ಮುಂದುವರಿದ ಮುಷ್ಕರ: ಆಹ್ವಾನ ನಿರಾಕರಿಸಿದ ನಿವೃತ್ತ ಚಾಲಕರು

ದಾವಣಗೆರೆ, ಏ.9- ಕರ್ತವ್ಯಕ್ಕೆ ಹಾಜರಾಗದೇ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಸಾರಿಗೆ ನಿಗಮವು ನಿವೃತ್ತ ಚಾಲಕರು ಮತ್ತು ನಿರ್ವಾಹಕರನ್ನು ಸೆಳೆಯಲು ಮುಂದಾಗಿದ್ದು, ಇದಕ್ಕೆ ಜಿಲ್ಲೆಯಲ್ಲಿ ನಿರಾಕರಣೆ ವ್ಯಕ್ತವಾಗಿದೆ.

6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರು ಬಿಗಿಪಟ್ಟು ಕೈಗೊಂಡು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆಗಳ ಈಡೇರಿಕೆಗೆ ಕರ್ತವ್ಯಕ್ಕೆ ಹಾಜರಾಗದೇ, ಬೀದಿಗಿಳಿದು ಪ್ರತಿಭಟಿಸದೇ ಬಿಗಿಪಟ್ಟು ಹಿಡಿದಿದ್ದಾರೆ. 

ಕೆಎಸ್ಆರ್ಟಿಸಿ ಬಸ್ ಸಂಚರಿಸಲು ಸಾರಿಗೆ ನಿಗಮವು ನಿವೃತ್ತ ನೌಕರರ ಮೊರೆ ಹೋಗಿದ್ದು, ದಾವಣಗೆರೆ ಕೆಎಸ್ಆರ್ಟಿಸಿ ಡಿಪೋದಿಂದ ನಿವೃತ್ತ ಸಾರಿಗೆ ನೌಕರರಿಗೆ ಕೆಲಸಕ್ಕೆ ಆಹ್ವಾನ ನೀಡಲಾಗಿದೆ. ಚಾಲಕರಿಗೆ 800, ನಿರ್ವಾಹಕರಿಗೆ 700 ರೂ. ದಿನಕ್ಕೆ ವೇತನ ಕೊಡುವುದಾಗಿ ಭರವಸೆ ನೀಡುವ ಮುಖೇನ ಮನವೊಲಿಕೆಗೆ ಮುಂದಾಗಲಾಗಿದೆ.

ನಿಗಮದ ಈ ಆಹ್ವಾನವನ್ನು ನಿವೃತ್ತ ಚಾಲಕರು ಮತ್ತು ನಿರ್ವಾಹಕರು ನಿರಾಕರಿಸಿ, ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಸೇವೆಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದ ನಿವೃತ್ತ ನೌಕರರು, ನಾವು ಅನುಭವಿಸಿದ ಕಷ್ಟ, ಈಗಿನ ನೌಕರರು ಅನುಭವಿಸಬಾರದು ಎಂದು ನೋವು ಹೊರಹಾಕಿದ್ದಾರೆ.

ಬಸ್‍ಗಳನ್ನು ಓಡಿಸಲು ಸಾಮರ್ಥ್ಯ ಇರುವ ಅನೇಕ ನಿವೃತ್ತ ಚಾಲಕರು ಮತ್ತು ನಿರ್ವಾಹಕರಿಗೆ ನಗರದ ಡಿಪೋದಿಂದ ಕರೆ ಮಾಡಿ, ದಿನಗೂಲಿ ಆಧಾರದ ಮೇಲೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ನಿವೃತ್ತ ಚಾಲಕರು ಜಯದೇವ ವೃತ್ತಕ್ಕೆ ಆಗಮಿಸಿ ಮಾತುಕತೆ ನಡೆಸಿ, ಅಧಿಕಾರಿಗಳ ಆಹ್ವಾನವನ್ನು ತಿರಸ್ಕರಿಸಿದರು.

ನಾವೂ ಕೂಡ ಸೇವೆಯಲ್ಲಿದ್ದಾಗ ಹೀಗೆ ವೇತನ ಹಾಗೂ ಪಿಂಚಣಿ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದೆವು. ಇದೀಗ ಸೇವೆಯಲ್ಲಿರುವ ಮತ್ತು ಮುಂದೆ ಸೇವೆಗೆ ಬರುವವರು ಈ ಸಮಸ್ಯೆಗೆ ಸಿಲುಕಬಾರದು ಎನ್ನುವುದನ್ನು ಅರಿತು ಎಷ್ಟೇ ಒತ್ತಡ ಹೇರಿದರೂ ಕೆಲಸಕ್ಕೆ ಹೋಗದೆ ಇದೀಗ ಮುಷ್ಕರ ನಡೆಸುತ್ತಿರುವ ನೌಕರರಿಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ನಿವೃತ್ತ ನಿರ್ವಾಹಕ ಬಸವರಾಜ್ ಮಾತನಾಡಿ, ದೂರವಾಣಿ ಮುಖೇನ ನಮಗೆಲ್ಲಾ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿದ್ದು, ನಾವು ಯಾರೂ ಹೋಗಲ್ಲ. ಹಾಲಿ ಕರ್ತವ್ಯದಲ್ಲಿರುವವರ ಬೇಡಿಕೆಗಳ ಈಡೇರಿಸದ ಮೇಲೆ ನಮಗೆಲ್ಲಿ ವೇತನ ನೀಡಬಲ್ಲರು. ಹೀಗೆ ಕರ್ತವ್ಯದಲ್ಲಿನ ಮತ್ತು ನಿವೃತ್ತ ಕಾರ್ಮಿಕರಲ್ಲಿ ಒಡಕುಂಟು ಮಾಡುವ ಬದಲು ಸಮಸ್ಯೆ ಬಗೆಹರಿಸುವಲ್ಲಿ ಗಮನಹರಿಸಲಿ ಎಂದು ತಿಳಿಸಿದರು.

ನಿರ್ವಾಹಕ ಗುರುಮೂರ್ತಿ ಮಾತನಾಡಿ, ಕಡಿಮೆ ಸಂಬಳದಲ್ಲೇ ತೊಂದರೆಗಳ ನಡುವೆಯೂ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಕನಿಷ್ಠ ಕಾರ್ಮಿಕ ವೇತನ ಸೌಲಭ್ಯವಿಲ್ಲ. ಎಷ್ಟು ವರ್ಷ ದುಡಿದಿದ್ದರೂ ಕಡಿಮೆ ಪಿಂಚಣಿ ಇದೆ. ಹೀಗೆ ನಮ್ಮ ಪ್ರಾಮಾಣಿಕ ಕರ್ತವ್ಯಕ್ಕೆ ಮನ್ನಣೆ ಇಲ್ಲದ ಬಗ್ಗೆ ನಮ್ಮ ಮಕ್ಕಳೇ ನಮ್ಮನ್ನು ಪ್ರಶ್ನಿಸುತ್ತಾರೆ. ದುಬಾರಿ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಜೀವನ ನಿರ್ವಹಣೆ ಕಷ್ಟಕರ ಎಂದು ಅಳಲಿಟ್ಟರು.

ನಿವೃತ್ತ ಚಾಲಕರಾದ ರವೀಂದ್ರ, ನಾಗರಾಜ್ ಮತ್ತು ಮೆಕ್ಯಾನಿಕ್ ಭವಾನಿ ಸಿಂಗ್ ಮಾತನಾಡಿ, ಹಗಲು-ರಾತ್ರಿ ಎನ್ನದೇ ಕಠಿಣ ಪರಿಶ್ರಮದಲ್ಲಿ ಸೇವೆ ಸಲ್ಲಿಸಿದ್ದೇವೆ. ಹಾಗೇನಾದರೂ ನೌಕರರು ಮರಣವನ್ನಪ್ಪಿದರೂ ಇಲಾಖೆಯಲ್ಲಿ ಕಾಳಜಿ ವಹಿಸದೇ ನಿರ್ಲಕ್ಷ ಕಾಣಲಾಗುತ್ತಿದೆ. ನಮಗೆ ಸಿಗುವ ವೇತನ ಜೀವನಕ್ಕೆ ಸಾಲದು. ಸೂರು ಕಟ್ಟಿಕೊಳ್ಳುವುದು ಕನಸಿನ ಮಾತಷ್ಟೇ. ವೇತನದಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಸ್ವಯಂ ನಿವೃತ್ತಿ ಪಡೆದೆನು. ಚಾಲಕರು ಮತ್ತು ನಿರ್ವಾಹಕರ ಹೋರಾಟ ಸರಿ ಇದೆ. ಇದನ್ನು ನಾವು ಬೆಂಬಲಿಸಿ ನಿಗಮ ನೀಡಿರುವ ಆಹ್ವಾನವನ್ನು ತಿರಸ್ಕರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸ್ವಯಂ ಪ್ರೇರಿತ ಭವಿಷ್ಯ ನಿಧಿಯು ಸಾರಿಗೆ ನೌಕರರಿಗೆ ಅನುಕೂಲವಾಗಲಿದ್ದು, ಇದು ನೌಕರರಿಗೆ ಅನ್ವಯವಾಗುವಂತೆ ಮಾಡಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ. ಮೇಲಧಿಕಾರಿಗಳಷ್ಟೇ ಈ ಸೌಲಭ್ಯ ಪಡೆಯುತ್ತಿರುವುದಾಗಿ ಆರೋಪವೂ ಕೇಳಿ ಬಂದಿದೆ.

error: Content is protected !!