ಪತ್ರಿಕೆಗಳಿಂದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರ

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅಭಿಮತ

ದಾವಣಗೆರೆ, ಜು.1- ಪತ್ರಿಕೆಗಳು ನಮ್ಮ ಜೀವನದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪತ್ರಿಕೆಗಳು ನಾವೀನ್ಯತೆಯೊಂದಿಗೆ ವಿನೂತನವಾಗಿ ಹೊಸ ಹೊಸ ವಿಷಯಗಳೊಂದಿಗೆ ಬರಲಿ ಎಂದು ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಲಕ್ಷ್ಮಿ ವೃತ್ತದಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ವನ್ನು ಪರಿಸರ ರಕ್ಷಿಸಿ ಎಂದು ಗಿಡಕ್ಕೆ ನೀರು ಹಾಕುವ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕತೆ ಬದಲಾದ ಸಂದರ್ಭದಲ್ಲಿ ಮೊಬೈಲ್, ಟಿವಿ ಮೂಲಕ ಬಹಳ ವೇಗವಾಗಿ ಸುದ್ದಿಗಳು ತಲುಪುತ್ತವೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಟಿವಿ, ಮೊಬೈಲ್ ಬಂದ ಮೇಲೆ ಪತ್ರಿಕೆಗಳನ್ನು  ಓದುವ  ಹವ್ಯಾಸ ಕಡಿಮೆಯಾಗಿದೆ. ಪತ್ರಿಕೆಗಳ ಮಹತ್ವ ಯಾವತ್ತು ಕಡಿಮೆ ಯಾಗುವುದಿಲ್ಲ. ಅದರ ಬೆಲೆ ಜನರಿಗೆ ಗೊತ್ತಾಗುತ್ತಿಲ್ಲ. ಪತ್ರಿಕೆಗಳು ಬರೀ ಮನರಂಜನೆ, ವಿಷಯ ಸಂಗ್ರಹಣೆಗಾಗಿ ಅಲ್ಲ. ನಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜ್ಞಾನಾರ್ಜನೆಗಾಗಿ ಪತ್ರಿಕೆಗಳನ್ನು ಓದಬೇಕು. ಮಕ್ಕಳು, ಯುವ ಪೀಳಿಗೆಗೆ ಪತ್ರಿಕೆಗಳನ್ನು ಓದಲು ಪ್ರೋತ್ಸಾಹ ಕೊಡಬೇಕು ಎಂದು ಅವರು ಕರೆ ನೀಡಿದರು.

ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆ ಗಳು ಬಹಳ ಮಹತ್ವದ ಪಾತ್ರ ವಹಿಸಿದ್ದವು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಲು, ಜನರಲ್ಲಿ ಹೋರಾಟದ ಕಿಚ್ಚನ್ನು ಹಚ್ಚುವಲ್ಲಿ ಪತ್ರಿಕೆಗಳು ಬಹಳ ಮಹತ್ವದ ಪಾತ್ರ ವಹಿಸಿದ್ದವು ಎಂದು ಅವರು ಇತಿಹಾಸವನ್ನು ಮಾರ್ಮಿಕವಾಗಿ ವಿವರಿಸಿದರು. 

ಕರ್ನಾಟಕದ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇ ಕರ್ ಮಂಜಪ್ಪ ಅವರು ದಾವಣಗೆರೆಯಲ್ಲಿ `ಧನುರ್ಧಾರಿ’ ಎಂಬ ಪತ್ರಿಕೆ ಆರಂಭಿಸಿದ್ದರು. ಲಕ್ಷ್ಮಿ ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್,  ಪತ್ರಕರ್ತರಿಗೆ ಸಂಕಷ್ಟದಲ್ಲಿ ಸಹಾಯವಾಗಲು ಮಹಾನಗರ ಪಾಲಿಕೆಯಿಂದ 10 ಲಕ್ಷ ರೂ. ಗಳ ನಿಧಿಯನ್ನು ಬಜೆಟ್‍ನಲ್ಲಿ ಇರಿಸಲಾಗಿದೆ. ಪತ್ರಿಕಾ ಭವನ ನಿರ್ಮಾಣಕ್ಕೂ ಧನ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ,  ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ ಎಂ.ಬಾವಿ, 1841ರಲ್ಲಿ ನಮ್ಮ ಕರ್ನಾಟಕಕ್ಕೆ ಮುದ್ರಣ ಯಂತ್ರ ಬಂದಿತ್ತು. ಹೆರ್ಮನ್‌ ಮೋಗ್ಲಿಂಗ್‌ ಎಂಬುವವರು `ಮಂಗಳೂರು ಸಮಾಚಾರ’ ಎಂಬ ಪತ್ರಿಕೆಯನ್ನು ಜುಲೈ 1, 1843ರಲ್ಲಿ ಪ್ರಥಮವಾಗಿ ಆರಂಭಿಸಿದರು. ಕನ್ನಡದ ಮೊದಲ ದಿನಪತ್ರಿಕೆ ಆರಂಭವಾಯಿತು. ಅದರ ನೆನಪಿಗಾಗಿ ಇಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.  

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಬ್ಲಿಕ್ ಟಿವಿ ವರದಿಗಾರ ಪುನೀತ್ ಅಪ್ತಿ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಿರಿಯ ಪತ್ರಕರ್ತರುಗಳಾದ ಬಾ.ಮ. ಬಸವರಾಜಯ್ಯ, ಹೆಚ್.ಬಿ.ಮಂಜುನಾಥ್, ವಿ. ಬಸವರಾಜಯ್ಯ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಆರಂಭದಲ್ಲಿ ವಾರ್ತಾ ಇಲಾಖೆಯ ಬಿ.ಎಸ್. ಬಸವರಾಜ್ ಅವರ ಪ್ರಾರ್ಥನೆಯ ನಂತರ ಸಂಘದ ಉಪಾಧ್ಯಕ್ಷ ಹೆಚ್.ಎಂ.ಪಿ. ಕುಮಾರ್ ಸ್ವಾಗತಿಸಿದರು. ಖಜಾಂಚಿ ಮಂಜಪ್ಪ ಮಾಗನೂರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

ಸಂಘದ ನಿರ್ದೇಶಕರುಗಳಾದ ವಿವೇಕಾನಂದ ಬದ್ದಿ, ಸತೀಶ ಮಡಿವಾಳರ, ಜಿ.ಎಸ್.ವೀರೇಶ, ಸತೀಶ, ವಿ.ಅನಿಲ್ ಕುಮಾರ, ಆರ್. ಎಸ್. ತಿಪ್ಪೇಸ್ವಾಮಿ, ಅಣ್ಣೇಶ, ಚನ್ನವೀರಯ್ಯ ಚನ್ನಬಸವ ಶೀಲವಂತ್, ವಿಜಯ ಕುಮಾರ ಜೈನ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!