ಎಸ್.ಎನ್.ಸೇತೂರಾಂಗೆ ನಾಟಕ ಅಕಾಡೆಮಿ ಜೀವಮಾನದ ರಂಗ ಗೌರವ ಪ್ರಶಸ್ತಿ
ಬೆಂಗಳೂರು, ಫೆ. 5 – ನಟ, ನಾಟಕಕಾರ, ನಿರ್ದೇಶಕ ಎಸ್.ಎನ್.ಸೇತೂರಾಂ ಅವರು ಕರ್ನಾಟಕ ನಾಟಕ ಅಕಾಡೆಮಿಯ ಜೀವಮಾನದ ರಂಗ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ದಾವಣಗೆರೆಯ ಹಿರಿಯ ರಂಗ ಭೂಮಿ ಕಲಾವಿದರೂ, ಹಿರಿಯ ಕನ್ನಡಪರ ಹೋರಾಟಗಾರರೂ, ಹಿರಿಯ ಪತ್ರಕರ್ತರೂ ಆಗಿರುವ ಬಸವರಾಜ ಐರಣಿ ಸೇರಿದಂತೆ 25 ಸಾಧಕರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬರುವ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರವನ್ನು ಬೆಂಗಳೂರಿನ ಮಾ.ಭಾಸ್ಕರ ಪಡೆದುಕೊಂಡಿದ್ದಾರೆ. ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿಯನ್ನು ಕೊಪ್ಪಳದ ವೆಂಕಣ್ಣ ಕಾಮನೂರು, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿಯನ್ನು ಧಾರವಾಡದ ಅನ್ನಪೂರ್ಣ ಹೊಸಮನಿ ಪಡೆದುಕೊಂಡಿದ್ದಾರೆ. ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರವನ್ನು ಬೆಳಗಾವಿಯ ರಂಗಸಂಪದ ಪಡೆದುಕೊಂಡಿದೆ.
ಶ್ರೀಮತಿ ಮಾಲತಿಶ್ರೀ, ಮೈಸೂರು ದತ್ತಿನಿಧಿ ಪುರಸ್ಕಾರಕ್ಕೆ ಧಾರವಾಡದ ಸುನಂದಾ ಹೊಸಪೇಟೆ ಪಾತ್ರರಾಗಿದ್ದಾರೆ.
ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರರೆಂದರೆ : ಕಲಬುರ್ಗಿಯ ಸಂತೋಷ ಕುಮಾರ ಕುಸನೂರು, ರಾಯಚೂರಿನ ಎಂ.ಇಸ್ಮಾಯಿಲ್ ಸಾಬ್, ಕೊಪ್ಪಳದ ಭರಮಪ್ಪ ಜುಟ್ಲದ, ಬಳ್ಳಾರಿಯ ಮಾ.ಭ.ಸೋಮಣ್ಣ ಹಾಗೂ ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ವಿಜಯಪುರದ, ಗುರುಬಸಪ್ಪ ಕಲ್ಲಪ್ಪ ಸಜ್ಜನ, ಬಾಗಲಕೋಟೆಯ ಹಣಮವ್ವ ಗಾಜರ ಕುಳಲಿ ಹಾಗೂ ಪಿ. ಢಗಳಚಂದ್ರ ಪವಾರ, ಗದಗದ ಉಮಾದೇವಿ ಹಿರೇಮಠ, ಧಾರವಾಡದ ಬಸವರಾಜ ಕಡ್ಲೆಣ್ಣನವರ, ಚಿತ್ರದುರ್ಗದ ನೂರಜಹಾನ ಗೊರಜಿನಾಳ್, ಚಿಕ್ಕಮಗಳೂರಿನ ಮಹಾವೀರ ಜೈನ್, ಮೈಸೂರಿನ ಅಶ್ವತ್ಥ ಕದಂಬ, ಕೊಡಗಿನ ಎಂ.ಆರ್. ಚಂದ್ರಶೇಖರಯ್ಯ, ಮಂಡ್ಯದ ಧನ್ಯಕುಮಾರ, ಚಾಮರಾಜನಗರದ ವೆಂಕಟರಮಣಸ್ವಾಮಿ, ಉಡುಪಿಯ ಶ್ರೀನಿವಾಸ ಪ್ರಭು ಉಪ್ಪುಂದ, ಮಂಗಳೂರಿನ ರೋಹಿಣಿ ಜಗರಾಂ, ಬೆಂಗಳೂರು ಗ್ರಾಮಾಂತರದ ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ನಗರದ ವಿ.ಲಕ್ಷ್ಮೀಪತಿ, ಎಂ.ಎಸ್.ವಿದ್ಯಾ, ಬಿ.ಎನ್. ಮಂಜುಳಾ, ಗೀತಾ ಸುರತ್ಕಲ್, ಬಾಬು ಹಿರಣ್ಣಯ್ಯ.
ಐರಣಿ ಅವರಿಗೆ ಪ್ರಶಸ್ತಿ : ಬಾಮ ಅಭಿನಂದನೆ
ದಾವಣಗೆರೆ,ಫೆ.5-ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ರಂಗಭೂಮಿ ಕಲಾವಿದ ಬಸವರಾಜ ಐರಣಿ ಅವರನ್ನು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಅಭಿನಂದಿಸಿದ್ದಾರೆ.
ರಂಗಭೂಮಿ ಮಾತ್ರವಲ್ಲದೇ, ಪತ್ರಿಕಾ ಕ್ಷೇತ್ರದೊಂದಿಗೆ ನಾಡು – ನುಡಿಗಾಗಿ ಅನೇಕ ಹೋರಾಟಗಳನ್ನು ನಡೆಸುತ್ತಿರುವ ಐರಣಿ ಅವರು ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಅಕಾಡೆಮಿಯು ತಡವಾಗಿಯಾದರೂ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ ಎಂದು ಬಾ.ಮ. ತಿಳಿಸಿದ್ದಾರೆ.