ದಾವಣಗೆರೆ, ಏ.8- ಜಮೀನು ವಿಚಾರವಾಗಿ ಜಮೀನಿನ ಮಾಲೀಕನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದಲ್ಲದೇ, ಸಾವಿಗೆ ಕಾರಣನಾದ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ತಾಲ್ಲೂಕಿನ ಶಿರಗಾನಹಳ್ಳಿ ಗ್ರಾಮದ ಕುಬೇರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. ಕನಗೊಂಡನಹಳ್ಳಿ ಗ್ರಾಮದಲ್ಲಿ 4.8 ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಸಿದ್ದಪ್ಪ ಹಾಗೂ ಶಿರಗಾನಹಳ್ಳಿ ಗ್ರಾಮದ ಶಿವಪ್ಪ ಮಧ್ಯೆ ವಿವಾದವಿದ್ದು, ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ನಡೆಯುತ್ತಿತ್ತು.
ಜಮೀನು ಮಾಲೀಕ ಸಿದ್ದಪ್ಪ, ಹೆಂಡತಿ ಮತ್ತು ಮಕ್ಕಳು ಜ.28, 2016 ರಂದು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಶಿರಗಾನಹಳ್ಳಿ ಗ್ರಾಮದ ಶಿವಪ್ಪ ಮತ್ತು ಇತರೆ 11 ಜನರು ಗುಂಪಾಗಿ ಬಂದು ಜಗಳ ಮಾಡಿದ್ದರು. ಇದರಲ್ಲಿ ಕುಬೇರಪ್ಪ ಎಂಬಾತ ಕೊಡಲಿಯಿಂದ ಸಿದ್ದಪ್ಪನ ಮಗ ಕಾಂತರಾಜನ ಮೇಲೆ ದಾಳಿ ಮಾಡಿ, ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಳಿಸಿ, ಕೊಲೆಗೆ ಪ್ರಯತ್ನಿಸಿದ್ದನು.
ಸಿದ್ದಪ್ಪ, ಹೆಂಡತಿ ಮತ್ತು ಮಕ್ಕಳನ್ನು ಇತರೆ ಆರೋಪಿಗಳು ಎಳೆದಾಡಿ, ಹಲ್ಲೆ ಮಾಡಿದ್ದರು.
ಈ ಬಗ್ಗೆ ಜಮೀನು ಮಾಲೀಕ ಸಿದ್ದಪ್ಪನ ಪತ್ನಿ ವಿಶಾಲಾಕ್ಷಮ್ಮ ಹದಡಿ ಪೊಲೀಸ್ ಠಾಣೆಯಲ್ಲಿ 12 ಜನ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಪಿಎಸ್ಐ ಕೆ.ಎನ್. ರವೀಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕಾಲಕ್ಕೆ ಗಾಯಾಳು ಕಾಂತರಾಜ್ ಮರಣ ಹೊಂದಿದ್ದರು. ಆರೋಪಿ ಕುಬೇರಪ್ಪನ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರ ಸಮೇತ ಸಾಬೀತಾದ ಹಿನ್ನೆಲೆಯಲ್ಲಿ ಈತನಿಗೆ ಶಿಕ್ಷೆ ವಿಧಿಸಿದ್ದು, ಉಳಿದ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ. ಗೀತಾ ತೀರ್ಪು ನೀಡಿ, ಆದೇಶ ಹೊರಡಿಸಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.