ಕೊಟ್ಟೂರಿನಲ್ಲಿ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್
ಕೊಟ್ಟೂರು, ಏ.6- ಅನಾಥಾಶ್ರಮಗಳು ನಿರ್ಗತಿಕರ, ವಯೋವೃದ್ಧರ, ವಿಕಲಚೇತನರ ಆಶಾಕಿರಣಗಳಾಗಿವೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ಆಶ್ರಮಗಳನ್ನು ತೆರೆಯಬೇಕು ಎಂದು ಎಸ್.ಯು.ಎಸ್.ಜೆ.ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಪಟ್ಟಣದ ಉತ್ತಂಗಿ ಹರೇಮಠದ ರುದ್ರಮ್ಮ ಕೊಟ್ರಸ್ವಾಮಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥರನ್ನು ತನ್ನ ಮಕ್ಕಳಂತೆ ಪಾಲನೆ ಮಾಡುತ್ತಿರುವ ರುದ್ರಮ್ಮನವರಿಗೆ ಸನ್ಮಾನಿಸಿ ಹಣದ ಸಹಾಯ ಮಾಡಿ ಮಾತನಾಡಿ, ರುದ್ರಮ್ಮನಂತವರು ಊರಿಗೊಬ್ಬರಿದ್ದರೆ, ದುರ್ಬಲರ ಬದುಕಿನಲ್ಲಿ ಆಶಾಕಿರಣ ಮೂಡುತ್ತದೆ. ಸರ್ಕಾರದ ಸಹಾಯವಿಲ್ಲದೆ ಕೇವಲ ದಾನಿಗಳ ಸಹಾಯದಿಂದ ಅನಾಥಾಶ್ರಮ ನಡೆಸುತ್ತಿರುವುದು ಮಾದರಿಯಾಗಿದೆ. ತನ್ನ ಬಂಗಾರ ಮಾರಿ, ಅದೂ ಸಾಲದೆ
ಗಂಡನ ಪೆನ್ಷನ್ ಹಣದಿಂದ ಕಳೆದ 5 ವರ್ಷಗಳಿಂದ ಅನಾಥಾಶ್ರಮ ನಡೆಸಿಕೊಂಡು ಬರುತ್ತಿರುವುದು ನಿಸ್ವಾರ್ಥ.
75 ವರ್ಷ ವಯಸ್ಸಾಗಿದ್ದರೂ ಸ್ವತಃ ತಾವೇ ಅನಾಥರ ಸೇವೆ ಮಾಡುತ್ತಿರುವುದು ನಿಜವಾದ ಸೇವೆಯಾಗಿದೆ. ಇಂತವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ರಾಣೇಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಹೊಸಪೇಟೆ, ಕೋಗಳಿ, ಶೃಂಗಾರ ತೋಟ, ಸಂಡೂರು ಮುಂತಾದ ಊರುಗಳಿಂದ 20ಕ್ಕೂ ಹೆಚ್ಚು ಅನಾಥರು ಸೇವಾಶ್ರಮದಲ್ಲಿರುವುದ ರಿಂದ ಕೈಲಾದವರು ರುದ್ರಮ್ಮನವರಿಗೆ ಸಹಕಾರ ನೀಡಬೇಕು ಎಂದರು. ಮಠದ ನಟರಾಜ್, ಉಪನ್ಯಾಸಕ ಬೀರಾನಾಯ್ಕ ಸೇವಾಶ್ರಮಕ್ಕೆ ಭೇಟಿ ನೀಡಿದ್ದರು.