ಗುಳೇದ ಲಕ್ಕಮ್ಮ ದೇವಿ ದೇವಸ್ಥಾನ ಶೀಘ್ರ ಪೂರ್ಣ

ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಕಾರ್ಯಕ್ರಮದಲ್ಲಿ ಎಂ.ಪಿ. ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಫೆ.3- ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ಶಕ್ತಿ ದೇವತೆ, ಅಸಂಖ್ಯಾತ ಭಕ್ತರ ಆರಾಧ್ಯ ದೈವ ಗುಳೇದ ಲಕ್ಕಮ್ಮ ದೇವಿ ದೇವಸ್ಥಾನದ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂಬರುವ ಆಗಸ್ಟ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ದೇವಸ್ಥಾನ ಉದ್ಘಾಟನೆ ಹಾಗೂ ದೇವಿ ಮೂರ್ತಿ ಪ್ರತಿಷ್ಟಾಪಿಸಲಾಗುವುದು ಎಂದು ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷರೂ ಆದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. 

ಪ್ರತಿ ಎರಡು ವರ್ಷಕ್ಕೊಮ್ಮೆ ಹುಲಿಕಟ್ಟಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ಜರುಗುವ ಜಾತ್ರೋತ್ಸವ ಅಂಗವಾಗಿ ನಿನ್ನೆ ನಡೆದ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಲಕ್ಕಮ್ಮ ದೇವಿಯ ಬೆಳ್ಳಿ ವಿಗ್ರಹ ಮಾಡಿಸಬೇಕೆನ್ನುವುದು ಸಹೋದರ, ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ಕನಸಾಗಿತ್ತು. ರವೀಂದ್ರ ಅವರಿಗೆ ಸಂಬಂಧಿಸಿದ ಉಡುಗೊರೆಯ 8 ಕೆ.ಜಿ, ದೇವಿಗೆ ಸಂಬಂಧಿಸಿದ 3 ಕೆ.ಜಿ, ನಮ್ಮಿಂದ 3 ಕೆ.ಜಿ ಸೇರಿ ಒಟ್ಟು 14 ಕೆ.ಜಿ. ಬೆಳ್ಳಿಯ ದೇವಿಯ ವಿಗ್ರಹವನ್ನು ಪಶ್ಚಿಮ ಬಂಗಾಳದ ಕಲಾವಿದರಿಂದ ಸಿದ್ಧಗೊಳಿಸಲಾಗು ತ್ತಿದೆ ಎಂದು ಅವರು ಮಾಹಿತಿ ನೀಡಿದರು.

ದೇವಸ್ಥಾನವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಸದ್ಯ 40 ಲಕ್ಷ ರೂ. ವೆಚ್ಚವಾಗಿದೆ. ಶಾಸಕರ ಅನುದಾನ 10 ಲಕ್ಷ ರೂ. ಹೊರತುಪಡಿಸಿ ಎಂ.ಪಿ. ರವೀಂದ್ರ ವೈಯಕ್ತಿಕವಾಗಿ 35 ಲಕ್ಷ ರೂ. ದೇವಸ್ಥಾನಕ್ಕೆ ನೀಡಿದ್ದಾರೆ. ಎಂ.ಪಿ. ರವೀಂದ್ರ ಅವರ ಆರೋಗ್ಯ ಸಮಸ್ಯೆ ಮತ್ತು ಚುನಾವಣೆ ಅಂಗವಾಗಿ ದೇವಸ್ಥಾನ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಸದ್ಯ ಅಗತ್ಯವಿರುವ ಉಳಿದ ಹಣವನ್ನು ಗ್ರಾಮಸ್ಥರ ಸಹಕಾರದೊಂದಿಗೆ ನಾವು ಭರಿಸುವ ಮೂಲಕ ದೇವಸ್ಥಾನ ಕಾಮಗಾರಿ ಪೂರ್ಣ ಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ತಾಲ್ಲೂಕು ಪಂಚಾಯ್ತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ್ ಗಣೇಶ್, ಗೊಂಗಡಿ ನಾಗರಾಜ್, ಮುಖಂಡರಾದ ಎಚ್. ವಸಂತಪ್ಪ, ರಾಯದುರ್ಗದ ವಾಗೀಶ್, ಹೆಚ್.ಎಂ. ಕೊಟ್ರೇಶ್, ಬಣಕಾರ ಗಂಗಾಧರಪ್ಪ, ಟಿ. ಹೋಮ್ಯಪ್ಪ, ಹೊಳಿಯಪ್ಪ, ಗುರುವಪ್ಪ, ಕೆ. ಹಾಲೇಶ್, ಎನ್. ಶಿವಾನಂದಪ್ಪ, ಮಹಾದೇವಪ್ಪ, ಬಿ. ಕೃಷ್ಣಪ್ಪ, ಕುಂಬಾರ ಬಸವರಾಜ್, ಟಿ. ದುಶ್ಯಂತ್, ನಂದ್ಯಾಲ ಪ್ರಕಾಶ್, ಬಿ. ಸದ್ಯೋಜಾತಪ್ಪ, ಬಾರಿಕರ ತಿರುಕಪ್ಪ, ಹೆಚ್. ಹನುಮಂತಪ್ಪ, ಕವಿತಾ ಸುರೇಶ್, ಉಮಾಶಂಕರ್ ಇನ್ನಿತರರಿದ್ದರು.

error: Content is protected !!