ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಕ್ರಾಂತಿಯ ರೂಪ

ಹರಿಹರ ತಲುಪಿದ ಪಾದಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳ ಎಚ್ಚರಿಕೆ

ದಾವಣಗೆರೆ, ಜ. 28 – ಇಷ್ಟು ದಿನ ಯಡಿಯೂರಪ್ಪನವರು ನಮ್ಮವರು ಎಂದು ನಂಬಿದ್ದೆವು. ಆದರೆ ನೀವು ನಮ್ಮನ್ನು ಬಿಸಿಲಿನಲ್ಲಿ ನಡೆಸಿದಿರಿ. 342 ಕಿ.ಮೀ. ಪಾದಯಾತ್ರೆ ಕ್ರಮಿಸಿದರೂ, ಮೀಸಲಾತಿ ಪ್ರಕ್ರಿಯೆ ಆರಂಭಿಸಿಲ್ಲ. ಇಷ್ಟು ದಿನ ಶಾಂತವಾಗಿ ನಡೆಯುತ್ತಿದ್ದ ನಮ್ಮ ಹೋರಾಟ ನಾಳೆಯಿಂದ ಬಾರಿಕೋಲು ಚಳವಳಿ ಮೂಲಕ ಕ್ರಾಂತಿ ಸ್ವರೂಪ ತಾಳಲಿದೆ. ಮುಂದಿನ ಆಗು-ಹೋಗುಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುಡುಗಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಪಾದಯಾತ್ರೆ ನಡೆಸುತ್ತಿರುವ ಶ್ರೀ ಗಳು, ಗುರುವಾರ ಹರಿಹರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಹಕ್ಕೊತ್ತಾಯ ಮಂಡಿಸಿದರು.

ಪಂಚಮಸಾಲಿಗಳು ಹುಂಬರು, ಸಪ್ಪೆ ಬೇಳೆ ರೊಟ್ಟಿ ತಿನ್ನುವ ಮಂದಿ ಎಂದು ನೀವು ತಿಳಿದಿದ್ದೀರಿ. ಆದರೆ ಪಂಚಮಸಾಲಿಗರಲ್ಲಿ ಹರಿಯುವ ರಕ್ತ ತಾಯಿ ಚನ್ನಮ್ಮನ ರಕ್ತ. ನಾವು ಹುಟ್ಟುಹೋರಾಟಗಾರರಾದ ನಾವು, ಇದೇ ಪ್ರಥಮ ಬಾರಿಗೆ ಹೋರಾಟದ ಮೂಲಕ ಬೀದಿಗೆ ಬಂದಿದ್ದೇವೆ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ಈ ದೇಹ ಎಂದಿಗಾದರೂ ಮಣ್ಣಲ್ಲಿ ಮಣ್ಣಾಗಿ ಗದ್ದುಗೆಯಾಗುತ್ತದೆ. ಆದರೆ ಪ್ರಾಣ ಮಾತ್ರ ಪಂಚಮಸಾಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಋಣ ತೀರಿಸ ಲಿಕ್ಕಾಗಿಯೇ ಇದೆ. ಮೀಸಲಾತಿ ಪಡೆದೇ ಪೀಠಕ್ಕೆ ಹೋಗುತ್ತೇನೆ.  ನನ್ನ ಗುರಿ ಬೆಂಗಳೂರಿಗೆ ತಲುಪುವುದೇ ಹೊರತು ಬೇರೆಡೆ ಹೋಗುವುದಲ್ಲ ಎಂದು ಹೇಳಿದರು.

8 ಜನ ಲಿಂಗಾಯತರು ರಾಜ್ಯ ದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಜಾತಿ ಆಧಾರದ ಮೇಲೆ ಸಮಾಜವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಆದರೆ ಯಡಿಯೂರಪ್ಪನವರು ಎಲ್ಲಿ ಹೋದರೂ, ನಾನು ನಿಮ್ಮವನು, ನನಗೆ ಬೆಂಬಲ ನೀಡಿ ಎಂದು ಹೇಳುತ್ತಿದ್ದರು. ಅವರ ಮಾತು ನಂಬಿ ಸಮಾಜ ಹಾಗೂ ಸ್ವಾಮೀಜಿಗಳು ಬೆಂಬಲಿಸಿದೆವು.  ಉಪವಾಸ ಸತ್ಯಾಗ್ರಹ ಮಾಡಿದಾಗ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಮಾತಿಗೆ ತಪ್ಪಿದ್ದರಿಂದ ಪಾದಯಾತ್ರೆ ಕೈಗೊಂಡಿದ್ದೇನೆ. ಪಾದಯಾತ್ರೆ ವೇಳೆ ಸಮಾಜದವರಿಗೆ ಮಂತ್ರಿ ಸ್ಥಾನ ನೀಡಿದ್ದೇನೆ. ಪಾದಯಾತ್ರೆ ಕೈ ಬಿಡಿ ಎಂದು ಮುಖ್ಯಮಂತ್ರಿಗಳು ಹೇಳಿದರು. ಆದರೆ ನಾನು ನಾನು ಮಂತ್ರಿ ಸ್ಥಾನಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಸ್ಥಾನಕೊಟ್ಟರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದೇನೆ. ಮಠಕ್ಕೆ ಅನುದಾನ ಕೊಟ್ಟರೆ, ಮಂತ್ರಿಸ್ಥಾನ ಕೊಟ್ಟರೆ, ನಿಗಮಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟರೆ ನಮಗೆ ಸಂತೋಷವಾಗಲ್ಲ. ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅನುಕೂಲವಾಗಲೆಂದು ಮೀಸಲಾತಿ ಕೇಳುತ್ತಿದ್ದೇನೆ. ಅದನ್ನು ಕೊಡಬೇಕು ಎಂದು ಹೇಳಿದರು.

ಬೀದಿಗಿಳಿದ ಸ್ವಾಮೀಜಿ ಬೆಂಬಲಿಸುತ್ತಾರೋ ಅಥವಾ ತಂಪಾದ ಸ್ಥಳದಲ್ಲಿರುವ ಸ್ವಾಮೀಜಿ ಜೊತೆ ಇರುತ್ತಾರೋ ಎಂಬ ಚಿಂತೆ ಇತ್ತು. ಆದರೆ ಪಂಚಮಸಾಲಿ ಮಂದಿ  ಕಾಯಕ ಮಾಡುವವರಿಗೆ ಮಾತ್ರ ಗೌರವ ಕೊಡುತ್ತಾರೆ. ಬಣ್ಣದ ಮಾತುಗಳನ್ನಾಡುವವರಿಗೆ  ಗೌರವ ಕೊಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಆರಂಭದ ಹೆಜ್ಜೆ ಇಡುವಾಗ ಪಂಚಮಸಾಲಿ ನಾಯಕರು ಕೊರಳಿಗೆ ಹಾರ ಹಾಕಿ ಮುಂದೆ ಬಿಡುತ್ತಾರೆ. ಕಷ್ಟವಾಗುತ್ತದೆ ಎಂದು ಅನೇಕರು ಹೇಳಿದ್ದರು. ಆದರೆ  ಸಮಾಜ ನನ್ನ ಕೈ ಬಿಡಲಿಲ್ಲ. ಪಾದಯಾತ್ರೆಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡುತ್ತಾ, ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಹೋರಾಟವಾಗುತ್ತದೆ. ಖಂಡಿತಾ ಶ್ರೀಗಳ ಹೋರಾಟಕ್ಕೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ರಾಣೇಬೆನ್ನೂರು ವಕೀಲ ಶಿವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. 

ನಂದಿಗುಡಿ ನೊಳಂಬ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಪದ್ಮಶಾಲಿ ಸಮಾಜದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಬಾಳೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮಾಜಿ ಸಂಸದ ಶಿವರಾಮನಗೌಡ, ಕುನ್ನೂರು, ದಾವಣಗೆರೆ ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್, ಶ್ರೀಮತಿ ವೀಣಾ ಕಾಶೆಂಪೂರ, ನಂದಿಹಳ್ಳಿ ಹಾಲಪ್ಪ, ಬೇವಿನಮರದ, ರವಿಕಾಂತ ಪಾಟೀಲ್, ಪಿ.ಸಿ. ಸಿದ್ದನಗೌಡ್ರು, ಪ್ರಭಣ್ಣ ಹುಣಸಿಕಟ್ಟಿ, ಶ್ರೀಶೈಲಪ್ಪ ಬಿದನೂರು, ನೀಲಕಂಠ ಅಸೂಟಿ,  ಅಮರೇಶ ಸಂಗಣ್ಣ ಕರಡಿ, ಅರಸಿಕೆರೆ ಕೊಟ್ರೇಶ್, ಹನಗವಾಡಿ ವೀರೇಶ್ ಇತರರು ಉಪಸ್ಥಿತರಿದ್ದರು.


ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಕ್ರಾಂತಿಯ ರೂಪ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!