ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ, ಪವಿತ್ರವಾದ ವಸ್ತು ಮತ್ತೊಂದಿಲ್ಲ

`ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ’ ಎಂಬ ಪ್ರೇರೇಪಣಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಪ್ರತಿಪಾದನೆ

ದಾವಣಗೆರೆ, ಫೆ.3- ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನ ಮತ್ತು ಪವಿತ್ರವಾದ ವಸ್ತು ಇನ್ನೊಂದಿಲ್ಲ. ಶ್ರದ್ಧೆಯುಳ್ಳ ಸತತ ಪರಿಶ್ರಮಿ ಮಾತ್ರ ಜ್ಞಾನವನ್ನು ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ಪ್ರತಿಪಾದಿಸಿದರು.

ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ, ಗುರುಬಸಮ್ಮ ವಿ. ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಿಳಾ ಘಟಕದ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ `ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ’ ಎಂಬ  ಪ್ರೇರೇಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆದಾಗ ಯಶಸ್ಸು ಪಡೆಯಲು ಸಾಧ್ಯ. ನರಕ ಮತ್ತು ಸ್ವರ್ಗ ಎರಡೂ ಹೊರಗಿಲ್ಲ, ಅವೆಲ್ಲಾ ನಮ್ಮ ಮನಸ್ಸಿನಲ್ಲಿವೆ. ನಮ್ಮ ಮನಸ್ಸು ಸ್ವಚ್ಛವಾಗಿಟ್ಟುಕೊಂಡಾಗ ಸ್ವರ್ಗ ತಾನೇ ತಾನಾಗಿ ಸೃಷ್ಟಿಯಾಗುತ್ತದೆ. ಜೀವನದಲ್ಲಿ ಸತತ ಪ್ರಯತ್ನದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿಗಳು ಕನಸು ಕಾಣಬೇಕು ಅದರಲ್ಲೂ ದೊಡ್ಡ ಕನಸುಗಳನ್ನು ಕಾಣುತ್ತಾ, ಅವುಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನ – ಆತ್ಮ ವಿಶ್ವಾಸದೊಂದಿಗೆ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಖಂಡಿತಾ ಸಿಕ್ಕೇ ಸಿಗುತ್ತದೆ ಎಂದು ಉದಾಹರಣೆಗಳೊಂದಿಗೆ  ಜಿಲ್ಲಾಧಿಕಾರಿಗಳು ತಿಳಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಶ್ರೀಮತಿ ವಿನುತ ರವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾದ ಶ್ರೀಮತಿ ಶಾಂತಕುಮಾರಿ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಮಂಜುಳಾ, ಡಿಡಿಪಿಐ ಪರಮೇಶ್ವರಪ್ಪ, ಉತ್ತರ ವಲಯ ಬಿಇಒ ಕೊಟ್ರೇಶ್‌ ಕೆ, ಸ್ಫೂರ್ತಿ ಭಾಷಣಕಾರರಾದ ಹಾಲೇಶ್‌ ಶ್ರೀವರ, ವಿಹಂಗಮ ಯೋಗ ಕೇಂದ್ರ ವಾರಣಾಸಿಯ ಸಂತ ಅನುರಾಗ್‌ದೇವ್‌, ಪಂಚತಂತ್ರ ಗುರುಕುಲಮ್‌ನ ಜಿ.ಬಿ. ಹರಗಿ ಅವರುಗಳು ಕೊರೊನಾ ಕಾರ್ಮೋಡದಲ್ಲಿ ಕಲಿಕೆಯಲ್ಲಿ ನಿರುತ್ಸಾಹಿಗಳಾಗಿದ್ದ ಹತ್ತನೇ ತರಗತಿ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಕಲಿಕೆಗೆ ಪ್ರೇರೇಪಿಸಿದರು.

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಸವರಾಜ್‌ ಬೆಳಗಾವಿ, ಕಾರ್ಯದರ್ಶಿ ಮನೋಹರ್‌ ಚಿಗಟೇರಿ, ಶ್ರೀಮತಿ ಪುಷ್ಪಾ ಗುಂಡಿ ಸಿದ್ದೇಶ್‌, ಶೃತಿ ಕಬ್ಬೂರು, ಶ್ರೀಮತಿ ಆರ್‌. ವಾಗ್ದೇವಿ, ಎಂ.ಟಿ. ಮಳಗಿ, ಶ್ರೀಮತಿ ವೀರಮ್ಮ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಎಸ್‌. ಸ್ವಾಗತಿಸಿದರು. ವಿದ್ಯಾರ್ಥಿ ಆಕಾಶ್‌ ವೈ.ಸಿ ಪ್ರಾರ್ಥಿಸಿದರು. ಶಿಕ್ಷಕಿ ಶಿವಲೀಲ ಕಾರ್ಯಕ್ರಮ ನಿರೂಪಿಸಿದರು. ಗುರುಬಸಮ್ಮ ವಿ. ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್‌. ನಿಂಗಪ್ಪ ವಂದಿಸಿದರು.

error: Content is protected !!