ಬಜೆಟ್‌ನಲ್ಲಿ ಬಹು ದಿನಗಳ ಬೇಡಿಕೆಯತ್ತ ಗಮನ

ಮಹಾನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ

ದಾವಣಗೆರೆ, ಫೆ.2- ಮಹಾನಗರ ಪಾಲಿಕೆಯ 2021-22ನೇ ಸಾಲಿನ ಆಯವ್ಯಯ ಮಂಡನೆಗೆ ಸಲಹೆ-ಸೂಚನೆ ನೀಡಲು ಸಾರ್ವಜನಿಕರು, ಸಂಘ- ಸಂಸ್ಥೆಗಳ ಸಭೆಯು ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ಇದು ಎರಡನೇ ಸಭೆಯಾಗಿದ್ದು, ಶೀಘ್ರವೇ ಸರ್ವ ಸದಸ್ಯರ ಸಭೆ ಕರೆದು ಬಜೆಟ್ ಬಗ್ಗೆ ಚರ್ಚಿ ನಡೆಸಲಾಗುವುದು.  ಮಹಾಪೌರರು, ಸದಸ್ಯರ ತೀರ್ಮಾನದ ನಂತರ ಬಜೆಟ್ ಮಂಡನೆ ನಡೆಯಲಿದೆ. ಬಜೆಟ್ ನಲ್ಲಿ ಬಹು ದಿನಗಳ ಬೇಡಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ರವೀಂದ್ರನಾಥ್  ಬಡಾವಣೆ ಹಿತರಕ್ಷಣಾ ಸಮಿತಿಯ ಸಿದ್ಧರಾಮಪ್ಪ ಅವರು, ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗ ಳನ್ನು ಸ್ವಚ್ಛಗೊಳಿಸಿ, ದಂಡ ವಸೂಲಿ ಮಾಡುವ ಪ್ರಕ್ರಿಯೆ ತೀವ್ರಗೊಳಿಸಿ ಪಾಲಿಕೆಗೆ ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಪಾಲಿಕೆ ಆವರಣದಲ್ಲಿನ ಕ್ಯಾಂಟೀನ್ ಬಳಿ ಕಟ್ಟಡ ಕಟ್ಟಿ ಬಾಡಿಗೆ ಪಡೆಯಬಹುದು. ಬೆಳಿಗ್ಗೆಯೇ ಆವರಣದಲ್ಲಿ ಪಾರ್ಕ್ ಮಾಡುವ ವಾಹನಗಳಿಂದಲೂ ಹಣ ವಸೂಲಿ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಬಾವಿ, ಪಾಲಿಕೆ ವ್ಯಾಪ್ತಿಯ 45 ವಾರ್ಡ್‌ಗಳಲ್ಲೂ ವಾಚನಾಲಯ ಆರಂಭಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾ ಗಿದ್ದು, ಕಾರ್ಯರೂಪಕ್ಕೆ ತರಬೇಕು. ಈ ಮೂಲಕ ಜನರಿಗೂ, ಪತ್ರಿಕೆಗಳಿಗೂ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಬೆಂಗಳೂರು, ಶಿವಮೊಗ್ಗ ಮಾದರಿಯಂತೆ ನಗರದಲ್ಲೂ ಪಾಲಿಕೆ ವತಿಯಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಪಾಲಿಕೆ ಆವರಣದಲ್ಲಿ ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದ ವೇಳೆ ಉದ್ಘಾಟಿಸಲಾಗಿದ್ದ ಪತ್ರಕರ್ತರ ಭವನವನ್ನು ಪೌರ ಕಾರ್ಮಿಕರ ಸಂಘದಿಂದ ಬಿಡಿಸಿ ಕೊಡಬೇಕು.  ಪತ್ರಕರ್ತರ  ಭವನಕ್ಕೆ ಸೂಕ್ತ ನಿವೇಶನದ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಅಲ್ಲದೇ, ಕೆಟಿಜೆ ನಗರ 18ನೇ ಕ್ರಾಸ್‌ ರಸ್ತೆಗೆ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್. ಶಿವಣ್ಣ ಅವರ ಹೆಸರಿಡುವಂತೆ ಮನವಿ ಮಾಡಿ, ಮನವಿ ಪತ್ರವನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದರು.  ಆಯುಕ್ತರು  ಪಾಲಿಕೆ ಮೇಯರ್ ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ದಲಿತ ಸಂಘರ್ಷ ಸಮಿತಿ ಸ್ಲಂ ಘಟಕದ ಅಧ್ಯಕ್ಷ ನಾಗರಾಜ ಆನೆಕೊಡ ಮಾತನಾಡುತ್ತಾ, ಪಾಲಿಕೆಯಿಂದ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಾದ ಅನುದಾನದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನ ಮತ್ತಿತರೆ ಕೆಲಸಗಳಿಗೆ ಹೆಚ್ಚು ವಿನಿಯೋಗಿಸುವಂತೆ ಸಲಹೆ ನೀಡಿದರು. ಅಲ್ಲದೆ ಎಸ್ಸಿ-ಎಸ್ಟಿಗಳಿಗೆ ನೀಡುವ ಕಚ್ಚಾ ಹಾಗೂ ಪಕ್ಕಾ ಮನೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿದರು.

ಸ್ಲಂ ಜನಾಂದೋಲನ ಸಮಿತಿಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡುತ್ತಾ, ಬಜೆಟ್‌ನಲ್ಲಿ ಸ್ಲಂಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆಯೊ, ಕೊರೊನಾದಿಂದ ಮಹಿಳೆಯರು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ಹೊಲಿಗೆ ಯಂತ್ರ ನೀಡುವಂತೆಯೂ ಹೇಳಿದರು.

ಶಿವಕುಮಾರ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಲ್ಯಾಪ್ ಟಾಪ್ ನೀಡುವಂತೆ ಹೇಳಿದರು. 

ಪತ್ರಕರ್ತ ಮಾಗನೂರು ಮಂಜಪ್ಪ, ಚಿಕ್ಕಮಣ್ಣಿ ಬಡಾವಣೆಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಪಾಲಿಕೆಯಿಂದ ಮಳಿಗೆ ಗಳನ್ನು ಕಟ್ಟಿಸಿದರೆ, ಪಾಲಿಕೆಗೆ ಆದಾಯ ಬರುವ ಜೊತೆಗೆ ಅಲ್ಲಿನ ನಾಗರಿಕರಿಗೆ ಅನುಕೂಲವಾ ಗುತ್ತದೆ ಎಂದರು. ಕೆಎಸ್ಸಾರ್ಟಿಸಿ ಬಸ್ ನಿಲ್ದಾ ಣದ ಬಳಿ ಇರುವ ನಿರಾಶ್ರಿತರ ತಂಗುದಾಣ ವನ್ನು ಸಿ.ಜೆ. ಆಸ್ಪತ್ರೆ ಬಳಿಗೆ ಸ್ಥಳಾಂತರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಪತ್ರಕರ್ತ ವೀರೇಶ್, ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಪಾಲಿಕೆಯಿಂದ ಶೌಚಾಲಯ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ, ಗಾಳಿ ದುರ್ಗಮ್ಮ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವಂತೆ ಕೋರಿದರು.

ಸಭೆಯಲ್ಲಿ ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಶಿವನಗೌಡ ಪಾಟೀಲ, ಜಯಮ್ಮ, ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!