ನಿರಂತರ ಅಧ್ಯಯನ ಶೀಲತೆಯಿಂದ ಉತ್ತಮ ಕವಿತೆಗಳ ರಚನೆ ಸಾಧ್ಯ

ದಾವಣಗೆರೆ, ಫೆ.3- ನಿರಂತರ ಅಧ್ಯಯನ ಶೀಲತೆಯಿಂದ ಉತ್ತಮ ಕವಿತೆಗಳ ರಚನೆ ಸಾಧ್ಯ ಎಂದು ಸಾಹಿತಿ, ಹಿರಿಯ ಪತ್ರಕರ್ತ ಬಾ.ಮ.  ಬಸವರಾಜಯ್ಯ ಪ್ರತಿಪಾದಿಸಿದರು.

ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಬುಧವಾರ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ `ಅಯೋಧ್ಯೆ ಯಲ್ಲಿ ರಾಮಮಂದಿರ-ಹೃದಯದಲ್ಲಿ ಶ್ರೀರಾಮ ಚಂದಿರ’ ವಿಷಯವಾಗಿ ಹಮ್ಮಿಕೊಂಡಿದ್ದ ಸ್ವರಚಿತ ಕವನ ವಾಚನ ಸ್ಪರ್ಧೆ ಉದ್ಘಾಟಿಸಿ, ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕನ್ನಡ ಪರಂಪರೆಯಲ್ಲಿ ಬರುವ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಪ್ರಗತಿಶೀಲ ಕನ್ನಡದ ಪ್ರಕಾರಗಳನ್ನು  ಓದಬೇಕು. ಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಸಾಂಸ್ಕೃತಿಕ ಹಾಗೂ ಜಾನಪದ ಅಧ್ಯಯನವೂ ಅತ್ಯಗತ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯಾವುದೇ ವಿಷಯದ ಅಧ್ಯಯನದ ವೇಳೆ ಸಹಾಯಕ್ಕಾಗಿ `ಗೂಗಲ್’ ಮೊರೆ ಹೋಗಲಾಗುತ್ತದೆ. ಅಲ್ಲಿ ಸಿಗುವ ಚಿಕ್ಕ ಮಾಹಿತಿಗೆ ನಮ್ಮ ಜ್ಞಾನ ಸೀಮಿತವಾಗುತ್ತದೆ. ಆದರೆ ಪುಸ್ತಕ ಓದುವ ಮೂಲಕ ಸಂಪಾದಿಸುವ ಜ್ಞಾನ ಅಮೂಲ್ಯವಾದದ್ದು. ಪುಸ್ತಕ ಓದಿದಾಗ ಸಮಗ್ರತೆ ಬರಲು ಸಾಧ್ಯ. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ವಿದ್ಯೆ ಮಸ್ತಕದ ವಿದ್ಯೆಯಾಗಬೇಕು ಎಂದು ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.

ರಾಮಾಯಣ, ಮಹಾಭಾರತದ ಕುರಿತು ಎಡಪಂಥೀಯರು, ಬುದ್ದಿ ಜೀವಿಗಳು, ವಿಚಾರವಾದಿಗಳು ಅವಹೇಳನ ಮಾಡುವುದು ನೋವಿನ ವಿಚಾರ.

– ರಘುನಂದನ್ ಭಟ್ ನರೂರ, 

ಮಹಾಕಾವ್ಯಗಳಲ್ಲಿರುವ ಸತ್ಯದ ಬಗ್ಗೆ ತಿಳಿ ಹೇಳಬೇಕು. ಎಡ ಪಂಥೀಯರನ್ನು ದೂರವಿಡದೆ, ವಸ್ತು ನಿಷ್ಟತೆಯನ್ನು ತಿಳಿಸಿಕೊಟ್ಟಲ್ಲಿ ಮತ್ತಷ್ಟು ರಾಷ್ಟ್ರೀಯ ಭಾವನೆ ಹೆಚ್ಚಲು ಸಾಧ್ಯ

– ಬಾ.ಮ. ಬಸವರಾಜಯ್ಯ

ಪ್ರಸ್ತುತ ಕವಿಗೋಷ್ಠಿಯಲ್ಲಿ ಶ್ರೀರಾಮನ ಕುರಿತು ಕವಿತೆ ರಚಿಸಲು ಹೇಳಿರುವುದರಿಂದ ರಾಮಾಯಣವನ್ನು ಎಷ್ಟು ಜನರು, ಯಾವ ಯಾವ ರೀತಿಯಲ್ಲಿ ಬರೆದಿದ್ದಾರೆ ಎಂಬುದನ್ನು ಅರಿಯಬೇಕು. ತುಳಸಿ ರಾಮಾಯಣ, ವಾಲ್ಮೀಕಿ ರಾಮಾಯಣ, ಹೆಳವನಕಟ್ಟೆ ಗಿರಿಯಮ್ಮ ರಚಿಸಿರುವ ಚಿತ್ರಪಟ ರಾಮಾಯಣ, ಕುವೆಂಪು ರಾಮಾಯಣ ದರ್ಶನಂ ಕುರಿತು ಓದಿದ್ದರೆ ಉತ್ತಮ ಕವಿತೆಗಳನ್ನು ರಚಿಸಲು ಸಾಧ್ಯವಿತ್ತು ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ,  ರಾಮಾಯಣ, ಮಹಾಭಾರತ, ವೇದಗಳನ್ನೊಳಗೊಂಡ ನಮ್ಮ ಸಾಹಿತ್ಯಕ್ಕೆ  ಜಗತ್ತಿನ ಬೇರಾವ ದೇಶದ ಸಾಹಿತ್ಯವೂ ಸರಿಸಾಟಿಯಾಗಲಾರದು ಎಂದು ಹೇಳಿದರು.

ಕಳೆದ ಐನೂರು ವರ್ಷಗಳಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಯಿತು. 2 ಲಕ್ಷಕ್ಕೂ ಅಧಿಕ ಜನರು ಪ್ರಾಣಾರ್ಪಣೆ ಮಾಡಿದ್ದಾರೆ. ಮಂದಿರ ನಿರ್ಮಾಣದ ಕನಸು ಈಗ ಸಾಕಾರಗೊಂಡಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಮೂಲಕ ಕೊಡುಗೆ ನೀಡಲು ಪರಿಷತ್ ಮುಂದಾಗಿದೆ. 13 ಜಿಲ್ಲೆಗಳಲ್ಲಿ ಕವಿಗೋಷ್ಠಿಗಳು ಯಶಸ್ವಿಯಾಗಿ ನಡೆದಿವೆ. ಶ್ರೀರಾಮನ ಹೆಸರಿನಲ್ಲಿ 1500ಕ್ಕೂ ಹೆಚ್ಚು ಕವಿತೆಗಳು ಸೃಷ್ಟಿಯಾಗಿವೆ ಎಂದರು.

ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ, ಶ್ರೀರಾಮ ಎಲ್ಲರಿಗೂ ಆದರ್ಶ ಪ್ರಾಯ. ಸ್ವತಃ ಭಗವಂತನಾದ ಶ್ರೀರಾಮ, ಮಾನವನ ಅವತಾರದಲ್ಲಿ ಭೂಮಿಗೆ ಬಂದು, ಆದರ್ಶ ಜೀವನವನ್ನು ಹೇಗೆ ನಡೆಸಬೇಕೆಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿದ್ದಾನೆ. ಹೀಗಾಗಿ ಅವನು ಮರ್ಯಾದ ಪುರುಷೋತ್ತಮ ಎಂದು ಹೇಳಿದರು.

ಶಿಕ್ಷಕ ಪಂಚಾಕ್ಷರಯ್ಯ ಸ್ವಾಗತಿಸಿದರು. ಪರಿಷತ್‌ನ ಜಿಲ್ಲಾ ಖಜಾಂಚಿ ಪ್ರಶಾಂತ್ ಕೋಲ್ಕುಂಟೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ವಂದಿಸಿದರು. 

error: Content is protected !!