ಯೋಧರ ಸಾವಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ
ದಾವಣಗೆರೆ, ಏ.6- ಛತ್ತೀಸ್ ಘಡದ ಸುಕ್ಮಾ-ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ ಹುತಾತ್ಮರಾದ 22 ವೀರ ಯೋಧರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿಂದು ಸಂಜೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಂ ಅಂಡ್ ಕೋ ವೃತ್ತದಲ್ಲಿ ಜಮಾಯಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಮೇಣದ ಬೆಳಕು ಮೂಡಿಸಿ, ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧರ ದೇಶ ಸೇವೆಯನ್ನು ಸ್ಮರಿಸಲಾಯಿತು. ಅಲ್ಲದೇ ಅವರುಗಳ ಆತ್ಮಕ್ಕೆ ಶಾಂತಿ ಕೋರಲಾಯಿತು.
ವೀರ ಯೋಧರು ಅಮರರಾಗಲಿ ಎಂದು ಜಯಘೋಷ ಹಾಕಿ, ಯೋಧರ ಸಾವಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ದೇಶದ ಚೌಕಿದಾರ್ ಎಂದು ಹೇಳಿದ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಸಾವಿರಾರು ಯೋಧರು ಹತರಾದರು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸದೇ ಯೋಧರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿ ಯಲ್ಲಿ ಪಾಕಿಸ್ತಾನದ 70 ಸಾವಿರ ಉಗ್ರರನ್ನು ಹಿಡಿದದ್ದು ಸುದ್ದಿಯಾಗಲಿಲ್ಲ. ಪುಲ್ವಾಮಾ ದಾಳಿ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಪಡೆದು ಕೊಂಡಿತು. ಯೋಧರಿಗೆ ಜೀವರಕ್ಷಕ ವಸ್ತುಗ ಳನ್ನು ನೀಡುವುದಾಗಿ ಸುಳ್ಳು ಹೇಳಿತು ಎಂದು ಟೀಕಿಸಿದರು. ಕೇಂದ್ರದ ಬಿಜೆಪಿ ಸರ್ಕಾರದ ಗುಪ್ತಚರ ವೈಫಲ್ಯದಿಂದಾಗಿ 25 ಮಂದಿ ವೀರ ಯೋಧರು ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಪುಲ್ವಾಮಾ ದಾಳಿ ವೇಳೆ ಸಿಕ್ಕ ಆರ್ಡಿಎಕ್ಸ್ ಬಗ್ಗೆ ಈವರೆಗೆ ತನಿಖೆ ನಡೆಯಲಿಲ್ಲ. ಐಟಿ, ಇಡಿ ಎಂದು ಹೇಳುವ ಕೇಂದ್ರ ಸರ್ಕಾರ, ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ 4.5 ಕೋಟಿ ಕೋವಿಡ್ ಲಸಿಕೆಯನ್ನು ರವಾನಿಸಿ ದೇಶದ್ರೋಹತನ ಪ್ರದರ್ಶಿಸಿದೆ. ಚುನಾವಣೆಗಳು ಬಂದ ವೇಳೆ ಯೋಧರ ಮೇಲೆ ದಾಳಿ ನಡೆಯುತ್ತಿದ್ದು, ಈ ದಾಳಿಗಳನ್ನು ಭಯೋತ್ಪಾದಕರು, ನಕ್ಸಲರು ಮಾಡುತ್ತಿದ್ದಾರೋ ಅಥವಾ ಮೋದಿಯೇ ದಾಳಿ ನಡೆಸುತ್ತಿದ್ದಾರೋ ಎಂದು ಅನುಮಾನ ವ್ಯಕ್ತಪಡಿಸಿದರು.
ಯೋಧರ ಶವದ ಮೇಲೆ ಬಿಜೆಪಿ ರಾಜಕಾರಣ ಮಾಡುವುದನ್ನು ಬಿಡಬೇಕು. ಮೋದಿ ಸರ್ಕಾರದಲ್ಲಿ ಇದುವರೆಗೆ ಮೃತರಾದ ಯೋಧರ ಕುರಿತಂತೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶ್ರೀಮತಿ ನಾಗರತ್ನಮ್ಮ ಮಲ್ಲೇಶಪ್ಪ, ಯುವ ಕಾಂಗ್ರೆಸ್ನ ಮೈನುದ್ದೀನ್, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರುಗಳಾದ ಜಿ.ಎಸ್. ಮಂಜುನಾಥ್, ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ಗಣೇಶ್ ಹುಲ್ಮನಿ, ಅಜ್ಜಪ್ಪ ಪವಾರ್, ಎಸ್. ರವಿ, ಸುಧಾ ಮಂಜುನಾಥ್, ಅನಿತಾ ಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಗೀತಾ ಚಂದ್ರಶೇಖರ್, ಶಿಲ್ಪಾ, ರಾಜೇಶ್ವರಿ, ಶುಭಮಂಗಳ, ಜಂಬಗಿ ರಾಧೇಶ್, ಹರೀಶ್ ಕೆ.ಎಲ್, ಸಾಗರ್, ರಾಕೇಶ್, ಸೈಯದ್ ಖಾಲಿದ್, ಸದ್ದಾಂ, ರಾಕೇಶ್, ಇಮ್ತಿಯಾಜ್ ಬೇಗ್, ಜಿಕ್ರಿಯಾ, ಶ್ರೀಕಾಂತ್ ಬಗರೆ, ಪ್ರವೀಣ್ ಫಾರ್ಮ, ಸುಭಾನ್ ಸಾಬ್ ಇತರರು ಇದ್ದರು.