ಮಲೇಬೆನ್ನೂರಿನ ನೀರಾವರಿ ಕಛೇರಿ ಸ್ಥಳಾಂತರಕ್ಕೆ ಕೈ ಹಾಕಿದರೆ ಹೋರಾಟ

ಭದ್ರಾ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ

ಮಲೇಬೆನ್ನೂರು, ಫೆ.3- ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಹೇಳಿದರು.

ಇಲ್ಲಿನ ನೀರಾವರಿ ಕಛೇರಿ ಆವರಣದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಕೇಂದ್ರೀಕೃತವಾಗಿರುವ ಈ ಕಛೇರಿಯನ್ನು ಇಲ್ಲಿಯೇ ಉಳಿಸಬೇಕೆಂದು ಹೋರಾಟ ಮಾಡಲಾಗುವುದೆಂದರು.

ಬಸವಾಪಟ್ಟಣ ಉಪವಿಭಾಗದ ಕಛೇರಿ ಯನ್ನು ಸಾಸ್ವೆಹಳ್ಳಿ ಉಪವಿಭಾಗಕ್ಕೆ ಸೇರಿಸುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದ ಅವರು, ಇಂತಹ ಪ್ರಯತ್ನಗಳಿಂದ ಕೊನೆಯ ಭಾಗದ ರೈತರ ಜೊತೆ ಆಟವಾಡಿದಂತಾಗುತ್ತದೆ ಎಂದು ದೂರಿದರು. ಕಳೆದ ಸುಮಾರು 60 ವರ್ಷಗಳಿಂದ ಕಾರ್ಯನಿರ್ವ ಹಿಸಿಕೊಂಡು ಬಂದಿರುವ ಈ ಕಛೇರಿ 34,373 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇದರಲ್ಲಿ ಹೊನ್ನಾಳಿ ತಾಲ್ಲೂಕಿಗೆ 8842 ಹೆಕ್ಟೇರ್‌ ಮಾತ್ರ ಬರುತ್ತದೆ. ಅಚ್ಚುಕಟ್ಟಿನ ಕೊನೆ ಭಾಗದ 20-25 ಹಳ್ಳಿಗಳು ಈ ಕಛೇರಿ ವ್ಯಾಪ್ತಿಗೆ ಬರುತ್ತವೆ. ಮಲೇಬೆನ್ನೂರಿನಲ್ಲಿ ಈ ಕಛೇರಿ ಬಸವಾಪಟ್ಟಣ, ಸಾಸ್ವೆಹಳ್ಳಿ ಉಪವಿಭಾಗಗಳಿಗೆ ಹತ್ತಿರವಾಗಿದ್ದು, ಸ್ಥಳಾಂತರದಿಂದ ರೈತರಿಗೆ ತೀವ್ರ ತೊಂದರೆ ಆಗಲಿದೆ. ಕಛೇರಿ ಸ್ಥಳಾಂತರದ ಬಗ್ಗೆ ನೀರಾವರಿ ನಿಗಮದವರು ಯಾವುದೇ ಕಾರಣಕ್ಕೂ ಗಮನಹರಿಸಬಾರದು. ಒಂದು ವೇಳೆ ಸ್ಥಳಾಂತರಕ್ಕೆ ಕೈ ಹಾಕಿದರೆ ರೈತರ ಹೋರಾಟ ಅನಿವಾರ್ಯ ಎಂದು ವೈ. ದ್ಯಾವಪ್ಪ ರೆಡ್ಡಿ ತಿಳಿಸಿದರು.

ಎಪಿಎಂಸಿ ಸದಸ್ಯ ಜಿ. ಮಂಜುನಾಥ್‌ ಪಟೇಲ್ ಮಾತನಾಡಿ, ಭದ್ರಾ ನಾಲಾ ನಂ-3 ಈ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದಂತೆ ಶಾಸಕ ಎಸ್‌. ರಾಮಪ್ಪ ಅವರು ಬೆಂಗಳೂರಿನಲ್ಲಿ ನೀರಾವರಿ ಸಚಿವರನ್ನು ಹಾಗೂ ನೀರಾವರಿ ನಿಗಮದ ಎಂ.ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ರೈತರು ಈ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಕೆ.ಎನ್. ಹಳ್ಳಿಯ ಗುಬ್ಬಿ ರಂಗನಾಥ್‌, ಸಿರಿಗೆರೆಯ ತಿಪ್ಪೇರುದ್ರಪ್ಪ ಆರ್‌.ಟಿ. ಸೋಮಶೇಖರಪ್ಪ, ನಂದಿತಾವರೆ ಮುರಿಗೇಂದ್ರಯ್ಯ, ವಾಸನದ ವೀರನಗೌಡ್ರು, ಟಿ.ಎಸ್‌. ಮಂಜುನಾಥ್‌, ಯಲವಟ್ಟಿ ಅಂಜಿನಪ್ಪ, ಹಳ್ಳಿಹಾಳ್‌ ಮಲ್ಲನಗೌಡ, ಕೆ.ಎನ್‌ ಹಳ್ಳಿಯ ದಿವಾಕರಪ್ಪ, ಚಂದ್ರಶೇಖರಪ್ಪ, ಯಲವಟ್ಟಿ ಚನ್ನಬಸಪ್ಪ, ಜಿಗಳಿ ಜಯಣ್ಣ, ಬೂದಿಹಾಳ್‌ ಮಹೇಶ್ವರಪ್ಪ, ಕುಣೆಬೆಳಕೆರೆ ಹನುಮಂತಪ್ಪ, ಭಾನುವಳ್ಳಿ ಕರಿಯಪ್ಪ, ನಿಟ್ಟೂರು ಜಯಪ್ಪ ಇದ್ದರು.

error: Content is protected !!