ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಮತ್ತೆ ವಾಮಮಾರ್ಗ

ಸಚಿವ ಆರ್.ಶಂಕರ್, ಎಂಎಲ್‌ಸಿ ಚಿದಾನಂದ ಗೌಡ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ ಆರೋಪ, ಪಾಲಿಕೆ ಆಯುಕ್ತರ ಕೊಠಡಿ ಬಳಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ದಾವಣಗೆರೆ, ಫೆ.3- ನಕಲಿ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸಚಿವ ಆರ್.ಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರ ಹೆಸರು ಸೇರಿಸಲು ಮುಂದಾಗಿರುವ ಬಿಜೆಪಿ ಮತ್ತೊಮ್ಮೆ ವಾಮ ಮಾರ್ಗದ ಮೂಲಕ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಬುಧವಾರ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡುತ್ತಾ, ಬರಲಿರುವ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದರು.

ಸಚಿವ ಆರ್.ಶಂಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಅವರು ದಾವಣಗೆರೆಯಲ್ಲಿ ವಾಸವಾಗಿರದೇ ಇದ್ದರೂ, ಇಲ್ಲಿನ ನಿವಾಸಿಗಳು ಎಂದು ಚುನಾವಣಾ ಅಧಿಕಾರಿಗಳು ಮತದಾರರ  ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮವಾಗಿ ಸೇರ್ಪಡೆಗೊಂಡಿದ್ದ ಮುಖಂಡರ ಹೆಸರುಗಳನ್ನು ತೆಗೆದುಹಾಕುವಂತೆ ಡಿಸೆಂಬರ್ 17 ರಂದು ಮತದಾರರ ನೋಂದಣಿ ಅಧಿಕಾರಿಗಳಿಗೆ ಮನವಿ ಮಾಡಿ ದ್ದೆವು. ಆದಾಗ್ಯೂ ಹೆಸರುಗಳು ಡಿಲೀಟ್ ಆಗಿಲ್ಲ ಎಂದರು.

ಈಗ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರ ಕಚೇರಿಗೆ ಮತದಾರರ ಪಟ್ಟಿ ಕಳುಹಿಸಿದ್ದಾರೆ. ನಾವು ಮತದಾರರ ಪಟ್ಟಿಯನ್ನು ಕೇಳಿದರೆ ಕಳೆದ ಮೂರು ದಿನಗಳಿಂದಲೂ ಅನಗತ್ಯವಾಗಿ ಸಬೂಬು ಹೇಳುತ್ತಾ ಅಲೆದಾಡಿಸುತ್ತಿದ್ದಾರೆ.  ಅಕ್ರಮವಾಗಿದ್ದರೆ ಕಾಂಗ್ರೆಸ್ ಮುಖಂಡರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಿ. ಆದರೆ ಬೇರೆ ಜಿಲ್ಲೆಯವರ ಹೆಸರನ್ನು ಇಲ್ಲಿ ಸೇರಿಸಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದರು.

ಬಿಜೆಪಿಯ ದುರ್ಮಾರ್ಗದ ಕುರಿತು ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡುತ್ತಾ, ಸಚಿವ ಆರ್.ಶಂಕರ್ ಇತ್ತೀಚೆಗಷ್ಟೇ ರಾಣೇಬೆನ್ನೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಅಲ್ಲಿನ ನಿವಾಸಿ ಎಂದು ಮತದಾನ ಮಾಡಿದ್ದಾರೆ. ಈಗ ದಾವಣಗೆರೆ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಂಕರ್ ಹೆಸರಿನಲ್ಲಿ ಜಯನಗರದಲ್ಲಿ ಬಾಡಿಗೆ ಮನೆ ಮಾಡಿ, ನಕಲಿ ದಾಖಲೆ ಸೃಷ್ಟಿಸಿ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲು ಬಿಜೆಪಿ ಮುಂದಾಗಿದೆ ಎಂದರು.

ತುಮಕೂರಿನಲ್ಲಿ ವಾಸವಾಗಿರುವ ಎಂಎಲ್‍ಸಿ ಚಿದಾನಂದಗೌಡರ ಹೆಸರಿನಲ್ಲಿ ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕಿಡಿಕಾರಿದರು.

ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್ ಮಾತನಾಡಿ, ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಚಮನ್ ಸಾಬ್, ಈ ರೀತಿ ಹೊರಗಿನಿಂದ ಎಂಎಲ್‌ಸಿಗಳನ್ನು ಕರೆತಂದು ಚುನಾವಣೆ ನಡೆಸುವುದಾದರೆ ಸ್ಥಳೀಯ ಜನಪ್ರತಿನಿಧಿಗಳೇಕೆ? ಎಂದು ಪ್ರಶ್ನಿಸಿದರು. ಮುಂದೊಂದು ದಿನ ಮುಖ್ಯಮಂತ್ರಿ ಯಡಿಯೂರಪ್ಪನವರೂ ಸಹ ಬಂದು ಮತದಾನ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ  ಗಡಿಗುಡಾಳ್ ಮಂಜುನಾಥ್, ಜೆ.ಎನ್.ಶ್ರೀನಿವಾಸ್, ಕಲ್ಲಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನಿ, ಉಮೇಶ್, ಕೆ.ಎಂ.ಮಂಜುನಾಥ, ಆರ್.ಹೆಚ್. ನಾಗಭೂಷಣ್, ಮಲ್ಲಿಕಾರ್ಜುನ್ ಇಂಗಳೇಶ್ವರ ಮತ್ತಿತರರು ಭಾಗವಹಿಸಿದ್ದರು.

ಮಾಧ್ಯಮದವರನ್ನು ಸಚಿವ ಶಂಕರ್ ನೀಡಿರುವ ವಿಳಾಸಕ್ಕೆ ಕರೆದೊಯ್ದು ಕಾಂಗ್ರೆಸ್ ಮುಖಂಡರು, ಮನೆಯಲ್ಲಿದ್ದ ಮಹಿಳೆಯನ್ನು ವಿಚಾರಿಸಲಾಗಿ,  ಶಂಕರ್ ಅವರು ಬಾಡಿಗೆಗೆ ಮನೆ ನೋಡಿಕೊಂಡು ಹೋಗಿದ್ದು,  ಕರಾರು ಪತ್ರ ಮಾಡಿಸಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.

error: Content is protected !!