ದಾವಣಗೆರೆ, ಜೂ.30 – ನಗರದ ಎಸ್. ಎಸ್. ನಾರಾಯಣ ಹಾರ್ಟ್ ಸೆಂಟರ್ ಆವರಣದಲ್ಲಿ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಲಾಗಿದೆ.
ಮಿನಿಮಲ್ ಇನ್‍ವೇಸಿವ್ ಕಾರ್ಡಿಯಾಕ್ ಸರ್ಜರಿ ಅಥವಾ ಕೀ ಹೋಲ್ ಹೃದಯ ಶಸ್ತ್ರಚಿಕಿತ್ಸೆ ಹೃದಯ ರೋಗಗಳಿಗೆ ಚಿಕಿತ್ಸೆ ನೀಡುವ ವಿನೂತನ ಅನುಶೋಧನೆಯಾಗಿದೆ. ಇದಕ್ಕಾಗಿಯೇ ವಿಶೇಷ ವಿಭಾಗವನ್ನು ತೆರೆಯಲಾಗಿದ್ದು, ಇದು ಅತ್ಯಾಧುನಿಕ ಹಾಗೂ ತೀರಾ ಅತ್ಯುನ್ನತ ಸಲಕರಣೆಗಳು ಮತ್ತು ವ್ಯಾಪಕ ಅನುಭವ ಇರುವ ತಂಡವನ್ನು ಒಳಗೊಂಡಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆ ಹೃದ್ರೋಗ ಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಯೋಜನಕಾರಿ. ಕೆಲ ಬಗೆಯ ಹೃದ್ರೋಗಗಳಿಗೆ ಕನಿಷ್ಠ ಗಾಯದ ಶಸ್ತ್ರ ಚಿಕಿತ್ಸೆಯೇ ಸೂಕ್ತವಾಗಿದೆ. ಇಲ್ಲಿ ಶಸ್ತ್ರಚಿಕಿತ್ಸೆಯನ್ನು
ರೋಗಿಯ ದೇಹದಲ್ಲಿ ಸಣ್ಣ ಗಾತ್ರದ ರಂಧ್ರ ಮಾಡಲಾಗು ತ್ತದೆ (ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ ಮಾಡುವ ದೊಡ್ಡ ಪ್ರಮಾಣದ ಛೇದನ ಅಥವಾ ಗಾಯದ ಬದಲಾಗಿ). ಈ ಸಣ್ಣ ಗಾತ್ರದ ರಂಧ್ರಗಳನ್ನು ವಿಶೇಷ ಸರ್ಜಿಕಲ್ ಸಾಧನಗಳನ್ನು ಬಳಸಿಕೊಂಡು ಮಾಡಲಾಗುತ್ತದೆ.
ದಾವಣಗೆರೆ ತಂಡದಲ್ಲಿ ಇಂತಹ ಶಸ್ತ್ರಚಿಕಿತ್ಸೆಯನ್ನು ಹೃದ್ರೋಗ ಶಸ್ತ್ರಚಿಕಿತ್ಸಾ ಸಲಹಾ ತಜ್ಞ ಡಾ|| ಮುರಳೀಬಾಬು, ಡಾ|| ರವಿವರ್ಮ ಪಾಟೀಲ್, ಹೃದ್ರೋಗ ಅರಿವಳಿಕೆ ತಜ್ಞ ಡಾ|| ಪ್ರಶಾಂತ್ ಹಾಗೂ ಡಾ|| ಎಚ್. ಎಂ. ಸುಜಿತ್ ಅವರನ್ನೊಳಗೊಂಡ ತಂಡ ನಿರ್ವಹಿಸುತ್ತದೆ.
ಹೊಸ ಸೌಲಭ್ಯದ ಬಗ್ಗೆ ವಿವರ ನೀಡಿರುವ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ, ಭಾರತದಲ್ಲಿ ಕೇವಲ ದೊಡ್ಡ ನಗರಗಳಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಹೃದ್ರೋಗ ಹೆಚ್ಚುತ್ತಿದೆ. ಪ್ರತಿಯೊಂದು ಬಗೆಯ ಹೃದ್ರೋಗಗಳಿಗೂ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಬೇಕಾಗುವುದಿಲ್ಲ. ಈ ವಿಶೇಷ ಶಸ್ತ್ರ ಚಿಕಿತ್ಸಾ ವಿಧಾನದ ಮೂಲಕ ನಾರಾಯಣ ಹೆಲ್ತ್‍ನಲ್ಲಿರುವ ಕ್ಲಿನಿಕಲ್ ಪರಿಣತಿಯನ್ನು ನಗರಗಳಿಂದಾಚೆಗೂ ವಿಸ್ತರಿಸುತ್ತಿದ್ದೇವೆ. ಈ ವಿಶೇಷ ವಿಭಾಗವು ದಾವಣಗೆರೆ ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ದೊಡ್ಡ ನಗರಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುತ್ತದೆ ಎಂದು ತಿಳಿಸಿದ್ದಾರೆ.
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಸ್ಟೆರ್ನಂ (ಎದೆಯ ಎಲುಬು) ಕತ್ತರಿಸುವುದಿಲ್ಲ, ಕಡಿಮೆ ನೋವು, ರಕ್ತದ ಕಡಿಮೆ ಅಗತ್ಯತೆ, ಶೀಘ್ರ ಗುಣಮುಖ.
ಡಾ|| ದೇವಿಶೆಟ್ಟಿ ಅವರು ಆರಂಭಿಸಿದ ನಾರಾಯಣ ಹೆಲ್ತ್ ಗ್ರೂಪ್ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಾರ್ಯಾಚರಣೆಯಲ್ಲಿರುವ ಹಾಸಿಗೆ ಸಂಖ್ಯೆ ಆಧಾರದಲ್ಲಿ ಇಡೀ ದೇಶದಲ್ಲೇ ಎರಡನೇ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಮೊದಲ ಸೌಲಭ್ಯವನ್ನು ಎನ್‍ಎಚ್ ಹೆಲ್ತ್ ಸಿಟಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.