ದಾವಣಗೆರೆ, ಏ. 5 – ಕನ್ನಡ ಬೆಳೆಸುವುದು ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ನಾಡಿನ ಜನರು ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಬೆಳೆಸಬೇಕು ಹಾಗೂ ಶ್ರೀಮಂತಗೊಳಿಸಬೇಕು ಎಂದು ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಹಾಗೂ ಕನ್ನಡಪ್ರಭ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ §ಬರವಣಿಗೆಯಲ್ಲಿ ಸರಿಗನ್ನಡ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರಿನಲ್ಲಿ ಕನ್ನಡಿಗರು ಶೇ.23ರಷ್ಟು ಹಾಗೂ ಕನ್ನಡ ಮಾತನಾಡುವವರು ಕೇವಲ ಶೇ.21ರಷ್ಟಿದ್ದಾರೆ. ಕನ್ನಡ ಉಳಿಯ ಬೇಕಾದರೆ, ಬೇರೆ ರಾಜ್ಯಗಳಿಂದ ಬರುವವರ ಭಾಷೆಗಳನ್ನು ನಾವು ಆಡುವ ಬದಲು, ಬಂದವರೇ ಕನ್ನಡ ಕಲಿಯುವಂತೆ ಮಾಡಬೇಕು. ನಾವು ಕನ್ನಡದಲ್ಲೇ ಮಾತನಾಡಿದರೆ, ಹೊರ ರಾಜ್ಯದವರು ಅನಿವಾರ್ಯವಾಗಿ ಕನ್ನಡ ಕಲಿಯುತ್ತಾರೆ ಎಂದರು.
ವಿಧಾನಸೌಧದಿಂದ ಹಿಡಿದು ಬ್ಯಾಂಕ್, ಸರ್ಕಾರಿ ಕಚೇರಿಗಳು ಹಾಗೂ ನ್ಯಾಯಾಲಯಗಳಲ್ಲಿ ಕನ್ನಡ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಜನರ ಪ್ರೋತ್ಸಾಹ ಬೇಕು ಎಂದವರು ಹೇಳಿದರು.
ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಸರಿಯಾಗಿ ಕನ್ನಡ ಮಾತನಾಡದೇ ಹೋದರೆ §ಸಿರಿಗನ್ನಡಂ ಗೆಲ್ಗೆ’ ಬದಲು §ಸಿರಿಗನ್ನಡಂ ಗಲ್ಲಿಗೆ’ ಆಗುತ್ತದೆ. ಕನ್ನಡ ವರ್ಣಮಾಲೆ ವೈಜ್ಞಾನಿಕವಾಗಿದ್ದು, ಇದನ್ನು ಸರಿಯಾಗಿ ಕಲಿಯಬೇಕು ಎಂದು ತಿಳಿಸಿದರು.
ಪಂಪನಿಂದ ಹಿಡಿದು ಕುವೆಂಪುವರೆಗೆ ಅನೇಕ ಸಾಹಿತಿಗಳು ಕನ್ನಡಕ್ಕೆ ನೀಡಿರುವ ಕೊಡುಗೆ ಬಳಸಿದಷ್ಟೂ ಖಾಲಿಯಾಗದ ತಿಜೋರಿಯಂತಿದೆ. ಇಂತಹ ಭಾಷೆಯನ್ನು ಸರಿಯಾಗಿ ಬಳಸುವುದಷ್ಟೇ ಅಲ್ಲದೇ, ಶರಣರು-ದಾಸರ ಆಶಯದಂತೆ ಸರಿ ಜೀವನವನ್ನೂ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂದಿನ ಸುದ್ದಿ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ ಎಂ. ಬಾವಿ, ಚಿಕ್ಕಂದಿನಿಂದಲೇ ಭಾಷೆಯ ಬಳಕೆ ಸರಿಪಡಿಸಿದರೆ ಮುಂದೆ ತಪ್ಪಾಗುವುದಿಲ್ಲ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತರೂ ಆದ ಸಾಹಿತಿ ಬಾಮ ಬಸವರಾಜಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಚಂದ್ರಣ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿಸೌಜ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತರುಗಳಾದ ಪೆ.ನಾ. ಗೋಪಾಲರಾವ್, ವರದಿಗಾರ ಯಳನಾಡು ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಹೆಚ್.ಎಂ.ಪಿ. ಕುಮಾರ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಜನತಾವಾಣಿ ಉಪ ಸಂಪಾದಕ ಇ.ಎಂ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಮಂಜಪ್ಪ ಮಾಗನೂರು ವಂದಿಸಿದರು.