ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಡಾ.ಎಂ.ಕೆ. ರಮೇಶ್ ಅವರು ಗೌರವ ಡಾಕ್ಟರೇಟ್ ಪಡೆದುಕೊಂಡರು.
ದಾವಣಗೆರೆ ವಿ.ವಿ.ಯ 8ನೇ ಘಟಿಕೋತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಏ. 8 – ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಪದವಿ, ಪದಕ, ಎಂ.ಫಿಲ್ ಹಾಗೂ ಪಿಹೆಚ್.ಡಿ.ಗಳನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಡಾ.ಎಂ.ಕೆ. ರಮೇಶ್ ಅವರು ಗೌರವ ಡಾಕ್ಟರೇಟ್ ಪಡೆದುಕೊಂಡರು.
ಗೌರವ ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಸಾಮಾಜಿಕ, ಶೈಕ್ಷಣಿಕ, ಔದ್ಯಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ದಾವಣಗೆರೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷ ತಂದಿದೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಕೇಂದ್ರದಿಂದ ಬರುವ ಅನುದಾನ ಹಾಗೂ ಯೋಜನೆ ತರುವುದೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡುತ್ತೇನೆ. ಜನಸೇವಕನಾಗಿ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್.ಎಸ್. ಅನಿತ ಅವರು ತಮಗೆ ಡಾಕ್ಟರೇಟ್ ನೀಡುವುದಾಗಿ ಹೇಳಿದಾಗ ಆಶ್ಚರ್ಯ ಹಾಗೂ ಸ್ವಲ್ಪ ಸಂಕೋಚವೂ ಆಯಿತು. ಸಾಮಾಜಿಕ, ಶೈಕ್ಷಣಿಕ ಸಾಧನೆ ಹಾಗೂ ನಾಲ್ಕು ಬಾರಿ ಸಂಸದರಾಗಿ ಪ್ರತಿಯೊಬ್ಬರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತೀರಿ. ಎಲ್ಲ ಅಧಿಕಾರಿಗಳ ಜೊತೆ ವಿಶ್ವಾಸದಿಂದ ಇರುತ್ತೀರಿ. ಎಲ್ಲರ ಒಡನಾಡಿಯಾಗಿ ದಾವಣಗೆರೆಗೆ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡುತ್ತಿರುವುದಾಗಿ ಅವರು ತಿಳಿಸಿದರು. ಆಗ ನಾನು ಒಂದಿಬ್ಬರು ಮಿತ್ರರ ಹತ್ತಿರ ಡಾಕ್ಟರೇಟ್ ತೆಗೆದುಕೊಳ್ಳಬೇಕೋ? ಬೇಡವೋ? ಎಂದು ವಿಚಾರಿಸಿದೆ. ಆಗ ಅವರು, ಯಾರಾರೋ ದುಡ್ಡು ಕೊಟ್ಟು, ಎಲ್ಲೆಲ್ಲೋ ಡಾಕ್ಟರೇಟ್ ಮಾಡಿಕೊಂಡು ಬರುತ್ತಾರೆ. ಇದು ರಾಜ್ಯಪಾಲರು ವಿಶ್ವವಿದ್ಯಾನಿಲಯದ ಮೂಲಕ ಕೊಡುವುದು. ದಯವಿಟ್ಟು ತೆಗೆದುಕೊಳ್ಳಿ ಎಂದರು ಎಂದು ಸಿದ್ದೇಶ್ವರ ಹೇಳಿದರು.
ಜಿಲ್ಲಾಧಿಕಾರಿ (ಮಹಾಂತೇಶ್ ಬೀಳಗಿ) ಹಾಗೂ ಪೊಲೀಸ್ ವರಿಷ್ಠಾಧಿಕಾರಿ (ಹನುಮಂತರಾಯ) ಅವರ ಬಳಿಯೂ ಈ ಬಗ್ಗೆ ಕೇಳಿದೆ. ಗೌರವಯುತವಾದ ಡಾಕ್ಟರೇಟ್ ತೆಗೆದುಕೊಳ್ಳಬೇಕು ಎಂದು ಅವರೂ ಸಲಹೆ ಕೊಟ್ಟರು. ಉಪಕುಲಪತಿಗಳ ಜೊತೆ ಚರ್ಚಿಸಿ, ಗೌರವ ಡಾಕ್ಟರೇಟ್ ಪಡೆಯಲು ನಿರ್ಧರಿಸಿದೆ ಎಂದವರು ಹೇಳಿದರು.
ಮೆದುಳು ರಕ್ತಸ್ರಾವ ಗೆದ್ದು ಪದಕ ಗಿಟ್ಟಿಸಿದ ನಿಸರ್ಗ
ಕೊರೊನಾ ಲಾಕ್ಡೌನ್ನಿಂದ ಶಿಕ್ಷಣಕ್ಕೆ ಹಿನ್ನಡೆಯಾಗಿದ್ದಷ್ಟೇ ಅಲ್ಲದೇ, ಮೆದುಳಿನಲ್ಲಿ ರಕ್ತಸ್ರಾವವಾಗಿ ಕೋಮಾಗೆ ತಲುಪಿದ್ದ ದಾವಣಗೆರೆಯ ವಿದ್ಯಾನಗರದ ಕೆ.ಪಿ. ನಿಸರ್ಗ, ನಂತರದ ಎರಡೇ ತಿಂಗಳಲ್ಲಿ ಪರೀಕ್ಷೆ ಎದುರಾದರೂ, ಎಂ.ಎ. ಇಂಗ್ಲಿಷ್ನಲ್ಲಿ ಮೊದಲಿಗರಾಗುವ ಸಾಧನೆ ಮಾಡಿದ್ದಾರೆ.
ತೀವ್ರ ಅನಾರೋಗ್ಯ ಸಮಸ್ಯೆಗೆ ಸಿಲುಕಿದ್ದ ನಿಸರ್ಗ, ಮೆದುಳಿನ ರಕ್ತಸ್ರಾವದಿಂದ 20 ದಿನ ಕೋಮಾದಲ್ಲಿದ್ದರು. ನಂತರ ಚೇತರಿಸಿಕೊಂಡ ಬೆನ್ನಲ್ಲೇ ಪರೀಕ್ಷೆ ಎದುರಾಯಿತು.
ಎರಡು ಪರೀಕ್ಷೆಯ ನಡುವಿನ ಅಂತರದಲ್ಲಿರುವ ಅವಧಿಯಲ್ಲಷ್ಟೇ ಓದಲು ಸಾಧ್ಯವಾಯಿತು ಎಂದು ಹೇಳಿರುವ ನಿಸರ್ಗ, ತಮ್ಮ ತಾಯಿ ಬಸಮ್ಮ ನೆರವಿನಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಯಿತು ಎಂದಿದ್ದಾರೆ.
ಇಷ್ಟೆಲ್ಲ ಕಷ್ಟಗಳ ನಡುವೆ ಎಂ.ಎ. ಇಂಗ್ಲಿಷ್ನಲ್ಲಿ ಮೊದಲಿಗರಾಗಿದ್ದಷ್ಟೇ ಅಲ್ಲದೇ, ಮೂರು ಪದಕಗಳನ್ನೂ ಅವರು ಪಡೆದುಕೊಂಡಿದ್ದಾರೆ.
ತಮ್ಮ ಯಶಸ್ಸಿನ ಹಿಂದೆ ತಂದೆ – ತಾಯಿಯರ ತ್ಯಾಗ, ಗುರು – ಹಿರಿಯರ ಆಶೀರ್ವಾದ ಇದೆ ಎಂದವರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಜೀವವೈವಿಧ್ಯತೆಯ ದಾಖಲೀಕರಣ
ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣವು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರುವುದಲ್ಲದೇ ಜೀವ ವೈವಿಧ್ಯ ತೆಯ ತಾಣವಾಗಿದೆ ಎಂದು ಕುಲಪತಿ ಪ್ರೊ. ಎಸ್.ವಿ. ಹಲಸೆ ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಏಳು ಸಾವಿರಕ್ಕೂ ಹೆಚ್ಚು ಮರ ಗಿಡಗಳಿವೆ. ಇಲ್ಲಿ 72ಕ್ಕೂ ಹೆಚ್ಚು ಹಕ್ಕಿಗಳು ಮತ್ತು 38 ಚಿಟ್ಟೆಗಳ ಪ್ರಭೇದಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಕನ್ನಡದ ಅನ್ನ, ಇಂಗ್ಲಿಷೂ ಚೆನ್ನ…
ಪದಕ ಪಡೆದು ಬೀಗುತ್ತಿರುವವರಿಗೆ ಸಾಧನೆಯ ಸಂಭ್ರಮ
ದಾವಣಗೆರೆ, ಏ. 8 – ಕನ್ನಡವೇ ನನಗಿಷ್ಟವಾಗಿದ್ದು ಕನ್ನಡವೂ ಅನ್ನದ – ಉದ್ಯೋಗದ ಭಾಷೆ ಎಂಬುದನ್ನು ಕಂಡುಕೊಳ್ಳುವ ಅಪೇಕ್ಷೆ ಒಬ್ಬರಿಗಾದರೆ, ಬಾಲ್ಯದಿಂದಲೇ ಅಚ್ಚುಮೆಚ್ಚಾದ ಇಂಗ್ಲಿಷ್ ಭಾಷೆಯನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಮುದವಾಗಿ ಕಲಿಸಿ ಅವರಲ್ಲಿ ಇರುವ ಕೀಳರಿಮೆ ನೀಗಿಸುವ ಕನಸು ಇನ್ನೊಬ್ಬರದು.
ಇವು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ರಾಂಕ್ ಹಾಗೂ ಪದಕ ಗಳಿಸಿದವರ ಮನದಾಳದ ಮಾತುಗಳು. ಲಾಕ್ಡೌನ್ ನಡುವೆ ವಾಟ್ಸ್ಅಪ್ ಗ್ರೂಪ್ನಲ್ಲೇ ಕಲಿತು ಈ ಬಾರಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವವರು ಪತ್ರಿಕೆಯೊಂದಿಗೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.
ರಾಣೇಬೆನ್ನೂರು ತಾಲ್ಲೂಕು ಹಿರೇಬಿದರಿಯ ದ್ಯಾವಪ್ಪ ಮತ್ತು ಮಾಂತಮ್ಮ ರೈತ ದಂಪತಿ ಮಗಳಾದ ವಿಜಯಲಕ್ಷ್ಮಿ ಬಾರ್ಕಿ ಕನ್ನಡ ಎಂ.ಎ.ದಲ್ಲಿ ಮೂರು ಪದಕ ಪಡೆದಿದ್ದಾರೆ. ಮನೆಯಲ್ಲಿ ಓದಿದವರಿಲ್ಲ, ಆದರೆ ಎಲ್ಲರೂ ನನ್ನ ಓದಿಗೆ ಪ್ರೋತ್ಸಾಹಿಸಿದ್ದಾರೆ ಎಂದು ಬಾರ್ಕಿ ಹೇಳಿದ್ದಾರೆ.
ಕನ್ನಡ ಇಷ್ಟಪಟ್ಟು ಕಲಿತಿದ್ದು, ಇದು ನನ್ನ ಪ್ರೀತಿಯ ವಿಷಯ. ಕನ್ನಡ ಉದ್ಯೋಗ – ಅನ್ನ ನೀಡಬಲ್ಲದು ಎಂಬ ಭರವಸೆ ಇದೆ. ಶಿಕ್ಷಕಿಯಾಗಲು ಈಗ ಸಿ.ಇ.ಟಿ. ಪರೀಕ್ಷೆ ಬರೆಯುತ್ತಿದ್ದೇನೆ ಎಂದವರು ಹೇಳಿದ್ದಾರೆ.
ದಾವಣಗೆರೆಯ ವಿದ್ಯಾನಗರದ ಕೆ.ಪಿ. ನಿಸರ್ಗ ಅವರಿಗೆ ಇಂಗ್ಲಿಷ್ ಬಾಲ್ಯದಿಂದಲೂ ಅಚ್ಚುಮೆಚ್ಚು. ಅದೇ ದಾರಿಯಲ್ಲಿ ಅವರು ಇಂಗ್ಲಿಷ್ ಎಂ.ಎ.ದಲ್ಲಿ ಮೂರು ಪದಕ ಪಡೆದಿದ್ದಾರೆ.
ಸಿವಿಲ್ ಗುತ್ತಿಗೆದಾರ ಪಂಚಾಕ್ಷರಿ ಹಾಗೂ ಬಸಮ್ಮ ಪುತ್ರಿಯಾಗಿರುವ ನಿಸರ್ಗ, ಗ್ರಾಮೀಣ ಮಕ್ಕಳಲ್ಲಿ ಇಂಗ್ಲಿಷ್ ಬಗ್ಗೆ ಇರುವ ಕೀಳರಿಮೆ ನಿವಾರಿಸಲು ಖಾಸಗಿ ಮಾದರಿ ಇಂಗ್ಲಿಷ್ ಶಾಲೆ ಸ್ಥಾಪಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ದಾವಣಗೆರೆ ತಾಲ್ಲೂಕಿನ ಚಟ್ಟೋಬನಹಳ್ಳಿಯ ಎಂ. ಮಂಜುನಾಥ್ ಅವರು, ರಜೆ ದಿನಗಳಲ್ಲಿ ಹೊಲ – ದನಗಳ ಚಾಕರಿ ಮಾಡುತ್ತಲೇ ಎಂ.ಎ. ಅರ್ಥಶಾಸ್ತ್ರದಲ್ಲಿ ಮೊದಲಿಗರಾಗಿದ್ದಾರೆ. ಕಾಲ್ನಡಿಗೆಯಲ್ಲೇ ವಿಶ್ವವಿದ್ಯಾನಿಲಯಕ್ಕೆ ಬರುತ್ತಿದ್ದ ಅವರು, ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹದಿಂದ ಲಾಕ್ಡೌನ್ನಲ್ಲಿ ವಾಟ್ಸ್ಅಪ್ ಗ್ರೂಪ್ನಲ್ಲಿ ಕಲಿತೆ. ಮುಂದೆ ಅಧ್ಯಾಪಕನಾಗುವ ಗುರಿ ಇದೆ ಎಂದಿದ್ದಾರೆ.
ದಾವಣಗೆರೆ ನಗರ ಎಲ್ಲಮ್ಮ ನಗರದ ವಿ. ಜ್ಯೋತಿ ಗುಪ್ತ, ಓದಿಗಿಂತ ಊರು ಸುತ್ತಾಟದಲ್ಲೇ ತೊಡಗಿದ್ದವರು. ಬಿ.ಎ.ದಲ್ಲಿ ಪ್ರಥಮ ರಾಂಕ್ ಬಂದಿದ್ದು ಅವರಿಗೇ ಅಚ್ಚರಿ ತಂದಿದೆ.
ಉತ್ತರ ಪ್ರದೇಶ ಮೂಲದ ತಂದೆ ವಿನೋದ್ ಕುಮಾರ್ ಗುಪ್ತ ಹಾಗೂ ರೀನಾ ಗುಪ್ತ ಮಗಳಾಗಿರುವ ಜ್ಯೋತಿ, ಪ್ರಸಕ್ತ ಇಂಗ್ಲಿಷ್ ಎಂ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಐಎಎಸ್ ಪರೀಕ್ಷೆಯ ಗುರಿ ಇದೆ. ಈ ಬಾರಿ ಅಲೆದಾಟಕ್ಕೆ ತಡೆ ಹಾಕಿ ಗಂಭೀರ ಅಧ್ಯಯನ ನಡೆಸುತ್ತೇನೆ ಎಂದವರು ಹೇಳಿದ್ದಾರೆ.
ಬಳೆ ಹೊತ್ತು ಊರೂರು ಸುತ್ತಿ ಮಾರಾಟ ನಡೆಸುವ ಹರಿಹರ ತಾಲ್ಲೂಕು ಭಾನುವಳ್ಳಿಯ ಎಸ್. ಮೆಹಬೂಬ್ ಸಾಬ್ ಅವರ ಮಗ ಹೈದರ್ ಅಲಿ, ರಾಜಕೀಯ ವಿಜ್ಞಾನ ಎಂ.ಎ.ದಲ್ಲಿ ಮೊದಲ ರಾಂಕ್ ಹಾಗೂ ಎರಡು ಬಂಗಾರದ ಪದಕಗಳನ್ನು ಪಡೆದಿದ್ದಾರೆ.
ದಾವಣಗೆರೆಯ ಪಿ.ಕೆ.ಸಿಂಧು ಅವರು ಬಡತನವನ್ನೇ ಸವಾಲಾಗಿ ಸ್ವೀಕರಿಸಿ, ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಎಂ.ಎಸ್.ಸಿ. ಭೌತಶಾಸ್ತ್ರದಲ್ಲಿ ಎರಡು ಪದಕ ಪಡೆದಿದ್ದಾರೆ. ಇದು ತಮ್ಮ ತಂದೆ – ತಾಯಿಯ ಆಸೆಯನ್ನು ಈಡೇರಿಸಿದ ದಿನ ಎಂದು ಸಿಂಧು ಹೇಳುವಾಗ, ಪಕ್ಕದಲ್ಲೇ ಇದ್ದ ತಾಯಿ ಮಂಜಳಾ ಅವರ ಕಣ್ಣಾಲೆಗಳು ಒದ್ದೆಯಾಗಿದ್ದವು.
ಇವತ್ತು ನನ್ನ ಜೀವನದ ಸಂತೋಷದ ವಿಷಯ. ನಾಲ್ಕು ಬಾರಿ ಲೋಕಸಭಾ ಸದಸ್ಯನಾಗಿ ಜನಸೇವೆ ಮಾಡಿದ್ದೇನೆ. ಮೂರು ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ಕೈಗಾರಿಕೆ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ತಂದಿದ್ದೇನೆ. ಈಗ ಡಾಕ್ಟರೇಟ್ ಮೂಲಕ ಇನ್ನೂ ಹೆಚ್ಚು ಜವಾಬ್ದಾರಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ, ಹಣ, ಆಸ್ತಿ, ದೇಹ ಬಲ ಇತ್ಯಾದಿಗಳನ್ನು ಗಳಿಸುವುದು ಯಶಸ್ಸಲ್ಲ. ಇನ್ನೊಬ್ಬರ ಹೃದಯದಲ್ಲಿ ನೆಲೆಗೊಳ್ಳುವುದು ದೊಡ್ಡ ಸಾಧನೆ ಎಂದರು.
ನಾವು ಪಡೆಯುವುದಕ್ಕಿಂತ ಬೇರೆಯವರಿಗೆ ಕೊಡುವುದು ಹೆಚ್ಚು ಸಂತೋಷ ತರುತ್ತದೆ. ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವುದು, ಅನ್ಯರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಹಾಗೂ ತನ್ನ ಕೆಳಗೆ ಕೆಲಸ ಮಾಡುವವರಿಗೆ ಉತ್ತೇಜನ ನೀಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕುಲಪತಿ ಪ್ರೊ. ಎಸ್. ವಿ. ಹಲಸೆ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲೇ ದಾವಣಗೆರೆ ವಿ.ವಿ. ಸುರಕ್ಷಾ ಮಾರ್ಗಸೂಚಿ ಪಾಲಿಸಿ ಮೊದಲು ಆನ್ಲೈನ್ ತರಗತಿಗಳನ್ನು ನಡೆಸಿ ನಂತರ ನಿಯಮಿತ ತರಗತಿ ನಡೆಸಿದೆ. ಪರೀಕ್ಷೆಯ ಎರಡೇ ಗಂಟೆಗಳಲ್ಲಿ ಫಲಿತಾಂಶ ನೀಡಿರುವುದು ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ಕೆ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪರೀಕ್ಷಾಂಗ ಕುಲಸಚಿವೆ ಪ್ರೊ. ಹೆಚ್.ಎಸ್. ಅನಿತ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಪದಕದ ದಾನಿಗಳು ಉಪಸ್ಥಿತರಿದ್ದರು.
ಭೂಮಿಕ ಎಸ್. ಹರಿಜನ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸ್ವಾಮಿ ಮತ್ತು ಅಶ್ವನಿ ಯಳ್ನಾಯಕ್ ನಿರೂಪಿಸಿದರು.