ಜ್ಞಾನದ ದಿಗಂತಗಳನ್ನು, ಅಂತರ್ಶಿಸ್ತೀಯ ಸಂಬಂಧಗಳನ್ನು ವಿಸ್ತರಿಸಿ ನಿರ್ಣಯಿಸುವಲ್ಲಿ, ಜ್ಞಾನಿಕ ಸಂಕೀರ್ಣಗಳನ್ನು ಬಿಡಿಸುವಲ್ಲಿ, ಒಂದು ಕೃತಿಯ ಅಥವಾ ಹಲವು ಕೃತಿಗಳ ಮೌಲ್ಯವನ್ನು ರುಜುವಾತುಗೊಳಿಸುವಲ್ಲಿ, ಭೂತ-ವರ್ತಮಾನ-ಭವಿಷತ್ತುಗಳಿಗೆ ಸೇತುವೆಯನ್ನು ನಿರ್ಮಿಸುವಲ್ಲಿ, ಕವಿಪ್ರತಿಭೆಗೆ ಮಹತ್ವಪೂರ್ಣವಾದ ಸ್ಥಾನವಿದೆ ಎನ್ನುವು ದರಲ್ಲಿ ಸಂದೇಹವಿಲ್ಲ. ವ್ಯಷ್ಟಿ ಸಮಷ್ಟಿಗಳ ಮತ್ತು ವಿವಿಧ ಜ್ಞಾನಶಾಖೆಗಳ ಸಹಯೋಗ (Association of Knowledge) ದಿಂದ, ದೇಶ-ದೇಶಾಂತರಗಳ, ಭೂತ ವರ್ತಮಾನಗಳ, ವರ್ತಮಾನ ಭವಿಷ್ಯತ್ಯಗಳ, ಅನಂತ ಅನಾದಿಗಳ, ಭಾವ, ಬುದ್ಧಿ, ಪ್ರತಿಭೆಗಳ ಸಂಲಗ್ನ ವಿದ್ಯುದಾಲಿಂಗನದಿಂದ ಸೃಷ್ಟಿಯಾಗುವ ಸಾಹಿತ್ಯ ಲೋಕದಲ್ಲಿ ವಿಹಾರಯಾತ್ರೆ ಕೈಗೊಳ್ಳುವವರಿಗೆ ಬೇಂದ್ರೆ ಕಾವ್ಯಾಕ್ಷಿ ಸುಂದರವೂ, ಬಹುಪಯುಕ್ತವೂ ಆದ ನಾವೆಯಾಗುತ್ತದೆ. ಯಾವ ಕಾಲದ ಅಥವಾ ಯಾವ ದೇಶದ ಮನುಷ್ಯನೇ ಆಗಲೀ, ಅವನ ಮೂಲ ಚೈತನ್ಯ ಒಂದೇ ಎಂಬುದು ಸುಸ್ಪಷ್ಟ. ಶಕ್ತಿ ಸಾಮರ್ಥ್ಯಗ ಳಲ್ಲಾಗಲೀ, ಆಂತರಿಕ ಪ್ರವೃತ್ತಿಯಲ್ಲಾಗಲೀ, ಅಧ್ಯಾತ್ಮಿಕ ಸ್ಥಿತಿಗತಿಗಳಲ್ಲಾಗಲೀ, ದೈಹಿಕ ರಚನೆಯಲ್ಲಾಗಲೀ, ಮನುಷ್ಯನಿಂದ ಮನುಷ್ಯನಿಗೆ ಮೂಲಭೂತ ವ್ಯತ್ಯಾಸ ಕಂಡು ಬರುವುದಿಲ್ಲ. ಭಾವ-ಭಾವನೆ-ಚಿಂತನೆ-ಗುಣತ್ರಯ ರಾಗದ್ವೇಷ ಮೊದಲಾದ ವ್ಯವಹಾರಗಳು ಎಲ್ಲಾ ಮಾನವರಲ್ಲಿಯೂ ಏಕರೀತಿಯಲ್ಲಿ ಜರುಗುತ್ತವೆ ಎಂಬ ಸತ್ಯ, ಸತ್ವ, ವ್ಯಕ್ತಿ ಸಂಸ್ಕಾರ ಮತ್ತು ಪರಿಸರ ಸಂಬಂಧವಾದ ವ್ಯತ್ಯಾಸಗಳೊಡನೆ ವಿಶ್ವಸಾಹಿತ್ಯದ ಲಕ್ಷಣಗಳು ಹಾಸು ಹೊಕ್ಕಾಗಿ ಬೆಸೆದುಕೊಂಡ ಹಾಗೂ ಕರ್ಷಣತೆ (Tension) ಇಲ್ಲದ ಬಗೆಯನ್ನು ಬೇಂದ್ರೆಯವರಲ್ಲಿ ಕಾಣಬಹುದಾಗಿದೆ.
ಬೇಂದ್ರೆಯವರ ಕಾವ್ಯವನ್ನು ಹೆಚ್ಚು ಹೆಚ್ಚು ಆಳವಾಗಿ ಅಭ್ಯಾಸ ಮಾಡಿದಂತೆಲ್ಲಾ, ಅವರ ಪ್ರತಿಭಾ ಪ್ರತೋಲಿಯ ವ್ಯಾಪ್ತಿ ಮತ್ತು ಆಳದ ಅರಿವು ಹೆಚ್ಚು ಹೆಚ್ಚಾಗಿ ಆಗುತ್ತದೆ. ಮಾನವ ಜೀವನದ ಹೆಜ್ಜೆಗಳ ಅನುಭವವನ್ನು ತಮ್ಮದೇ ಆದ ಋಷಿದೃಷ್ಟಿಯಿಂದ, ಉದಾತ್ತ ಕಾವ್ಯವಾಗಿ ಪರಿವರ್ತಿಸುವ ಬಗೆ ಅನೂನವಾಗಿರುತ್ತದೆ. ತಮ್ಮ ಋಷಿದೃಷ್ಟಿಯಿಂದ ನಿರ್ದೇಶಿಸಲ್ಪಟ್ಟ ಪ್ರತ್ಯಗ್ರ ಪ್ರಯೋಗಗಳನ್ನು ಕಾವ್ಯದಲ್ಲಿ ಕೈಗೊಳ್ಳುತ್ತಾರೆ. ಚಿರಕಾಲ ಬಾಳುವ ಅನುಭವದ ತುಣುಕುಗಳನ್ನು ಕೃಷಿದೃಷ್ಟಿ ಕಾವ್ಯವಾಗಿಸಿ ನಶ್ವರವಾದ ಭಾವ ವಿಭಾವಗಳನ್ನು ಗಾಳಿಗೆ ತೂರುತ್ತದೆ. ಸೌಂದರ್ಯ ದೃಷ್ಟಿಯನ್ನು ಇರಾದೆಯಿಂದ ವಸ್ತುವಿನ ರೂಪ (Form) ಕ್ಕೆ ಹೆಚ್ಚು ಮಹತ್ವಕೊಟ್ಟು, ರೂಪದಂತೆ ರಚನಾ ವಿನ್ಯಾಸಕ್ಕೂ ಅಷ್ಟೇ ಗಮನವರಿಸಿ, ರೂಪವು ರೀತಿ, ಭಾಷೆ ಮತ್ತು ಶೈಲಿಯ ಔಚಿತ್ಯ (Decorum) ಎಲ್ಲವನ್ನೂ ಒಳಗೊಂಡು, ದೈವಿದರ್ಶನ (Vision of Divine) ವನ್ನು ದೈವವಾಣಿ (Voice of Divine) ಯ ಮೂಲಕ ಆರಿಸಿ ವಸ್ತು ನಿಷ್ಠ ದೃಷ್ಠಿ (Objective point of view) ಯಾಗಿದ್ದ ವೈಯಕ್ತಿಕ ಭಾವನೆಗಳಿಗೆ ಅವಕಾಶವಿಲ್ಲದೇ, ಔಚಿತ್ಯ (Decorum)ತೆಯ ಭಾಷೆ, ಶೈಲಿ ಎರಡಕ್ಕೂ ಅನ್ವಹಿತವಾಗಿ, ಕ್ರಮಬದ್ಧತೆ ಮತ್ತು ವೈಚಾರಿಕತೆ (Order & rationality)ಯು ಎದ್ದು ಕಾಣುವ ಅಂಶಗಳಾಗಿ, ಸ್ಪಷ್ಟತೆ ಮತ್ತು ಸರಳತೆ (Clarity and Simplicity)ಯ ಉದ್ದೇಶದಿಂದ ನಿರ್ಮಾಣಗೊಂಡು ದೂರ(Distance)ದ ಮೂಲಕ ಕಲಾಕೃತಿ ಸೌಂದರ್ಯವನ್ನು ಸರಿಯಾದ ಮಾನಸಿಕ ಅಂತರ (Psychic distance) ದಿಂದ ವೀಕ್ಷಿಸಿ, ಸಂಯಮ (Control) ದಿಂದ ಭಾಷೆಯನ್ನು ಬಳಸಿದ ರೀತಿ, ಭಾವನೆಗಳ ಅಭಿವ್ಯಕ್ತಿ ಎಲ್ಲವೂ ಈ ಪ್ರವೃತ್ತಿಯ ನಿದರ್ಶನಗಳಾಗಿ ಪರಿಮಾಣದನುಡಿ ಪ್ರಾಸ (Quantitative meter)ಗಳು ಬೇಂದ್ರೆ ಯವರ ಕಾವ್ಯದೃಷ್ಟಿ; ಋಷಿದೃಷ್ಟಿ ಸ್ಥಲವನ್ನು ಪಡೆಯುವಲ್ಲಿ ಸಾಕಾರವಾಗಿದೆ ಎನ್ನುವುದನ್ನು 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಕಟಿಸಿದ `ಅರಳು-ಮರಳು’ ಕಾವ್ಯ ಸಂಗ್ರಹ ಇದಕ್ಕೆ ಸಾಕ್ಷಿಯಾಗಿದೆ.
ಬೇಂದ್ರೆ ಕಾವ್ಯದಲ್ಲಿ ‘ವಿರಾಟ್ ದರ್ಶನ’ ಅತ್ಯಂತ ಅಪೂರ್ವ ನೆಲೆಯಿಂದ ರುದ್ರತಾಂಡ ವದೊಡನೆ ವಿದ್ಯುದ್ಗಾರವಾದಂತೆ ಕ್ರಿಯಾ ಶೀಲತೆಯನ್ನೊಂದಿ ಸ್ಥಾಯಿಯಾಗಿ ತನ್ನ ಗುಣಾತಿಶಯದೊಂದಿಗೆ ರಸಸೃಷ್ಟಿಯನ್ನೊಳ ಗೊಂಡು, ದಿವ್ಯ ಸಾಧನ ಪ್ರೇರಕ ಶಕ್ತಿಯಾಗಿ, ಆನಂದ ಲಹರಿಯಾಗಿ, ಕವಿಜೀವವನ್ನು ಸೇರಿ, ದಿವ್ಯಪ್ರತಿಭೆಗೆ ಹಾಗೂ ದೈವಿಕೃಪೆಗೆ ಕವಿಜೀವವು ಮಾಡಿರುವ ಮೊರೆಯಾಗಿ, ಉಕ್ಕುಕ್ಕಿ ಹರಿಯುವ ತೊರೆಯಾಗಿ, ಪರಿವರ್ತನ ಮಾಡಿಕೊಂಡ; ಪ್ರತಿಮೆ ಯಾಗಿಸಿಕೊಂಡ ಕವಿತೆ ‘ಗಂಗಾವತರಣ’ ಇಡೀ ಜೀವನವನ್ನು ಪರಿಶುದ್ಧಗೊಳಿಸಬೇಕು, ಪರಿವರ್ತಗೊಳಿಸಬೇಕು ಎಂಬ ಉನ್ನತ ಆಶಯವು ಈ ಕವನದಲ್ಲಿ ಸಹಜಸ್ಪೂರ್ತವಾದ; ಭಾವಪೂರ್ಣವಾದ ಛಂದಸ್ಸು, ಪ್ರಾಸ, ಲಯಗಳ ಅನುರೂಪ ಮಿಲನದಿಂದ ಹೊರಹೊಮ್ಮಿದೆ. ‘ಇಳಿದು ಬಾ ತಾಯಿ’ ಎಂಬ ತಿಳಿಗನ್ನಡದ ಮಾತು ಪುನರುಕ್ತಿಗೊಂಡು ಉತ್ಕಟರಸಾನುಭವಕ್ಕೆ ದೀಪ್ತಿಯಾಗಿ ವಿಶ್ವಪ್ರಜ್ಞೆ (Cosmic Conciousness) ಯ ಶ್ರೀಮಂತಿಕೆಯಿಂದ ‘ರಸಪೂರಜನ್ನೆ ನೀನಲ್ಲ ಅನ್ನೆ ಸಚ್ಚಿದಾನಂದ ಕನ್ಯೆ’ಯ ಮೂಲಕ ಕೊನೆಯಲ್ಲಿ ‘ದತ್ತ ನರಹರಿಯ ಮುತ್ತೆ ಬಾ’ ‘ಅಂಬಿಕಾತನಯನತ್ತೆ ಬಾ’ ಎಂಬ ಪ್ರವಾಹ ರಭಸದಲ್ಲಿ ವಿರಾಟ್ ದರ್ಶನದಲ್ಲಿ ವಿಶ್ವದೃಷ್ಟಿ (The cosmic view) ಯು ವಿಶ್ವಪ್ರಜ್ಞೆಗೆ ಸಾಕ್ಷಿಯಾಗಿ, ವಿಶಿಷ್ಟವಾದ ಜೀವನದ ವಿರಾಟ್ ದರ್ಶನ, ಮಾನವತೆಯ ಐಕ್ಯದ, ವಿಶ್ವದ ಅಖಂಡತೆಯ ಅರಿವು ತೋರಿಕೆಯ ಹೇಳಿಕೆ(Pseudo Statement)ಯಾಗದೆ ಉದ್ಭೋದವಾಗಿದೆ.
ಸಾವಿಗೆ ನಾ ಹೆದರುವುದಿಲ್ಲ
ಯಾಕಂದರ ನಾ ಇರೋತನಕ
ಅದು ಬರೋದಿಲ್ಲ, ಅದು
ಬಂದಾಗ ನಾ ಇರೋದಿಲ್ಲ.
– ದ.ರಾ. ಬೇಂದ್ರೆ
ಬೇಂದ್ರೆಯವರ ಕಾವ್ಯವನ್ನು ಹೆಚ್ಚು ಹೆಚ್ಚು ಆಳವಾಗಿ ಅಭ್ಯಾಸ ಮಾಡಿದಂತೆಲ್ಲಾ, ಅವರ ಪ್ರತಿಭಾ ಪ್ರತೋಲಿಯ ವ್ಯಾಪ್ತಿ ಮತ್ತು ಆಳದ ಅರಿವು ಹೆಚ್ಚು ಹೆಚ್ಚಾಗಿ ಆಗುತ್ತದೆ. ಮಾನವ ಜೀವನದ ಹೆಜ್ಜೆಗಳ ಅನುಭವವನ್ನು ತಮ್ಮದೇ ಆದ ಋಷಿದೃಷ್ಟಿಯಿಂದ, ಉದಾತ್ತ ಕಾವ್ಯವಾಗಿ ಪರಿವರ್ತಿಸುವ ಬಗೆ ಅನೂನವಾಗಿರುತ್ತದೆ. ತಮ್ಮ ಋಷಿದೃಷ್ಟಿಯಿಂದ ನಿರ್ದೇಶಿಸಲ್ಪಟ್ಟ ಪ್ರತ್ಯಗ್ರ ಪ್ರಯೋಗಗಳನ್ನು ಕಾವ್ಯದಲ್ಲಿ ಕೈಗೊಳ್ಳುತ್ತಾರೆ. ಚಿರಕಾಲ ಬಾಳುವ ಅನುಭವದ ತುಣುಕುಗಳನ್ನು ಕೃಷಿದೃಷ್ಟಿ ಕಾವ್ಯವಾಗಿಸಿ ನಶ್ವರವಾದ ಭಾವ ವಿಭಾವಗಳನ್ನು ಗಾಳಿಗೆ ತೂರುತ್ತದೆ.
ಬೇಂದ್ರೆ ದರ್ಶನದ ಪ್ರಗಲ್ಭತೆಯ ಅಂಶ ನಾದದಲ್ಲಿಯೇ ನಾದಮೂಲಕವಾಗಿಯೇ ವಾಗ್ಮಿಕೆ (Rhetoric)ಯ ಭಾವದ ಅರ್ಥದ ವಿಶೇಷ ಧರ್ಮಪ್ರತಿಪಾದನೆ ಮಾಡುವುದು. ‘ಏಲಾವನ ಲವಲೀಬನ ಲವಂಗ ಬನಗಳಲೀs’ ಇದು ಬರೀ ಶಬ್ದ ಪ್ರಾಸವಲ್ಲ. ಇಲ್ಲಿಯ ನಾದಮಾಧುರ್ಯವು ಭಾವದ ರಸಸೌಂದರ್ಯಕ್ಕೆ ಸುಸಂಬಂದ್ಧವಾದ ಅರ್ಥದ ಗಾಂಭೀರ್ಯಕ್ಕೆ ಪುಷ್ಠಿ ನೀಡಿದೆ. ಅಂದರೆ ನಾದದಲ್ಲಿ ಭಾವದ ಅವಿರ್ಭಾವ ಮಹಾಕವಿ ಚೇತನಕ್ಕೆ ಮಾತ್ರ ಸಾಧ್ಯ; ಋಷಿ ಸಾದೃಶ್ಯ ಚೇತನಕ್ಕೆ ಮಾತ್ರ ಶಕ್ಯ; ಧ್ಯಾನದ ಮೌನ ಸಂದರ್ಭದಿಂದ ಮಾತ್ರ ಮಂತ್ರಧ್ವನಿ ಹುಟ್ಟುತ್ತದೆ; ಆ ಮಂತ್ರ ಧ್ವನಿಯೇ ನಾದ ಇದು ಬೇಂದ್ರೆಯವರ ನಾದ ಸಿದ್ಧಿಯ ರಹಸ್ಯ. ಬೇಂದ್ರೆ ದರ್ಶನದ ಉತ್ತರೋತ್ತರ ಸಮೃದ್ಧಿಯ ಕ್ರಮಿಕ ಹಂತಗಳು ಏಳು. ಸಮೀಕ್ಷೆ (observation) ಸಂಕಲ್ಪ (Detrmination), ಅವಧಾರಣ (Assimilation), ಅನುಸಂಧಾನ (Inquisition), ಧ್ಯಾನ (Contemplation), ಆರಾಧನ (Adoration), ಸಾಕ್ಷಾತ್ಕಾರ (Revelation) ಭೂಲೋಕದ ಜೀವನ ಸಮೀಕ್ಷೆಯಿಂದ ಸತ್ಯಲೋಕದ ದೈವೀ ಸಾಕ್ಷಾತ್ಕಾರ ಬೇಂದ್ರೆ ದರ್ಶನದ ಅಂತಿಮ ಧ್ಯೇಯ. ಅನುಭವದ ಆಲೋಕ ಪ್ರವಾಹವು ಆವರಿಸಿ, ಅಜ್ಞಾನ ಸಪ್ತಕದ ಸೀಮೋಲಂಘನೆ ಮಾಡಿ, ಪ್ರಜ್ಞಾನ ಸಪ್ತಕದ ಆನಂದ ಸಾಮ್ರಾಜ್ಯದಲ್ಲಿ ಪ್ರವೇಶಿಸುವ ಮಾರ್ಗವೇ (from seven fold ignorance to seven fold knowledge) ಬೇಂದ್ರೆಯವರ ದರ್ಶನವಾಗಿತ್ತು.
31-01-1896ರಲ್ಲಿ ಜಾತ್ಯರಾಗಿ 26-10-1981 ರಲ್ಲಿ ತಿಳಿನೀಲದಲ್ಲಿ ಲೀನರಾಗಿ (126ನೇ ಜನ್ಮದಿನಾಚರಣೆ) ಕನ್ನಡದ ಜನಸಾಮಾನ್ಯರಿಗೂ ನಿಲುಕುವ ಹಾಗೆ ಅಚ್ಚಗನ್ನಡದ ಜಾನಪದ ಶೈಲಿಯು ‘ಬಾಳಿನ ನಾಳೆಗೆ’ ಬೇಕಾಗುವ ಒಂದು ದಾರ್ಶನಿಕ ವಾಣಿಯನ್ನು ಕಾವ್ಯಾಕ್ಷಿಗೆ ಕಾಂತಿಪುಂಜ (Radiant Orb) ಗೈದು ಕನ್ನಡಿಸಿದ ಕೀರ್ತಿ ಅಂಬಿಕಾತನಯರದು.
ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು,
ದವನ ಕಾಲೇಜು, ದಾವಣಗೆರೆ.
ಮೊ: 8884527130