ಪೊಲೀಸ್ ಬಂದೋಬಸ್ತ್ ಒದಗಿಸಲು ಎಸ್ಪಿಗೆ ದೂಡಾ ಅಧ್ಯಕ್ಷ ಶಿವಕುಮಾರ್ ಮನವಿ
ದಾವಣಗೆರೆ, ಜು. 2- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣವಾ ಗಿರುವ ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲು ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಗುರುವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೂಡಾ ಹಾಗೂ ಪಾಲಿಕೆ ವ್ಯಾಪ್ತಿಯ ಯರಗುಂಟೆ, ಕರೂರು ಮತ್ತು ದೊಡ್ಡ ಬೂದಿಹಾಳು ಗ್ರಾಮಗಳ ಕಂದಾಯ ಭೂಮಿಯಲ್ಲಿ ಅನಧಿ ಕೃತ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಅನಧಿಕೃತ ಬಡಾವಣೆಗಳ ನಿರ್ಮಾಣವನ್ನು ತಡೆ ಗಟ್ಟಲು ಅಥವಾ ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಈಗಾಗಲೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಬಾರದು ಎಂದು ಸೂಚಿಸಿದ್ದರೂ ಕೆಲವರು ಸರ್ಕಾರಕ್ಕೆ ವಂಚನೆ ಮಾಡಿ ಅನಧಿಕೃತ ಬಡಾವಣೆ ನಿರ್ಮಾಣ ಮಾಡಿರುವುದು ಕಂಡು ಬಂದಿರುತ್ತದೆ. ಈ ರೀತಿ ಅನಧಿಕೃತ ಬಡಾವಣೆ ಮಾಡಿರುವುದರಿಂದ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವು ಸುಮಾರು ಒಂದು ಎಕರೆಗೆ ರೂ. 60 ಲಕ್ಷಗಳು ನಷ್ಟವಾಗುತ್ತದೆ ಹಾಗೂ ಅನಧಿಕೃತ ಬಡಾವಣೆ ನಿರ್ಮಾಣ ಮಾಡುವಾಗ ರಸ್ತೆ ಉದ್ಯಾನವನ, ನಾಗರೀಕ ಸೌಲಭ್ಯ ನಿವೇಶನಗಳನ್ನು ನಿಯಮಾವಳಿ ಪ್ರಕಾರ ಬಿಡದೇ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ.
ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸದೇ ರಿಯಲ್ ಎಸ್ಟೇಟ್ ನವರು ಲಾಭ ಪಡೆಯಲು ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಹಾಗಾಗಿ ಅನಧಿಕೃತ ಬಡಾವಣೆಯಿಂದ ಸಾರ್ವಜನಿಕರು ಬ್ಯಾಂಕ್ನಿಂದ ಸಾಲ ಪಡೆಯುವಲ್ಲಿ ವಂಚಿತರಾಗಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ಇಂತಹ ಬಡಾವಣೆಗಳಿಗೆ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಕೂಡಲೇ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಲು ಸೂಚಿಸಲಾಯಿತು ಹಾಗೂ ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆಯಾಗದೇ ಯಾವುದೇ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ತಿಳಿಸಲಾಯಿತು.
ಕಂದಾಯ ಭೂಮಿಯನ್ನು ಅನಧಿಕೃತ ಬಡಾವಣೆಯಾಗಿ ಮಾಡಿದ್ದರೆ, ಅಂತಹ ಭೂಮಿಯನ್ನ ಸರ್ಕಾರಿ ಪಡಾ ಎಂದು ಪಹಣಿಯಲ್ಲಿ ನಮೂದು ಮಾಡಬಹುದಾಗಿದ್ದು, ಅಂತಹ ಭೂಮಿಯನ್ನು ಪರಿಶೀಲಿಸಿ ಕ್ರಮ ವಹಿಸಲು ತಹಶೀಲ್ದಾರರು, ದಾವಣಗೆರೆ ಇವರಿಗೆ ಸೂಚಿಸಲಾಯಿತು ಹಾಗೂ ಅನಧಿಕೃತ ಬಡಾವಣೆಗಳು ಮತ್ತು ಪಾರ್ಮ್ ಹೌಸ್ಗಳನ್ನು ಪರಿಶೀಲಿಸಿ ವರದಿ ನೀಡಲು ಸಹಾ ಸೂಚಿಸಲಾಯಿತು.
ಎ-05 ಗುಂಟೆ ಒಳಗಿನ ಕೃಷಿ ಭೂಮಿಗಳನ್ನು ನೋಂದಣಿ ಮಾಡಲು ಸರ್ವೇ ನಕ್ಷೆಯನ್ನು ತಯಾರಿಸುವಾಗ ಕೃಷಿ ಉದ್ದೇಶಕ್ಕಾಗಿ ಮಾತ್ರ ನಕ್ಷೆ ತಯಾರಿಸಲು ಹಾಗೂ ಕೃಷಿಯೆತರ ಉದ್ದೇಶಕ್ಕೆ ನಕ್ಷೆಯನ್ನು ತಯಾರಿಸದಿರಲು ಸಹಾಯಕ ನಿರ್ದೇಶಕರು ಭೂ ಮಾಪನಾ ಇಲಾಖೆಗೆ ಸೂಚಿಸಲಾಯಿತು.
ಅನಧಿಕೃತ ಬಡಾವಣೆಗಳನ್ನು ತಡೆಗಟ್ಟುವುದು ಮತ್ತು ತೆರವುಗೊಳಿಸವುದು ಮಹಾನಗರಪಾಲಿಕೆ, ಬೆಸ್ಕಾಂ ಇಲಾಖೆ, ತಹಶೀಲ್ದಾರರು, ಗ್ರಾಮ ಪಂಚಾಯಿತಿಗಳು, ಆರಕ್ಷಕ ಇಲಾಖೆ, ದೂಡಾ ಜವಬ್ದಾರಿಯಾಗಿರುತ್ತದೆ. ಹಾಗಾಗಿ ಈ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಜುಲೈ 8 ಮತ್ತು 9 ರಂದು ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದ್ದು, ಆರಕ್ಷಕ ಇಲಾಖೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಂಟಿ ನಿರ್ದೇಶಕ ಎಂ. ಅಣ್ಣಪ್ಪ, ಸಹಾಯಕ ನಿರ್ದೇಶಕ ರೇಣುಕಾ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್.ಶ್ರೀಕರ್, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.