ಕೃಷಿ ಉತ್ಪನ್ನ ಮಾರುಕಟ್ಟೆಗೆ ಆದಾಯದಲ್ಲಿ ವಕ್ರದೆಸೆ

ಶೇ.90ರವರೆಗೂ ಕುಸಿದ ಮಾರುಕಟ್ಟೆ ಶುಲ್ಕ ವಸೂಲಿ

ದಾವಣಗೆರೆ, ಏ. 5 –  ಕಳೆದ ವರ್ಷ ಕೊರೊನಾ ಸಮಯದಲ್ಲಿ ಉಳಿದೆಲ್ಲ ವಲಯಗಳಿಗೆ ಹೊಡೆತ ಬಿದ್ದಿದ್ದರೂ, ಕೃಷಿ ವಲಯ ಬೆಳವಣಿಗೆ ಮುಂದುವರೆಸಿತ್ತು. ವಿಪರ್ಯಾಸ ಎಂದರೆ, ಕೃಷಿ ಉತ್ಪನ್ನಗಳನ್ನು ಮಾರುವ ಮಾರುಕಟ್ಟೆಯಾದ ಎ.ಪಿ.ಎಂ.ಸಿ. ಮಾತ್ರ ಆದಾಯದಲ್ಲಿ ಹೊಡೆತ ತಿನ್ನುತ್ತಿದೆ.

ಕಳೆದ ಒಂದು ವರ್ಷದಿಂದ ಎ.ಪಿ.ಎಂ.ಸಿ.ಗೆ ವಕ್ರದೆಸೆ ಬರುತ್ತಿದೆ. ಅದರಲ್ಲೂ ಕಳೆದ ಕೆಲ ತಿಂಗಳುಗಳು ಸಂಪೂರ್ಣ ನಿರಾಶಾದಾಯಕವಾಗಿವೆ. ರಾಜ್ಯ ಸರ್ಕಾರ ಎ.ಪಿ.ಎಂ.ಸಿ. ಮಾರು ಕಟ್ಟೆ ಶುಲ್ಕವನ್ನು ಶೇ.60ರಷ್ಟು  ಇಳಿಕೆ ಮಾಡಿದ್ದು ಎಪಿಎಂಸಿ ಆದಾಯಕ್ಕೆ ಬಹು ದೊಡ್ಡ ಹೊಡೆತವಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಮಾರುಕಟ್ಟೆ ಶುಲ್ಕವನ್ನು 1.5 ರೂ.ಗಳಿಂದ 60 ಪೈಸೆಗೆ ಇಳಿಕೆ ಮಾಡಲಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶುಲ್ಕ ವಸೂಲಾತಿಯಲ್ಲಿ ಇಳಿಕೆಯಾಗಿದೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಜೆ. ಪ್ರಭು ತಿಳಿಸಿದ್ದಾರೆ.

ಆದರೆ, ಈ ಹೊಡೆತವನ್ನೂ ಮೀರಿ ಎಪಿಎಂಸಿ ಆದಾಯ ಕುಂಠಿತ ವಾಗುತ್ತಿದೆ. ದಾವಣಗೆರೆ ಎಪಿಎಂಸಿ ಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ 1.21 ಕೋಟಿ ರೂ. ಮಾರುಕಟ್ಟೆ ಶುಲ್ಕ ವಸೂಲಾತಿ ಆಗಿತ್ತು. ಆದರೆ, ಈ ವರ್ಷ ಅದೇ ತಿಂಗಳಲ್ಲಿ ಕೇವಲ 15.62 ಲಕ್ಷ ರೂ. ಶುಲ್ಕ ವಸೂಲಿಯಾಗಿದೆ. ಸರ್ಕಾರದ ಶುಲ್ಕ ದರ ಇಳಿಕೆಯ ಪರಿಣಾಮ ಎಂದು ಪರಿಗಣಿಸಿದರೂ ಸಹ, ಇಳಿಕೆಯ ಪ್ರಮಾಣ ಈ ಪರಿ ಇರಬಾರದಿತ್ತು. 

ಸರ್ಕಾರ ಇಳಿಕೆ ಮಾಡಿದ ಶುಲ್ಕ ಶೇ.60ರಷ್ಟಿದೆ. ಆದರೆ, ವಸೂಲಾತಿ ಪ್ರಮಾಣ ಶೇ.90ರವರೆಗೂ ಕುಸಿದಿದೆ! ಕೋಟಿ ರೂ. ಆದಾಯ ಬರುವ ಜಾಗದಲ್ಲಿ ಈಗ ಹತ್ತು ಲಕ್ಷ ರೂ. ಬಂದರೆ ಸಮಾಧಾನ ಎಂಬಂತಹ ಪರಿಸ್ಥಿತಿ ಉಂಟಾಗಿದೆ.

ದಾವಣಗೆರೆ ಎಪಿಎಂಸಿ ಕಥೆ ಹೀಗಾದರೆ, ಹರಿಹರ, ಹೊನ್ನಾಳಿ ಹಾಗೂ ಜಗಳೂರುಗಳ ಎಪಿಎಂಸಿ ಮಾರುಕಟ್ಟೆಗಳ ಕಥೆ ಇನ್ನೂ ಕಠಿಣವಾಗಿದೆ. ಹೊನ್ನಾಳಿಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಮಾರುಕಟ್ಟೆ ಶುಲ್ಕ 44.66 ಲಕ್ಷ ರೂ. ಆಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ವಸೂಲಾಗಿದ್ದು, ಕೇವಲ 1.16 ಲಕ್ಷ ರೂ.! ಜಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.96ರಷ್ಟು ಆದಾಯ ಕುಸಿತವಾಗಿದೆ.

ಕಳೆದ ಫೆಬ್ರವರಿಯಲ್ಲಿ ಜಗಳೂರಿನಲ್ಲಿ ಆದಾಯ ಕುಸಿತ ಶೇ.97 ಹಾಗೂ ಹರಿಹರದಲ್ಲಿ ಶೇ.75ರಷ್ಟಿದೆ. ಚನ್ನಗಿರಿಯಲ್ಲಿ ಮಾತ್ರ ಪರಿಸ್ಥಿತಿ ತುಸು ಉತ್ತಮವಾಗಿದೆ. ಇಲ್ಲಿ ಮಾತ್ರ ಸರ್ಕಾರದ ಶುಲ್ಕ ಇಳಿಕೆಯ ಮಟ್ಟದಲ್ಲೇ ಆದಾಯ ಮುಂದುವರೆದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 1.02 ಕೋಟಿ ರೂ. ಮಾರುಕಟ್ಟೆ ಶುಲ್ಕ ವಸೂಲಾಗಿದ್ದರೆ, ಈ ವರ್ಷ ಅದು 44 ಲಕ್ಷ ರೂ.ಗಳಿಗೆ ಇಳಿದಿದೆ.

ಚನ್ನಗಿರಿ ಹೊರತುಪಡಿಸಿ ಜಿಲ್ಲೆಯ ಉಳಿದ ಎಪಿಎಂಸಿಗಳಲ್ಲಿ ಕಳೆದ ಹಲವಾರು ತಿಂಗಳುಗಳಿಂದ ನಿರಂತರ ಕುಸಿತ ಕಂಡು ಬರುತ್ತಿದೆ. ಇದಕ್ಕೆ ಸರ್ಕಾರ ಶುಲ್ಕ ಇಳಿಕೆ ಮಾಡಿರುವುದರ ಜೊತೆಗೆ, ಎಪಿಎಂಸಿ ಹೊರಗೆ ಇಳುವರಿ ಮಾರಾಟ ಮಾಡಲು ಅನುಮತಿ ನೀಡಿರುವುದೂ ಕಾರಣವಾಗಿದೆ.

ಎಪಿಎಂಸಿ ಹೊರಗೆ ರೈತರು ಇಳುವರಿ ಮಾರಾಟ ಮಾಡಿದರೆ ಯಾವುದೇ ಮಾರುಕಟ್ಟೆ ಶುಲ್ಕ ಪಾವತಿ ಸಬೇಕಿಲ್ಲ. ಇದು ಎಪಿಎಂಸಿ ಆಕರ್ಷಣೆ ಕಳೆದುಕೊಳ್ಳಲು ಕಾರಣವಾಗುತ್ತಿದೆ.


– ಎಸ್.ಎ. ಶ್ರೀನಿವಾಸ್,
[email protected]

error: Content is protected !!