ಶೋಷಿತರಿಗೆ ಅಷ್ಟು ಸುಲಭವಾಗಿ ನ್ಯಾಯ ಸಿಗುವುದಿಲ್ಲ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿನ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಮಲೇಬೆನ್ನೂರು, ಫೆ.1- ಯಾವುದೇ ಸರ್ಕಾರ ಇದ್ದರೂ ಶೋಷಿತರಿಗೆ ಅಷ್ಟು ಸುಲಭವಾಗಿ ನ್ಯಾಯ ಸಿಗುವುದಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಸೋಮವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಸಿದ್ದತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂವಿಧಾನ ಬದ್ಧವಾಗಿ ಎಸ್ಟಿ ಮೀಸಲಾತಿ ಹೆಚ್ಚಳ ಆಗಲೇಬೇಕು. ಅದಕ್ಕೆ ಬೇಕಾದ ಸಮಯವನ್ನೂ ಕೊಟ್ಟಿದ್ದೇವೆ. ಈಗಿರುವ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವ ನಿರೀಕ್ಷೆ ಹೊಂದಿದ್ದೇವೆ. ಒಂದು ವೇಳೆ ಹೆಚ್ಚಳ ಮಾಡದಿದ್ದರೆ, ಶ್ರೀಗಳ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ತೀರ್ಮಾನ ಇನ್ನೂ ಆಗಿಲ್ಲ. ಪಕ್ಷ ಬಯಸಿದರೆ, ತಾವು ಸ್ಪರ್ಧಿಸುವುದಾಗಿ ಸತೀಶ್ ಜಾರಕಿಹೊಳಿ ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೂ ಸಹ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಕೋವಿಡ್ ಸಂದರ್ಭದಲ್ಲಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ರೂ. ಪ್ಯಾಕೆಜ್ ಎಲ್ಲಿದೆ ? ಎಂದು ಪ್ರಶ್ನಿಸಿದ ಜಾರಕಿಹೊಳಿ ಅವರು, ಜನರಿಗೆ ಗೊತ್ತಾಗದಂತೆ ನಿಧಾನವಾಗಿ ಪೆಟ್ರೋಲ್, ಡೀಸೆಲ್ ದರಗಳನ್ನು
ಏರಿಕೆ ಮಾಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬದಲಾವಣೆ ಬಿಜೆಪಿ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.

ಇದಕ್ಕೂ ಮುನ್ನ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಅವರೊಂದಿಗೆ ಜಾತ್ರೆಯ ಸಿದ್ದತೆ ಹಾಗೂ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. 

ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್, ಟಿ.ಈಶ್ವರ್, ಹರ್ತಿಕೋಟೆ ವೀರೇಂದ್ರ ಸಿಂಹ, ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ, ಜಿ.ಪಂ.ಮಾಜಿ ಸದಸ್ಯರಾದ ಕೆ.ಪಿ.ಪಾಲಯ್ಯ, ಎಂ.ನಾಗೇಂದ್ರಪ್ಪ, ತ್ಯಾವಣಿಗೆ ಗೋವಿಂದ ಸ್ವಾಮಿ, ಸಣ್ಣ ತಮ್ಮಪ್ಪ ಬಾರ್ಕಿ, ಜಿಗಳಿ ಆನಂದಪ್ಪ, ರಾಘು ದೊಡ್ಡಮನಿ, ವಿಜಯಶ್ರೀ ಮಹೇಂದ್ರಕುಮಾರ್, ಪಾರ್ವತಿ, ಕೊಕ್ಕನೂರು ಸೋಮಶೇಖರ್ ಮತ್ತಿತರರು ಈ ವೇಳೆ ಹಾಜರಿದ್ದರು.

 

error: Content is protected !!