ಹದಿನೈದು ದಿನಗಳಲ್ಲಿ ನಾನೇ ಹಕ್ಕು ಪತ್ರ ವಿತರಿಸುವೆ : ಸಚಿವ ಜಗದೀಶ ಶೆಟ್ಟರ್
ದಾವಣಗೆರೆ, ಜ. 27 – ಹರಿಹರದ ಕೆ.ಎಸ್.ಎಸ್.ಐ.ಡಿ.ಸಿ. ವಸಾಹತು ಪ್ರದೇಶದ 120 ಘಟಕಗಳ ಮಾಲೀಕರಿಗೆ ಕೈಗಾರಿಕಾ ಪ್ಲಾಟ್‌ಗಳ ಕ್ರಯ ಪತ್ರವನ್ನು ಇನ್ನೂ ಹದಿನೈದು ದಿನಗಳಲ್ಲಿ ವಿತರಿಸಲು ಕ್ರಮ ತೆಗೆದುಕೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವಾಗ, ಅವರು ಈ ಸೂಚನೆ ನೀಡಿದ್ದಾರೆ.
ಬುಧವಾರವಷ್ಟೇ ಈ ಆಸ್ತಿ ಕೆ.ಎಸ್.ಎಸ್.ಐ.ಡಿ.ಸಿ. ಹೆಸರಿಗೆ ಬದಲಾಗಿದೆ. ಇನ್ನೊಂದು ವಾರದಲ್ಲಿ ಆಸ್ತಿಗಳ ಪೋಡಿ ಕ್ರಮ ತೆಗೆದುಕೊಳ್ಳಬೇಕು. ಹದಿನೈದು ದಿನಗಳಲ್ಲಿ ಕ್ರಯಪತ್ರ ವಿತರಣೆ ಆಗಬೇಕು. ನಾನೇ ಕ್ರಯಪತ್ರಗಳನ್ನು ಹರಿಹರಕ್ಕೆ ಬಂದು ವಿತರಿಸುತ್ತೇನೆ ಎಂದು ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ಸಮಸ್ಯೆ ನೆನೆಗುದಿಯಲ್ಲಿತ್ತು.
ಇದೇ ಸಂದರ್ಭದಲ್ಲಿ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ದೀಪ, ರಸ್ತೆ ಹಾಗೂ ಚರಂಡಿಯ ಸಮಸ್ಯೆಗಳಿರುವ ಬಗ್ಗೆ ಉದ್ಯಮಿ ಮುದೇಗೌಡ್ರು ದೂರಿದರು.
ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶೆಟ್ಟರ್, ಕೈಗಾರಿಕೋದ್ಯಮಿಗಳೂ ಸಹ ನಗರಸಭೆಗೆ ಕಳೆದ ಎಂಟು ವರ್ಷಗಳಿಂದ ಹೊಂದಿರುವ ಬಾಕಿಯನ್ನು ಹಂತ ಹಂತವಾಗಿ ತೀರಿಸಬೇಕು ಎಂದು ತಾಕೀತು ಮಾಡಿದರು.
ಟೆಕ್ಸ್‌ಟೈಲ್ ಪಾರ್ಕ್ ಮುಕ್ತ : ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಟೆಕ್ಸ್‌ಟೈಲ್ ಪಾರ್ಕ್‌ನಲ್ಲಿ ಬೇರೆ ಉದ್ಯಮಗಳ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ದಾವಣಗೆರೆಗೆ ಕೈಗಾರಿಕೆಗಳನ್ನು ದೂಡುತ್ತಿದ್ದೇವೆ : ಶೆಟ್ಟರ್
ದಾವಣಗೆರೆ, ಜ. 27 – ಬೆಂಗಳೂರಿನಲ್ಲಿ ಕೈಗಾರಿಕೆಗಳು ಮಿತಿ ಮೀರಿವೆ. ಹೀಗಾಗಿ ಯಾರಾದರೂ ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪಿಸುತ್ತೇವೆ ಎಂದರೆ ದಾವಣಗೆರೆಯಂತಹ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ದೂಡುತ್ತಿದ್ದೇವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೈಗಾರಿಕೆಗಳು ಪ್ರಸಕ್ತ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ. ಬೆಂಗಳೂರಿನಲ್ಲಿ ಕೈಗಾರಿಕಾ ಹೊರೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು – ಮುಂಬೈ ಮಾರ್ಗವನ್ನು ಕೈಗಾರಿಕಾ ಕಾರಿಡಾರ್ ಆಗಿ ಪರಿವರ್ತಿಸಲಾಗಿದೆ. ತುಮಕೂರಿನಲ್ಲಿ ಈಗಾಗಲೇ ಸಾವಿರಾರು ಕೋಟಿ ರೂ.ಗಳ ಹೂಡಿಕೆಯಾಗುತ್ತಿದೆ. ಇದೇ ಮಾರ್ಗದಲ್ಲಿ ಬರುವ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿಗಳಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು.
ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ವಿಶೇಷ ಹೂಡಿಕೆ ವಲಯ ಸ್ಥಾಪಿಸಲಾಗಿದೆ. ಈ ಮೂಲಕವು ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದವರು ತಿಳಿಸಿದರು.
ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ಕೈಗಾರಿಕೆಗಳನ್ನು ಸೆಳೆಯಲು ರಾಜ್ಯಾದ್ಯಂತ ನಾನು ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರೈತರ ಶೋಷಣೆ : ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಕುಮ್ಮಕ್ಕಿನಿಂದಾಗಿ ದೆಹಲಿಯಲ್ಲಿ ಹೋರಾಟಗಳು ನಡೆಯುತ್ತಿದ್ದು, ಇದರಿಂದ ಮುಗ್ಧ ರೈತರ ಶೋಷಣೆಯಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರಿಗೆ ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ಮೋದಿ ಆಡಳಿತದ ವಿರುದ್ಧ ಮಾತನಾಡಲು ವಿಷಯಗಳಿಲ್ಲ. ಹೀಗಾಗಿ ಏನಾದರೂ ಟೀಕೆ ಮಾಡುವ ಸಲುವಾಗಿ ಕೃಷಿ ಕಾಯ್ದೆಗಳನ್ನು ಟೀಕಿಸುವ ಕೆಲಸ ಮಾಡುತ್ತಿವೆ ಎಂದರು.
ಕೈಗಾರಿಕೆಗಳಿಗೆ ನೇರ ವಿದ್ಯುತ್
ಕೈಗಾರಿಕೆಗಳು ಇನ್ನು ಮುಂದೆ ಸೌರ ವಿದ್ಯುತ್ ಉತ್ಪಾದಕರಿಂದ ನೇರವಾಗಿ ವಿದ್ಯುತ್ ಖರೀದಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ತಿಳಿಸಿದ್ದಾರೆ. ಕೈಗಾರಿಕಾ ಒಕ್ಕೂಟಗಳು ಉತ್ಪಾದಕರಿಂದ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ)ದ ಮೂಲಕ ವಿದ್ಯುತ್ ಖರೀದಿಸಬಹುದು. ಇದರಿಂದಾಗಿ ವಿದ್ಯುತ್ ವೆಚ್ಚ ಕಡಿಮೆಯಾಗಲಿದೆ ಎಂದವರು ಹೇಳಿದ್ದಾರೆ.
ನೋಟಿಸ್ ಕೊಡಬೇಡಿ, ಸಮಸ್ಯೆಗಳಿಗೆ ಸ್ಪಂದಿಸಿ
ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರಿ ಇಲಾಖೆಗಳು ಕಾರ್ಯ ನಿರ್ವಹಿಸಬೇಕು. ಕೈಗಾರಿಕೆಗಳಿಗೆ ನೋಟಿಸ್ ಕೊಡಲು ಸರ್ಕಾರ ಇಲಾಖೆಗಳನ್ನು ರೂಪಿಸಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕಾರ್ಮಿಕರ ವಿಷಯಕ್ಕೆ ಸಂಬಂಧಿಸಿದಂತೆ ಕೈಗಾರಿಕೆಯೊಂದಿಗೆ ನೋಟಿಸ್ ಕೊಟ್ಟ ಪ್ರಕರಣ ಸಭೆಯ ಗಮನಕ್ಕೆ ತರಲಾಯಿತು.
ಆಗ ಮಾತನಾಡಿದ ಶೆಟ್ಟರ್, ನೋಟಿಸ್ ಕೊಡುವ ಬದಲು ಸಮಸ್ಯೆ ಬಗೆಹರಿಸಿ. ಕೈಗಾರಿಕೆಗಳು ಈಗಾಗಲೇ ಬಳಲಿವೆ. ಕೈಗಾರಿಕೆಗಳು ಮುಚ್ಚಿದರೆ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಗನೂರು ಟೆಕ್ಸ್‌ಟೈಲ್‌ನ ಮಾಲೀಕ ಗುರುಪಾದಪ್ಪ, ತಮ್ಮ ಜವಳಿ ಘಟಕ ನಷ್ಟಕ್ಕೆ ಗುರಿಯಾಗಿದೆ. ಪ್ಯಾಕೇಜಿಂಗ್ ಘಟಕ ಸ್ಥಾಪಿಸಲು ಸಿದ್ಧನಿದ್ದೇನೆ. ಆದರೆ, ಅನುಮತಿ ಸಿಗದೇ ತೊಂದರೆಯಾಗಿದೆ ಎಂದು ಭಾವುಕರಾಗಿ ಹೇಳಿದರು.
ಈಗಿರುವ ಜವಳಿ ಉದ್ಯಮಗಳಿಗೆ ತೊಂದರೆಯಾಗದ ರೀತಿಯಲ್ಲಿ ಉದ್ಯಮಗಳಿಗೆ ಸೂಕ್ತ ಅವಕಾಶ ನೀಡಬೇಕು. ಇದರಿಂದ ಖಾಲಿ ಉಳಿದಿರುವ ಪ್ಲಾಟ್‌ಗಳ ಬಳಕೆಯಾಗಿ ಜನರಿಗೂ ಕೆಲಸ ಸಿಗುತ್ತದೆ ಎಂದು ಸಚಿವ ಶೆಟ್ಟರ್ ಹೇಳಿದರು.
ಸಾಲ ಕೊಡಿ : ಎನ್.ಪಿ.ಎ. ಆಗಿರುವ ಗೋದಾಮಿನಲ್ಲಿ ಮೆಕ್ಕೆಜೋಳದ ಘಟಕ ಸ್ಥಾಪಿಸಲು ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದು ಉದ್ಯಮಿ ತುರ್ಚಘಟ್ಟದ ಬಸವರಾಜಪ್ಪ ಸಭೆಗೆ ತಿಳಿಸಿದರು.
ಈ ಬಗ್ಗೆ ಸಭೆಯಲ್ಲಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ ಅವರಿಗೆ ಸೂಚನೆ ನೀಡಿದ ಸಚಿವರು ಕೈಗಾರಿಕೆ ಸ್ಥಾಪಿಸುವವರಿಗೆ ತೊಂದರೆಯಾಗದ ರೀತಿಯಲ್ಲಿ ಸಾಲ ವಿತರಿಸಬೇಕು ಎಂದು ತಿಳಿಸಿದರು.
ಕೈಗಾರಿಕೆಗೆ ಯುಜಿಡಿ : ದಾವಣಗೆರೆ ಕೈಗಾರಿಕಾ ಪ್ರದೇಶದಲ್ಲಿ ಯು.ಜಿ.ಡಿ. ಸೌಲಭ್ಯ ಕಲ್ಪಿಸುವಂತೆ ಉದ್ಯಮಿ ಶಂಭುಲಿಂಗಪ್ಪ ಮನವಿ ಮಾಡಿಕೊಂಡರು.
ಕೆಎಸ್‌ಎಸ್‌ಐಡಿಸಿ ಮೂಲಕ ಸೌಲಭ್ಯ ಕಲ್ಪಿಸಲಾಗುವುದು. ಇದರ ಜೊತೆಗೆ ಒಳಚರಂಡಿ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೂ ಬಳಸಿಕೊಳ್ಳುವಂತೆ ಕೆಎಸ್‌ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮ ಪ್ರಸಾದ್ ಸೂಚಿಸಿದರು.
ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ಉಪ ನಿರ್ದೇಶಕ ಮಂಜುನಾಥ್, ಭೂಸ್ವಾಧೀನ ಅಧಿಕಾರಿ ಸರೋಜಾ, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಬಸವರಾಜು, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ಹರಿಹರ ನಗರಸಭೆ ಆಯುಕ್ತ ಬಿ.ಟಿ. ಉದಯ್ ಕುಮಾರ್, ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್, ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್ ಎನ್.ತಡಕನಹಳ್ಳಿ, ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಮತ್ತಿತರರು ಉಪಸ್ಥಿತರಿದ್ದರು.