ದಾವಣಗೆರೆ, ಫೆ.4- ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪೌರ ಕಾರ್ಮಿಕರು ನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪೌರ ಕಾರ್ಮಿಕರು ಗೃಹ ಭಾಗ್ಯದಡಿ ಮನೆಗಳ ಹಂಚಿಕೆ ಪತ್ರ ಅಥವಾ ಹಕ್ಕುಪತ್ರಗಳನ್ನು ತಕ್ಷಣ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ನೂತನ ಕಾರ್ಯಾಧ್ಯಕ್ಷ ಬಿ.ಹೆಚ್. ವೀರಭ ದ್ರಪ್ಪ, ಪೌರ ಕಾರ್ಮಿಕರಿಗೆ ಗೃಹಭಾಗ್ಯದ ಹಕ್ಕುಪತ್ರವನ್ನು ತಕ್ಷಣ ಹಂಚಿಕೆ ಮಾಡ ಬೇಕು. 270 ಜನರಲ್ಲಿ 34 ಪೌರ ಕಾರ್ಮಿ ಕರನ್ನು ಮಾತ್ರ ಖಾಯಂಗೊಳಿಸಿ, ಉಳಿದ 236 ಜನರನ್ನು ನೇರ ನೇಮಕಾತಿ ಪೌರ ಕಾರ್ಮಿಕರಾಗಿ ಏಕಕಾಲದಲ್ಲಿ ಖಾಯಂಗೊ ಳಿಸಬೇಕು. ಆರು ತಿಂಗಳ ಸಂಬಳ ಇಲ್ಲದೇ ಕೆಲಸ ಮಾಡಿದ ಕೆಲಸಗಾರರನ್ನು ತಕ್ಷಣವೇ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ನೇರ ನೇಮಕಾತಿ ಪೌರ ಕಾರ್ಮಿಕರಿಗೆ ತಕ್ಷಣವೇ ಪಾಲಿಕೆಯಿಂದ ಮನೆಗಳನ್ನು ಕಟ್ಟಿ ಸಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಮಾತನಾಡಿ, ಹಿಂದೆ 89 ಜನರಿಂದ 6 ತಿಂಗಳು ಕೆಲಸ ಮಾಡಿಸಿಕೊಂಡು ಸಂಬಳವನ್ನೇ ಕೊಡದೇ ನಿಲ್ಲಿಸಲಾಗಿದೆ. ತಕ್ಷಣವೇ ಮಾನವೀಯ ದೃಷ್ಟಿಯಿಂದ ವೇತನ ನೀಡಿ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇನ್ನೂ ಹೆಚ್ಚು ಪೌರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಶೀಘ್ರವೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎನ್. ನೀಲಗಿರಿಯಪ್ಪ, ಎಲ್.ಡಿ.ಗೋಣೆಪ್ಪ, ಎಲ್.ಎಚ್.ಸಾಗರ್, ಬಿ.ಲೋಹಿತ್, ಎಂ.ಓಮೇಶ, ಬಿ.ಪರಶು ರಾಮ, ಎಚ್.ರವಿವರ್ಧನ್, ಶಿವಕುಮಾರ, ಮೂರ್ತಿ, ಎನ್.ಶಿವರಾಜ, ವೈ.ಪರಶು ರಾಮ, ರೇವಣಪ್ಪ, ಎಚ್.ವಸಂತ, ಎಂ.ನಾಗರಾಜ, ಹೇಮಲತಾ, ಮುತ್ತೂರಮ್ಮ, ಹೊನ್ನಮ್ಮ, ಸಾಕಮ್ಮ, ಆರ್. ಶೋಭಾ ಸೇರಿದಂತೆ ಇತರರು ಭಾಗವಹಿಸಿದ್ದರು.