ಪ್ರತಿಭಟಿಸಿ ಜನರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ
– ಅಜಯ್ ಕುಮಾರ್, ಪಾಲಿಕೆ ಮೇಯರ್
ದಾವಣಗೆರೆ, ಫೆ.5 – ಕಾನೂನಿನ ಚೌಕಟ್ಟಿನಲ್ಲಿ ಯಾರು ಎಲ್ಲಿ ಬೇಕಾದರೂ ವಾಸವಾಗಿರಲು ಪ್ರಜಾಪ್ರ ಭುತ್ವದಲ್ಲಿ ಹಕ್ಕಿದೆ. ಅದರಂತೆ ಶಾಸಕ ಆರ್.ಶಂಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ ದಾವಣಗೆರೆಯಲ್ಲಿ ವಾಸಿಸಲು ಬಯಸಿ, ಮನೆ ಮಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆಯ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತ ನಾಡಿದ ಅವರು, ಪ್ರತಿಯೊಂದನ್ನೂ ವಿರೋಧಿ ಸುವು ದೇ ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಮಾಧ್ಯಮಗಳಲ್ಲಿ ಗುರುತಿಸಿಕೊಳ್ಳಬೇಕೆಂಬ ಚಾಳಿ ಅವರದ್ದು. ಅಧಿಕಾರ ಸಿಗಲಿಲ್ಲವೆಂದು ಹತಾಷರಾಗಿ, ಅನಗತ್ಯವಾಗಿ ಪಾಲಿಕೆ ಒಳಗೆ ಪ್ರತಿಭಟಿಸಿ ಸಾರ್ವಜನಿಕರಿಗೆ, ಅಧಿಕಾರಿ ಗಳಿಗೆ ತೊಂದರೆ ಮಾಡುವುದು ಉಚಿತವಲ್ಲ.
ಬೇರೆಯವರ ಆಸೆಗೆ ಮುಳ್ಳಾಗಲಾರೆ : ಅಜಯ್
ಇನ್ನಷ್ಟು ದಿನ ಮೇಯರ್ ಆಗಿ ಸೇವೆ ಸಲ್ಲಿಸಬೇಕೆಂಬ ಆಸೆ ಇತ್ತು. ಮತ್ತೊಂದು ವರ್ಷ ಅವಕಾಶ ನೀಡುವಂತೆ ಪಕ್ಷದ ಮುಖಂಡರಲ್ಲಿ ಕೇಳಿಕೊಂಡಿದ್ದೆ. ಆದರೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಬೇರೆಯವರಿಗೂ ಅವಕಾಶ ನೀಡಬೇಕು. ಅವರ ಆಸೆಗೆ ಮುಳ್ಳಾಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತೇನೆ ಎಂದು ಅಜಯ್ ಕುಮಾರ್ ಹೇಳಿದರು.
ಹೆಸರು ಸೇರಿಸುವುದು, ಬಿಡುವುದು ಚುನಾವಣಾಧಿಕಾರಿಗಳ ಕೆಲಸ
ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಬಿಡುವುದು ಚುನಾವಣಾ ಅಧಿಕಾರಿಗಳಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ನಮ್ಮಗಳ ಹಸ್ತಕ್ಷೇಪ ಏನೂ ಇಲ್ಲ. ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಪಟ್ಟಿಯಲ್ಲಿ ಹೆಸರು ಸೇರಿಸುತ್ತಾರೆ. ಕಾಂಗ್ರೆಸ್ ಆರೋಪ ನೋಡಿದರೆ ಚುನಾವಣಾ ಆಯೋಗದ ಮೇಲೆಯೇ ಅವರಿಗೆ ನಂಬಿಕೆ ಇಲ್ಲ ಎನಿಸುತ್ತದೆ.
ಸಂಬಂಧವಿಲ್ಲದ ವರೂ ಬಂದು ಈ ರೀತಿ ಪ್ರತಿಭಟನೆ ನಡೆಸಿ ತೊಂದರೆ ನೀಡಿದರೆ, ಕ್ರಮ ತೆಗೆದುಕೊಳ್ಳಲಾಗು ವುದು. ಈ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಎಂ.ಎಲ್.ಸಿ. ಚಿದಾನಂದಗೌಡ ಅವರು, ಈ ಹಿಂದೆ ಮತ ಕೇಳಲು ಆಗಮಿಸಿದ್ದಾಗ, ತಾವು ಗೆದ್ದರೆ ದಾವಣಗೆರೆಯಲ್ಲಿ ಮನೆ ಮಾಡಿ, ಕರ್ತವ್ಯ ನಿರ್ವಹಿಸಿ, ಮತದಾರರ ಋಣ ತೀರಿಸುವುದಾಗಿ ಹೇಳಿದ್ದರು. ಅದರಂತೆ ಮನೆ ಮಾಡಿದ್ದಾರೆ. ಸಚಿವ ಶಂಕರ್ ಅವರ ಪುತ್ರ ಎಂಜಿನಿಯರಿಂಗ್ ಓದುತ್ತಿದ್ದರು. ಆ ಕಾರಣಕ್ಕಾಗಿ ಅವರು ಮನೆ ಮಾಡಿದ್ದಾರೆ ಎಂದು ವಿವರಿಸಿದರು.
ಯಾವುದೇ ಮತದಾರ ಒಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಾಗ, ಮತ್ತೊಂದು ಕಡೆ ಇದ್ದ ಹೆಸರು ಡಿಲೀಟ್ ಆಗುತ್ತದೆ. ಅಂತೆಯೇ ಈಗಾಗಲೇ ಆರ್. ಶಂಕರ್ ಅವರ ಹೆಸರು ರಾಣೇಬೆನ್ನೂರಿನಲ್ಲಿ ಡಿಲೀಟ್ ಆಗಿರುತ್ತದೆ. ಎರಡು ಕಡೆ ಹೆಸರಿದೆ ಎಂದು ಹೇಳುವ ಕಾಂಗ್ರೆಸ್ ಮುಖಂಡರು ಅರ್ಧ ಮಾಹಿತಿಯೊಂದಿಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಅವರು, ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಎಂ.ಎಲ್.ಸಿ.ಗಳ ಹೆಸರು ಸೇರಿಸುವ ಮೂಲಕ ಕಾನೂನಿನಲ್ಲಿ ಇಂತಹ ಅವಕಾಶ ಇದೆ ಎಂದು ತೋರಿಸಿಕೊಟ್ಟಿದ್ದೇ ಕಾಂಗ್ರೆಸ್ ಪಕ್ಷದವರು. ಈಗ ಅವರೇ ವಿರೋಧಿಸು ತ್ತಿರುವುದು ಸೂಕ್ತವಲ್ಲ ಎಂದರು.
ಕಾಂಗ್ರೆಸ್ ಪಕ್ಷದವರ ಬಳಿ ಯಾವುದೇ ಅಧಿಕೃತ ಪ್ರಮಾಣಿಕೃತ ದಾಖಲೆಗಳಿಲ್ಲ. ಹಳೆಯ ದಾಖಲೆ ಇಟ್ಟುಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಸೌಮ್ಯ ನರೇಂದ್ರ ಪವಾರ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಸೋಗಿ ಶಾಂತಕುಮಾರ್, ರೇಣುಕಾ ಶ್ರೀನಿವಾಸ್, ಯಶೋಧ, ಶಿಲ್ಪ ಜಯಪ್ರಕಾಶ್, ಗೌರಮ್ಮ ಗಿರೀಶ್, ಎಲ್.ಡಿ. ಗೋಣೆಪ್ಪ, ವೀರೇಶ್ ಪೈಲ್ವಾನ್ ಹಾಗೂ ಇತರರು ಉಪಸ್ಥಿತರಿದ್ದರು.