ದಾವಣಗೆರೆ, ಏ.4- ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್ ಅವರ ಮಾರ್ಗ ದರ್ಶನದಲ್ಲಿ ಕ್ಯಾನ್ಸರ್ ಮುಕ್ತ ಇಂಜಿನಿಯರ್, ಕಲಾವಿದ ಅರುಣ್ ಕುಮಾರ್ ಆರ್.ಟಿ ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಸಿ.ಜಿ. ಆಸ್ಪತ್ರೆಯ ಡಾ. ಸಿದ್ಧರಾಮೇಶ್ ಮೇಲ್ವಿಚಾರಣೆಯಲ್ಲಿ ಹಿರಿಯ ಶುಶ್ರೂಷಕರಾದ ಶ್ರೀಮತಿ ಜಯಮ್ಮ ಹಾಗೂ ಶ್ರೀಮತಿ ತ್ರಿವೇಣಿಯವರು ಹೆಸರು ನೋಂದಾಯಿಸಿಕೊಂಡು ಯಶಸ್ವಿಯಾಗಿ ಲಸಿಕೆ ಚುಚ್ಚುಮದ್ಧು ನೀಡಿದರು. ಲಸಿಕೆ ಪಡೆದ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಆರ್.ಟಿ. ಲಸಿಕೆ ಪಡೆಯುವ ಮುನ್ನ ಸ್ವಲ್ಪ ವಿಚಲಿತನಾಗಿದ್ದರೂ ಡಾ. ರಾಘವನ್ ತುಂಬಿದ ಧೈರ್ಯದಿಂದ ವಿಶ್ವಾಸದೊಂದಿಗೆ ಚುಚ್ಚುಮದ್ದು ತೆಗೆದುಕೊಂಡೆ.
ನನಗೆ ಯಾವುದೇ ರೀತಿಯ ನೋವು-ತೊಂದರೆ ಕಾಣಿಸಿಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ಜಾಹೀರಾತೊಂದರ ಫೋಟೋ ಶೂಟ್ ನಲ್ಲಿ ಭಾಗವಹಿಸಿದೆ. ನಿಜಕ್ಕೂ ಸರಕಾರ, ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ನಿಂದ ಜನರನ್ನು ರಕ್ಷಿಸಲು ತೋರಿಸುತ್ತಿರುವ ಕಾಳಜಿ ಮೆಚ್ಚುವಂತಹದ್ದು. ಅವರ ಕಳಕಳಿಗೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ವಿಶ್ವಾಸದಿಂದ ಕೋವಿಡ್ ಲಸಿಕೆ ಪಡೆದು ಜನರು ಜವಾಬ್ದಾರಿ ನಿಭಾಯಿ ಸುತ್ತಾರೆಂಬ ನಂಬಿಕೆ ನನಗಿದೆ ಎಂದು ಅರುಣ್ ಭರವಸೆಯಿಂದ ನುಡಿಯುತ್ತಾರೆ.