ದಾಖಲೆಗಳಿಲ್ಲದ 1.47 ಕೋಟಿ ವಶ

ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ದಾವಣಗೆರೆ, ಫೆ.5- ಇಲ್ಲಿನ ಸಂಚಾರ ಪೊಲೀಸರು ದಾಖಲೆಗಳಿಲ್ಲದ ಭಾರೀ ಮೊತ್ತದ ಹಣದ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 1.47  ಕೋಟಿ ರೂ. ನಗದು ವಶಪಡಿಸಿಕೊಂಡಿದ್ದು, ಮೂವರನ್ನು ಸೆರೆ ಹಿಡಿದಿದ್ದಾರೆ.

ಕಲಬುರಗಿ ವಾಸಿಗಳೆನ್ನಲಾದ ಶ್ರೀಕಾಂತ್, ಮಹೇಶ್ ಹಾಗೂ ಕಾರು ಚಾಲಕ ಬೀರಲಿಂಗ ಬಂಧಿತರು. ಬಂಧಿತರು ಅಕ್ರಮವಾಗಿ ಕಾರಿನಲ್ಲಿ ಕಲಬುರಗಿಯಿಂದ ದಾವಣಗೆರೆಗೆ ಭಾರೀ ಮೊತ್ತದ ಹಣವನ್ನು ಸಾಗಿಸುತ್ತಿದ್ದಾಗ ನಗರದ ಕೆ.ಆರ್. ರಸ್ತೆಯ ಶಾದಿ ಮಹಲ್‌ ಬಳಿ ಇಂದು ಸಂಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕರ್ತವ್ಯದಲ್ಲಿದ್ದ ಉತ್ತರ  ಸಂಚಾರಿ ಪೊಲೀಸರು ವಾಹನ ತಪಾಸಣೆ ಮತ್ತು ಐಎಂವಿ ಪ್ರಕರಣ ದಾಖಲಿಸುವಾಗ ಅನು ಮಾನಾಸ್ಪದವಾಗಿ ಕಂಡುಬಂದ ಈ ಕಾರನ್ನು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ 3 ಬ್ಯಾಗ್‌ ಗಳಲ್ಲಿ ಹಣ ಪತ್ತೆಯಾಗಿದೆ. ಸಿಕ್ಕ ಎಲ್ಲ ಹಣವು 500 ರೂ. ನೋಟುಗಳಾಗಿವೆ.

ಹಣದ ಬಗ್ಗೆ ದಾಖಲೆ ಕೇಳಿದಾಗ ಬಂಧಿತರು ಸರಿಯಾದ ಮಾಹಿತಿ ನೀಡಿಲ್ಲ. ಆಜಾದ್ ನಗರ ಪೊಲೀಸ್ ಠಾಣೆಗೆ ಕರೆ ತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಭಾರೀ ಮೊತ್ತದ ಹಣಕ್ಕೆ ದಾಖಲೆ ಇಲ್ಲದಿರುವ ಮತ್ತು ಹಣ ಸಾಗಿಸುವ ಬಗ್ಗೆ ಬಂಧಿತರು ಬಾಯಿ ಬಿಟ್ಟಿದ್ದಾರೆ.

ಸರಿಯಾದ ದಾಖಲೆಗಳು ಇಲ್ಲದ ಕಾರಣ ಮುಂದಿನ ಕ್ರಮಕ್ಕಾಗಿ ತೆರಿಗೆ ಇಲಾಖೆಗೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಡಿವೈಎಸ್ಪಿ ನಾಗೇಶ್ ಐತಾಳ್, ಪೊಲೀಸ್ ನಿರೀಕ್ಷಕರುಗಳಾದ ತಿಮ್ಮಣ್ಣ, ಗಜೇಂದ್ರಪ್ಪ, ಆಜಾದ್ ನಗರ ಠಾಣೆಯ ಪಿಎಸ್‌ಐ ಶೈಲಜಾ ಹಾಗೂ ಸಿಬ್ಬಂದಿಗಳು ಇದ್ದರು.

error: Content is protected !!