ದಾವಣಗೆರೆ, ಏ.8- ದರೋಡೆಗೆ ಹೊಂಚು ಹಾಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ 6 ಮಂದಿ ದರೋಡೆಕೋರರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ, ತಲಾ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮಹಂತೇಶ, ತಿಲಕ್ ಕುಮಾರ್, ವೆಂಕಟೇಶ, ಉಮೇಶ, ಸಚ್ಚಿನ್ ಹಾಗೂ ಶರಣಪ್ಪ ಶಿಕ್ಷೆಗೆ ಗುರಿ ಯಾದ ದರೋಡೆಕೋರರು. ಸೆಪ್ಟೆಂಬರ್ 16, 2016 ರಂದು ಬೆಳಗಿನ ಜಾವ 2-30ರ ಸಮಯಕ್ಕೆ ತಾಲ್ಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಿಗನೂರು ಅಡ್ಡ ರಸ್ತೆಯ ಕಲ್ಲೇಶಪ್ಪ ಎಂಬುವರ ಮನೆಯ ದಾವಣಗೆರೆ-ಚನ್ನಗಿರಿ ರಸ್ತೆಯಲ್ಲಿ ಆರೋಪಿ ತರಾದ ರಂಗ, ಮಹಂತೇಶ, ತಿಲಕ್ ಕುಮಾರ್, ವೆಂಕಟೇಶ, ಉಮೇಶ, ಸಚ್ಚಿನ್ ಹಾಗೂ ಶರಣಪ್ಪ ಇವರುಗಳು ಕಾರು ಹಾಗೂ ಬೈಕಿನಲ್ಲಿ ಬಂದು 5 ಜೊತೆ ಹ್ಯಾಂಡ್ ಗೌಸ್, ಒಂದು ಮಚ್ಚು, 3 ಕಬ್ಬಿಣದ ರಾಡು, 3 ದೊಣ್ಣೆಗಳು, 1 ಖಾಕಿ ಪ್ಲಾಸ್ಟರ್, 2 ಚಿಕ್ಕ ಪ್ಲಾಸ್ಟಿಕ್ ಕವರ್ನಲ್ಲಿ ಖಾರದ ಪುಡಿ, 4 ಹಗ್ಗದ ತುಂಡುಗಳು, 5 ಮಂಕಿ ಕ್ಯಾಪ್ಗಳನ್ನು ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು.
ಈ ವೇಳೆ ಹದಡಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಕೆ.ಎನ್. ರವೀಶ್ ಹಾಗೂ ಸಿಬ್ಬಂದಿ ತಂಡ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದರು. ದಾಳಿ ವೇಳೆ ಆರೋಪಿತ ರಂಗ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಎಎಸ್ಐ ರೇವಣಸಿದ್ದಪ್ಪ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಾಗಿದ್ದು, ನ್ಯಾಯಾಧೀಶ ಕೆಂಗಬಾಲಯ್ಯ ಆರೋಪಿತರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿದ್ದು, ದಂಡ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ವರ್ಷ ಸಾದಾ ಸಜೆ ಹಾಗೂ 7 ವರ್ಷಗಳ ಕಠಿಣ ಸಜೆ ಮತ್ತು ತಲಾ 5 ಸಾವಿರ ದಂಡ ವಿಧಿಸಿದ್ದು, ದಂಡ ಕೊಡಲು ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ ವಿಧಿಸಿ, ಎಲ್ಲಾ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಮತ್ತು ದಂಡದ ಮೊತ್ತವನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ಸೆಟ್ ಆಫ್ ಮಾಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.