ದಾವಣಗೆರೆ, ಜು.1- ಕಾಲೇಜುಗಳು ಆರಂಭಕ್ಕೂ ಮುನ್ನ ಸರ್ಕಾರ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವುದನ್ನು ಪ್ರಾರಂಭಿಸಿದೆ.
ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ. ಇಂದು ಕಾಲೇಜುಗಳಲ್ಲಿ ಒಟ್ಟು 2,266 ಹಾಗೂ ನಿನ್ನೆ ಬುಧವಾರ 2,325. ಒಟ್ಟು 4,591 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಡಾ. ಮೀನಾಕ್ಷಿ ಮಾಹಿತಿ ನೀಡಿದರು.
ಅಂತೆಯೇ ಇಂದು ನಗರದ ಎವಿಕೆ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳಿಗೆ, ಜಿಎಂಐಟಿ ಕಾಲೇಜಿನ 250 ಮಂದಿ ಫಾರ್ಮಸಿ ವಿದ್ಯಾರ್ಥಿಗಳಿಗೆ, ನೂತನ ಕಾಲೇಜಿನಲ್ಲಿ 250 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ.
ಕಾಲೇಜು ಆರಂಭಕ್ಕೂ ಮುನ್ನವೇ ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ಹಾಕಲು ಸರ್ಕಾರ ಸೂಚಿಸಿದ್ದು, ಪ್ರಥಮವಾಗಿ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 28 ಸರ್ಕಾರಿ ಪದವಿ ಕಾಲೇಜುಗಳಿವೆ. ಈ ಪೈಕಿ 17 ದಾವಣಗೆರೆಯಲ್ಲಿದ್ದು, ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಯುಬಿಡಿಟಿ ಸೇರಿದಂತೆ ಡಿಗ್ರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಿದೆ. ದಾವಣಗೆರೆ ನಗರ ಮತ್ತು ತಾಲ್ಲೂಕಿನಲ್ಲಿನ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಾಳೆ, ನಾಡಿದ್ದು ಸಹ ಲಸಿಕೆ ಕಾರ್ಯ ನಡೆಯಲಿದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಜನತಾವಾಣಿಗೆ ತಿಳಿಸಿದರು.
ಹರಿಹರದಲ್ಲಿನ ನಾಲ್ಕು ಕಾಲೇಜುಗಳ ಪೈಕಿ ಮೂರು ಕಾಲೇಜುಗಳಲ್ಲಿ ಲಸಿಕೆ ಹಾಕಲಾಗಿದೆ. ಹೊನ್ನಾಳಿ ಹಾಗೂ ಜಗಳೂರಿನಲ್ಲಿನ ಎರಡು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಲಸಿಕೆ ಶಿಬಿರ ಮುಗಿದಿದೆ ಎಂದು ಹೇಳಿದರು.
ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಗಳು ಸೇರಿ 150 ರಿಂದ 200 ಮಂದಿಯುಳ್ಳ ಕಾಲೇಜುಗಳಲ್ಲಿ ಮೊದಲು ಲಸಿಕೆ ಹಾಕುವ ಕೆಲಸವಾಗುತ್ತಿದೆ. ಲಾಕ್ ಡೌನ್ ನಿಮಿತ್ತ ರಜಾ ದಿನ ಕಾರಣ ತಕ್ಷಣವೇ ವಿದ್ಯಾರ್ಥಿಗಳನ್ನು ಲಸಿಕೆ ಹಾಕಿಸಿಕೊಳ್ಳಲು ಕಾಲೇಜಿಗೆ ಕರೆಸಲು ಸಾಧ್ಯವಾಗುತ್ತಿಲ್ಲ. ಕಾಲೇಜಿನವರು ವಿದ್ಯಾರ್ಥಿಗಳನ್ನು ಕರೆಸಲು ಕನಿಷ್ಠ ಎರಡು ದಿನಗಳ ಕಾಲಾವಕಾಶ ಬೇಕೆನ್ನುತ್ತಿದ್ದಾರೆ. ಸದ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆಯುಳ್ಳ ಕಾಲೇಜುಗಳಲ್ಲಿ ಬಾಕಿ ಇರುವ ವಿದ್ಯಾರ್ಥಿಗಳಿಗೆ ಲಸಿಕೆ ಆಧಾರದ ಮೇರೆಗೆ ಪುನಃ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿರುವ ಕಾರಣ ಸಾರ್ವಜನಿಕವಾಗಿ ಕಳೆದ ಎರಡು ದಿನಗಳಿಂದ ಮೊದಲ ಹಂತದ ಲಸಿಕೆ ನಿಲ್ಲಿಸಲಾಗಿದ್ದು, ಎರಡನೇ ಲಸಿಕೆ ಮಾತ್ರ ಹಾಕಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ತಲಾ 100ರಷ್ಟು ಲಸಿಕೆ ನೀಡಲಾಗುತ್ತಿದೆ ಎಂದರು.