ನಗರದಲ್ಲಿ ಕೂಡಲ-ಹರಿಹರ ಸಂಗಮ

ಪಂಚಮಸಾಲಿ 2ಎ ಪಾದಯಾತ್ರೆಗೆ ವಚನಾನಂದ ಶ್ರೀಗಳ ಸೇರ್ಪಡೆ

ದಾವಣಗೆರೆ, ಜ. 29 – ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ತಾವೂ ಜೊತೆ ಸೇರುವುದಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಘೋಷಿಸಿದ್ದಾರೆ.

ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಪಾದಯಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಒಂದಾಗಿ ಸಮಾಜದ ರಥ ಎಳೆಯುವ ಸಮಯ ಬಂದಿದೆ. ಬೆಂಗಳೂರಿನವರೆಗೆ ಕೂಡಲ ಸಂಗಮ ಜಗದ್ಗುರುಗಳಿಗೆ ಜೊತೆ ಹೆಜ್ಜೆಗೆ ಹೆಜ್ಜೆ ಕೊಟ್ಟು ಪಾದಯಾತ್ರೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದಿಂದ ಕೈಗೊಂಡಿರುವ ಪಾದ ಯಾತ್ರೆಗೆ ವಚನಾನಂದ ಸ್ವಾಮೀಜಿ ಹರಪನಹಳ್ಳಿ ಯಲ್ಲಿ ಸ್ವಾಗತಿಸಿ ಜೊತೆಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದರೆ, ಹರಿಹರದ ಸಮಾರಂಭಕ್ಕೆ ಶ್ರೀಗಳು ಬಂದಿರಲಿಲ್ಲ. ನಂತರ ದಾವಣಗೆರೆಯ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲದೇ, ಜೊತೆಯಾಗಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

ಕೂಡಲಸಂಗಮದ ಜಗದ್ಗುರುಗಳು ಹಾಗೂ ತಾವು ಹಲವಾರು ವರ್ಷಗಳಿಂದ ಒಡನಾಟದಲ್ಲಿದ್ದೇವೆ. 2ಎ ಮೀಸಲಾತಿ ಸೇರಿದಂತೆ ಶ್ರೀಗಳು ಸಮಾಜದ ಹಿತಕ್ಕಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಮೀಸಲಾತಿಗಾಗಿ ಕೇಂದ್ರದ ಹಲವಾರು ಸಚಿವರ ಜೊತೆ ಮಾತನಾಡಿದ್ದೇವೆ ಎಂದೂ ಅವರು ಹೇಳಿದರು.

ಇದಕ್ಕೂ ಮುಂಚೆ ಮಾತಾನಾಡಿದ್ದ ಸಮಾಜದ ಮುಖಂಡರಾದ ವಿಜಯಾನಂದ ಕಾಶಪ್ಪನವರ್, ಪಾದಯಾತ್ರೆಯಲ್ಲಿ ಉಭಯ ಶ್ರೀಗಳು ಜೊತೆಯಾಗಿ ಪಾಲ್ಗೊಳ್ಳಬೇಕು. ಇದರಿಂದ ಸಮಾಜದ 20 ಲಕ್ಷ ಜನರು ಬೆಂಗಳೂರಿನಲ್ಲಿ ಸೇರುವಂತಾಗಬೇಕು ಎಂದಿದ್ದರು.

ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಕಲ್ಪಿಸಬೇಕಿದೆ. ಇದಕ್ಕಾಗಿ ಕೂಡಲಸಂಗಮದ ಜಗದ್ಗುರುಗಳು ಪಾದಯಾತ್ರೆ ಕೈಗೊಂಡರೆ ತಾವು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ವಚನಾನಂದ ಶ್ರೀಗಳು ಹೇಳುವ ಮೂಲಕ ಪರೋಕ್ಷವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಇಂಗಿತ ವ್ಯಕ್ತಪಡಿಸಿದ್ದರು.

ಆದರೆ, ನೆರೆದಿದ್ದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯದ ಕೂಗೆಬ್ಬಿಸಿದರು. ಆಗ ವಚನಾನಂದ ಶ್ರೀಗಳು ನಾಳೆಯಿಂದಲೇ ದಾವಣಗೆರೆಯಿಂದ ಹೊರಟು ಮುಂದುವರೆಯುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು.

error: Content is protected !!