ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕ್ರಮ
ಜಗಳೂರು ತಾ.ಪಂ. ತ್ರೈಮಾಸಿಕ ಕೆಡಿಪಿ ಸಭೆ ಯಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸಿದ ಶಾಸಕ ಎಸ್.ವಿ. ರಾಮಚಂದ್ರ
ಜಗಳೂರು, ಏ.9- ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದ ಶಾಸಕ ಎಸ್.ವಿ. ರಾಮಚಂದ್ರ, ಅಸಮರ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಮೂವರು ಇಂಜಿನಿಯರ್ಗಳನ್ನು ಅಮಾನತ್ತು ಗೊಳಿಸಿ, ತಾಲ್ಲೂಕಿನಿಂದ ರಿಲೀವ್ ಮಾಡಲು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೂವರು ಮೇಲ್ವಿಚಾರಕಿಯರನ್ನು ಕಂದಾಯ ಇಲಾಖೆಗೆ ನಿಯೋಜನೆಗೊಳಿಸಲು ಶಾಸಕರು ಸೂಚನೆ ನೀಡಿದರು. ಸಭೆಯ ಆರಂಭದಲ್ಲಿಯೇ ಗ್ರಾಮೀಣ ನೀರು ಪೂರೈಕೆ ಇಲಾಖೆ ಎಇಇ ಹೇಮೋಜಿನಾಯ್ಕ ಪ್ರಗತಿ ವರದಿಗೆ ಆಕ್ರೋಶ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಗೌಡಗೊಂಡ ನಹಳ್ಳಿ ಕುಡಿಯುವ ನೀರು ಕಾಮಗಾರಿಗೆ ಸಂಬಂಧಿಸಿದ 4 ಲಕ್ಷ ರೂಪಾಯಿ ಕಾಮಗಾ ರಿಗೆ ಕೇವಲ 1.29 ಲಕ್ಷ ರೂಪಾಯಿ ಪಾವತಿಸಿ, ಇಂಜಿನಿಯರ್ ಅವರು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದರು.
ಕಚೇರಿಗೆ ಇಂಜಿನಿಯರ್ಗಳು ಬರುವುದೇ ಇಲ್ಲ. ಜನ ಪ್ರತಿನಿಧಿಗಳಿಗೂ ಗೌರವ ನೀಡುತ್ತಿಲ್ಲ. ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಎಇಇಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಂಗಡ ಹಣ ನೀಡದೆ ಬಿಲ್ ಬರೆಯುವುದಿಲ್ಲ. ಜಿ.ಪಂ. ಸದಸ್ಯರಿಗೂ ಮ ರ್ಯಾದೆ ನೀಡುತ್ತಿಲ್ಲ ಎಂದು ಮಂಜುನಾಥ್ ಶಾಸಕರ ಎದುರೇ ಅಸಮಾಧಾನ ವ್ಯಕ್ತಪಡಿಸಿದರು.
ಇಂಜಿನಿಯರ್ಗಳಿಗೆ ಎಷ್ಟೇ ಹೇಳಿದರೂ ಸುಧಾರಿಸಿಕೊಳ್ಳುತ್ತಿಲ್ಲ. ಸಾರ್ವಜನಿಕ ರಿಂದಲೂ ವ್ಯಾಪಕ ದೂರುಗಳಿವೆ. ಮೂವರು ಇಂಜಿನಿಯರ್ಗಳನ್ನು ಅಮಾನತ್ತುಗೊಳಿಸಲು ಜಿ.ಪಂ. ಸಿಇಓ ಗೆ ತಕ್ಷಣ ವರದಿ ನೀಡುವಂತೆ ಶಾಸಕರು ತಾ.ಪಂ. ಇಒ ಮಲ್ಲಾನಾಯ್ಕ ಅವರಿಗೆ ಆದೇಶಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಪ್ರಗತಿ ವರದಿ ನೀಡಿ ದಾಗ ತರಾಟೆಗೆ ತೆಗೆದುಕೊಂಡ ಶಾಸಕರು, ತಾಲ್ಲೂಕಿನಲ್ಲಿ ಗರ್ಭಿಣಿಯರಿಗೆ ನೀಡಲಾಗುವ ದವಸ-ಧಾನ್ಯ ಹಾಗೂ ಇತರೆ ಸೌಲಭ್ಯಗಳು ದುರುಪಯೋಗವಾಗುತ್ತಿರುವ ಕುರಿತು ಪ್ರಸ್ತಾಪಿಸಿದರು. ಗರ್ಭಿಣಿ ಮಹಿಳೆಯೊಬ್ಬರು ಶಾಸಕರಿಗೆ ನೇರವಾಗಿ ದೂರು ನೀಡಿರುವುದರ ಬಗ್ಗೆ ಹಾಗೂ ಇಲಾಖೆಯವರು ಸೌಲಭ್ಯವನ್ನು ಸಮರ್ಪಕವಾಗಿ ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಗರ್ಭಿಣಿಯರಿಗೆ ಪ್ರತಿ ತಿಂಗಳೂ ನೀಡಬೇಕಾದ ಪೌಷ್ಠಿಕ ಆಹಾರವನ್ನು ಇಲಾಖೆಯ ಮೇಲ್ವಿಚಾರಕರು ವಿತರಿಸುತ್ತಿಲ್ಲ. 15-20 ವರ್ಷಗಳಿಂದ ಒಂದೇ ಕಡೆ ಇದ್ದಾರೆ. ವ್ಯಾಪಕ ದೂರುಗಳು ಬಂದಿವೆ ಎಂದ ಶಾಸಕರು, ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ ಅವರಿಗೆ ಸೂಚನೆ ನೀಡಿದರು.
ತಕ್ಷಣವೇ ಮೂರು ಜನ ಮೇಲ್ವಿಚಾರಕಿಯರನ್ನು ತಾಲ್ಲೂಕು ಕಚೇರಿಗೆ ನಿಯೋಜನೆ ಮಾಡಲು ಹಾಗೂ ಅಲ್ಲಿನ ಮೂರು ಜನ ಸಿಬ್ಬಂದಿಯನ್ನು ಮೇಲ್ವಿಚಾರಕರ ಹುದ್ದೆಗೆ ನಿಯೋಜಿಸುವಂತೆ ತಹಶೀಲ್ದಾರ್ ಹಾಗೂ ಸಿಡಿಪಿಒ ಅವರಿಗೆ ಕ್ರಮ ಕೈಗೊಳ್ಳಲು ಶಾಸಕರು ಸೂಚನೆ ನೀಡಿದರು.
ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರಿಗೆ ತೊಂದರೆ ಆಗುತ್ತಿದೆ ಎಂದು ತಾ.ಪಂ. ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ ಶಾಸಕರ ಗಮನ ಸೆಳೆದರು.
ಖರೀದಿ ಕೇಂದ್ರದ ಅಧಿಕಾರಿ ಶಂಕರ್ ಅವರನ್ನು ಸಭೆಗೆ ಕರೆಸಿದ ಶಾಸಕರು ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಿಸ ಲಾಗಿದೆ. ಆದರೆ ಮಧ್ಯವರ್ತಿಗಳ ಹಾವಳಿ ಜಾಸ್ತಿ ಆಗಿದೆ. ರೈತರಿಗೆ ತೊಂದರೆಯಾದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದು ಶಾಸಕರು ಖಡಕ್ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು, ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.
ಕೊರೊನಾ ನಡುವೆಯೂ ಸರ್ಕಾರದ ಅನುದಾನ ತಂದಿದ್ದೇನೆ. ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಶಾಸಕ ರಾಮಚಂದ್ರ, ತಾಲ್ಲೂಕಿಗೆ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾಗಿದೆ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಕೆಲವೇ ವರ್ಷಗಳಲ್ಲಿ ಬರದ ಕ್ಷೇತ್ರ ಹಸಿರು ಕ್ಷೇತ್ರವಾಗುತ್ತದೆ ಎಂದರು.
ತಾಲ್ಲೂಕು ಕಚೇರಿ ಕಟ್ಟಡದ ಅಭಿವೃದ್ಧಿಗೆ 2.15 ಕೋಟಿ ರೂ. ಮಂಜೂರಾಗಿದೆ. ಆದರ್ಶ ಗ್ರಾಮೀಣ ಯೋಜನೆಯಲ್ಲಿ 10 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೇನೆ ಎಂದ ಶಾಸಕರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮಾಧ್ಯಮಗಳು ಈ ಕುರಿತು ಜನರಿಗೆ ತಿಳಿಸಬೇಕು. ಲೋಪ ದೋಷಗಳಿದ್ದರೆ ನನ್ನ ಗಮನಕ್ಕೆ ತಂದು, ತಿದ್ದಬೇಕು. ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶಾಂತ ಕುಮಾರಿ ಶಶಿಧರ್, ಜಿ.ಪಂ. ಸದಸ್ಯ ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ, ತಹಶೀಲ್ದಾರ್ ನಾಗವೇಣಿ ಉಪಸ್ಥಿತರಿದ್ದರು.