ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ನೀಡಲು ಸರ್ಕಾರದ ಭರವಸೆ

ದಾವಣಗೆರೆ, ಜ.26- ರಾಜ್ಯದಲ್ಲಿ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತರಬೇಕೆಂಬ ಮನವಿಗೆ ಸ್ಪಂದಿಸಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದಿಸುವುದಾಗಿ ಭರವಸೆ ನೀಡಿರುವುದಾಗಿ  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ತಿಳಿಸಿದರು.

ನಗರದ ಕೂಡಲೀ ಶಂಕರ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ವೇಳೆ ಘೋಷಿಸಿದ್ದ ಶೇ.10ರಷ್ಟು ಮೀಸಲಾತಿ ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ 9 ರಾಜ್ಯಗಳಲ್ಲಿ ಘೋಷಣೆಯಾಗಿದೆ. ರಾಜ್ಯದಲ್ಲೂ ಮೀಸಲಾತಿ ಜಾರಿಗೆ ತರುವಂತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.

23 ಜಿಲ್ಲೆಗಳಲ್ಲಿ ಪುರೋಹಿತರ ಪರಿಷತ್ ಸಭೆಗಳು ಸ್ಥಾಪನೆಯಾಗಿವೆ.  ಬ್ರಾಹ್ಮಣ ಮಂಡಳಿಯಿಂದ 22 ಯೋಜನೆ ಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಅವುಗಳಲ್ಲಿ 8 ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ‌ ಎಂದರು.

ನಗರ ಡಿವೈಎಸ್‌ಪಿ ಯು. ನಾಗೇಶ್ ಐತಾಳ್  ಮಾತನಾಡಿ, ಇಂದಿನ ದಿನಗಳಲ್ಲಿ ಅರ್ಚಕರು ಸಂಕಷ್ಟದಲ್ಲಿ ಇದ್ದು, ಅದರಲ್ಲೂ ಕೋವಿಡ್ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸಮಾಜ ಹಾಗೂ ಸಂಘಟನೆಗಳು ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಜಯತೀರ್ಥಾಚಾರ್ ವಡೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಪವನಕುಮಾರ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ‌ ಸಂಘಟನಾ ಕಾರ್ಯದರ್ಶಿ ಪಿ. ರಮೇಶ್ ಜೋಯ್ಸ್, ಖಜಾಂಚಿ ಎಂ.ಬಿ. ಪ್ರದೀಪ್ ಭಟ್,‌ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸತ್ಯನಾರಾಯಣ ರಾವ್, ನೇತ್ರ ತಜ್ಞ ಡಾ. ಮೋಹನ್ ನಾಡಿಗೇರ್, ಕಾರ್ಯದರ್ಶಿ ಡಿ. ಚಿದಂಬರ ಮೂರ್ತಿ, ಖಜಾಂಚಿ ಸುಬ್ಬಣ್ಣಾಚಾರ್ ವಡೇರ್, ಜಂಟಿ ಕಾರ್ಯದರ್ಶಿ ಶ್ರೀಪಾದ ದೇಶಪಾಂಡೆ, ನಿರ್ದೇಶಕರು ಗಳಾದ ನಾರಾಯಣ ಡಿ. ಜೋಶಿ,
ಕೆ.ಎಸ್. ಪ್ರಸನ್ನಾಚಾರ್, ಕೆ.ಬಿ. ಶರ್ಮಾ ಸೇರಿದಂತೆ ಇತರರು ಇದ್ದರು. 

ಹಿರಿಯ ಸಲಹೆಗಾರ ಡಾ. ಸಿ.ಕೆ. ಆನಂದತೀರ್ಥಾಚಾರ್ ನಿರೂಪಿಸಿದರು. ರಂಗನಾಥ್ ನಾಡಿಗೇರ್ ಸ್ವಾಗತಿಸಿದರು.

error: Content is protected !!