇಂಜಿನಿಯರ್ ಬಿ.ಜಿ.ಶಿವರುದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.