ದಾವಣಗೆರೆ, ಜ.29- ಜಿಎಸ್ಟಿ ನಿಯಮಗಳ ಹೊರೆಗೆ ತೆರಿಗೆ ವಲಯ ತತ್ತರಿಸಿದ್ದು, ಜಿಎಸ್ಟಿ ತೆರಿಗೆಯನ್ನು ಸರಳೀಕರಣಗೊಳಿಸಿ, ಅವೈಜ್ಞಾನಿಕ ತೆರಿಗೆ ನಿಯಮಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ನೇತೃತ್ವದಲ್ಲಿ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಕೇಂದ್ರ ಸರ್ಕಾರದ ಜಿಎಸ್ಟಿ ಕಚೇರಿ ಮುಂಭಾಗದಲ್ಲಿ ತೆರಿಗೆ ಸಲಹೆಗಾರರು ಇಂದು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ 2017ರಲ್ಲಿ ಏಕರೂಪ ಸರಕು ಸೇವಾ ತೆರಿಗೆ ಕಾಯ್ದೆಯನ್ನು ರಾಷ್ಟ್ರವ್ಯಾಪಿ ಜಾರಿಗೆ ತಂದಾಗ ಮುಕ್ತಕಂಠದಿಂದ ಸ್ವಾಗತಿಸಿ ದ್ದ ಬಹುಪಾಲು ತೆರಿಗೆದಾರರು, ತೆರಿಗೆ ಸಲಹೆಗಾರರೇ ಇದೀಗ ತಿರಸ್ಕರಿಸು ವಂತಾ ಗಿದೆ. ಜಿಎಸ್ಟಿ ಅಡಿ ದಿನ ಕ್ಕೊಂದು ನಿಯಮಗಳನ್ನು ತರುತ್ತಿರುವ ಹಿನ್ನೆಲೆಯಲ್ಲಿ ತೆರಿಗೆದಾರರು ಮಾತ್ರವಲ್ಲದೇ ತೆರಿಗೆ ಸಲಹೆಗಾರರಿಗೆ ಈ ಕಾಯಿದೆ ಏನೆಂ ದು ಅರ್ಥವಾಗುತ್ತಿಲ್ಲ ಎಂದು ಪ್ರತಿಭಟ ನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಕಾರಣಕ್ಕೆ ಪಶ್ಚಿಮ ಮಹಾರಾಷ್ಟ್ರ ತೆರಿಗೆ ಸಮಾಲೋ ಚಕರ ಸಂಘ ಅಖಿಲ ಭಾರತ ಮಟ್ಟದ ಪ್ರತಿಭಟನೆಗೆ ಕರೆ ನೀಡಿದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧೆಡೆಯ 130ಕ್ಕೂ ಅಧಿಕ ತೆರಿಗೆ ಸಮಾಲೋಚಕರು, ತೆರಿಗೆದಾರರ ಸಂಘಟನೆಗಳು ಬೆಂಬಲ ನೀಡಿ ಸಿಜಿಎಸ್ಟಿ ಕಛೇರಿ ಎದುರು ಪ್ರತಿಭಟನೆಗೆ ಮುಂದಾಗಿ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ ಎಂದು ಹೇಳಿದರು.
ರಾಜ್ಯ ಸರ್ಕಾರಗಳಿಗಿದ್ದ ಪರೋಕ್ಷ ತೆರಿಗೆ ಅವಕಾಶವನ್ನು ಕೇಂದ್ರ ಸರ್ಕಾರ ಹಿಂಪಡೆದು ಏಕ ರೂಪ ಜಿಎಸ್ಟಿ ಕಾನೂನನ್ನು ರಾಷ್ಟ್ರವ್ಯಾಪಿ ಜಾರಿಗೆ ತಂದಾಗ ತೆರಿಗೆ ವಿಧಾನ ಸರಾಗವಾಗಿ ತೆರಿಗೆ ಹೊರೆ ಇಳಿಯುತ್ತದೆಂದು ಭಾವಿಸಿದ್ದ ತೆರಿಗೆ ಸಲಹೆಗಾರರು ತೆರಿಗೆದಾರರು ಸದ್ಯ ಅವೈಜ್ಞಾನಿಕವಾಗಿ ಅನುಷ್ಠಾನಗೊ ಳ್ಳಲ್ಪಟ್ಟಿರುವ ಜಿಎಸ್ಟಿ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಆರ್ಥಿಕವಾಗಿ ಹೊಡೆತ ಅನುಭವಿಸುವಂತಾಗಿದ್ದು, ವ್ಯಾಪಾರ ಹಾಗೂ ವೃತ್ತಿ ನಿರತರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರಾಷ್ಟ್ರದ ಪ್ರಗತಿ ಸೂಚ್ಯಂಕ ಮೈನಸ್ ಪ್ರತಿಶತಕ್ಕೆ ಇಳಿದಿರುವುದೇ ಜಿಎಸ್ಟಿಯ ಹೊಡೆತಕ್ಕೆ ಜ್ವಲಂತ ನಿದರ್ಶನವೆಂದು ವಿಶ್ಲೇಷಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಅಧ್ಯಕ್ಷ ಜಂಬಿಗಿ ರಾಧೇಶ್, ಉಪಾಧ್ಯಕ್ಷ ಹೆಚ್.ಎಸ್. ಮಂಜುನಾಥ್, ಕಾರ್ಯದರ್ಶಿ ಡಿ.ಎಂ. ರೇವಣಸಿದ್ದಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.