ದಾವಣಗೆರೆ ನಗರದಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಜನ ಮೆಚ್ಚುಗೆ ಗಳಿಸಿದ ವಿಕಾಸ ತರಂಗಿಣಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
1995ರಲ್ಲಿ ಆರಂಭವಾದ ವಿಕಾಸ ತರಂಗಿಣಿ, ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಏಪ್ರಿಲ್ 1 ರಿಂದ ಮೇ 15ರವರೆಗೆ ಮಹಾನಗರ ಪಾಲಿಕೆ ಮುಂಭಾಗ ಉಚಿತ ಮಜ್ಜಿಗೆ ಶಿಬಿರ ಏರ್ಪಡಿಸಿ ಜನತೆಗೆ ಬಿಸಿಲಿನ ದಾಹವನ್ನು ತೀರಿಸುತ್ತಿದೆ.
ಇಂದಿಗೂ ಸಹ ನಗರದ ಜನತೆ ಬೇಸಿಗೆ ಬಂತೆಂದರೆ ವಿಕಾಸ ತರಂಗಿಣಿಯ ಉಚಿತ ಮಜ್ಜಿಗೆಯನ್ನು ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ. ನಗರದ ವಿವಿಧ ಸಂಘ, ಸಂಸ್ಥೆಗಳೂ ಸಹ ಮಜ್ಜಿಗೆ ವಿತರಣೆ ಮಾಡುವಂತೆ ಪ್ರೇರಣೆ ನೀಡಿದೆ ಈ ವಿಕಾಸ ತರಂಗಿಣಿ.
ಸಾಮಾಜಿಕ ಸೇವಾ ಕಾರ್ಯಗಳ ಜೊತೆಗೆ ಜನತೆಯಲ್ಲಿ ಅಧ್ಯಾತ್ಮದ ಅರಿವನ್ನೂ ಮೂಡಿಸುತ್ತಿದೆ. ಮಹಾತ್ಮರಿಂದ ಪ್ರವಚನಗಳು, ಸಂಜೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ.
ಪ್ರತಿವರ್ಷ ಶ್ರೀ ಜಿಯ್ಯರ್ಸ್ವಾಮಿಗಳ ಹುಟ್ಟು ಹಬ್ಬವನ್ನು ಆಚರಿಸಿ, ದಾವಣಗೆರೆ ಉಪಕಾರಾಗೃಹದಲ್ಲಿ ಇರುವ ಖೈದಿಗಳ ಜೊತೆಯಲ್ಲಿ ದೀಪಾವಳಿ ಆಚರಿಸಿ, ಸಿಹಿ ಊಟ ಬಡಿಸಿ, ಅವರ ಪರಿವರ್ತನೆಗಾಗಿ ಪ್ರಮುಖರಿಂದ ಉಪನ್ಯಾಸಗಳನ್ನು ನಡೆಸುತ್ತಿದೆ.
ಖೈದಿಗಳಿಗೆ ಬೇಕಾಗುವ ಬಳಕೆ ಸಾಮಗ್ರಿಗಳು, ಮನೋರಂಜನೆಗಾಗಿ ಕೇರಂ ಬೋರ್ಡ್ ನೀಡಿದೆ. ಖೈದಿಗಳಲ್ಲಿನ ಪ್ರತಿಭೆ ಗುರುತಿಸಿ ಬಹುಮಾನ ನೀಡುತ್ತಿದೆ.
ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ ಇಂದು ಚಾಲನೆ
ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ವಿಕಾಸ ತರಂಗಿಣಿ ರಜತ ಮಹೋತ್ಸವ ಕಾರ್ಯಕ್ರಮ ಹಾಗೂ ಈ ವರ್ಷದ ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅವರು ಚಾಲನೆ ನೀಡಲಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಸದಸ್ಯ ಬಿ.ಜಿ. ಅಜಯ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ಕಾನ್ ಅವಧೂತ ಚಂದ್ರ ಪ್ರಭುಗಳಿಂದ ಆಶೀರ್ವಚನ ನಡೆಯಲಿದೆ.
ನಗರದಲ್ಲಿ ಮಾರ್ಚ್ 28 ರಿಂದ ಜೂನ್ 30ರ ವರೆಗೆ ಲಾಕ್ಡೌನ್ ಸಂದರ್ಭದಲ್ಲಿ ನಿತ್ಯ ಎರಡು ಸಾವಿರ ಜನರಿಗೆ ಅನ್ನ ಪ್ರಸಾದವನ್ನೂ, ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ, ಭಿಕ್ಷುಕರಿಗೆ, ಬಡವರು ಮತ್ತು ಆಸ್ಪತ್ರೆಯಲ್ಲಿರುವ ಜನರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಮಾಡಿರುವುದು ವಿಕಾಸ ತರಂಗಿಣಿ ಮಾಡಿದ ಹೆಮ್ಮೆಯ ಕಾರ್ಯ.
ಈ ಸಂಕಷ್ಟ ಸಮಯದಲ್ಲಿ ದಾವಣಗೆರೆಯ ಮಹಾಜನತೆ ಸ್ಪಂದಿಸಿ ಹೆಚ್ಚಿನ ದಾನ ನೀಡಿದ್ದಾರೆ. ಕೊರೊನಾ ಲೆಕ್ಕಿಸದೆ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡ ವಿಕಾಸ ತರಂಗಿಣಿಯ ಸತ್ಯನಾರಾಯಣ ಅವರು, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಮಜ್ಜಿಗೆ ಎಂಬ ಅಮೃತ
ಮಜ್ಜಿಗೆಗೆ ಸಂಸ್ಕೃತದಲ್ಲಿ ತರ್ಕಮ್, ಮಾಧಿತಂ ಹಾಗೂ ಉದಾಶ್ವಿಟ್ಟು ಎಂಬ ಮೂರು ಹೆಸರುಗಳಿವೆ.
ತರ್ಕಮ್ : ಮೊಸರಿಗೆ ಕಾಲು ಭಾಗ ಮಾತ್ರ ನೀರು ಬೆರೆಸಿ ಉಪಯೋಗಿಸಬಹುದಾದುದು.
ಮಾಧಿತಂ: ಸ್ವಲ್ಪಮಟ್ಟಕ್ಕೆ ನೀರು ಬೆರೆಸಿ ಉಪಯೋಗಿಸಿದರೆ ಇದು ಮಾದಿತಂ ಎಂದು ಕರೆಯುತ್ತಾರೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
ಉದಾಶ್ವಿಟ್ಟು: ಹೆಚ್ಚಿನ ನೀರನ್ನು ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ ಉಪಯೋಗಿಸುವುದು ಉದಾಶ್ವಿಟ್ಟು. ಇದು ಆರೋಗ್ಯಕ್ಕೆ ಉತ್ತಮವಾದುದು. ಇದರಿಂದ ಯಾವುದೇ ಕಾಯಿಲೆ ಬರುವುದಿಲ್ಲ. ದೇಹದ ದುರ್ಬಲತೆಗಳು, ಚರ್ಮರೋಗಗಳು, ದೀರ್ಘಕಾಲದ ಕಾಯಿಲೆಗಳು, ಕೊಬ್ಬು ಕಡಿಮೆ ಮಾಡುತ್ತದೆ. ಈ ಮಜ್ಜಿಗೆ ಸೇವನೆಯಿಂದ ದೇಹವು ಉತ್ತಮ ಹಿಡಿತ ಹೊಂದಿರುತ್ತದೆ. ಮೊಸರಿಗಿಂತ ಮಜ್ಜಿಗೆ ಉತ್ತಮ. ಆದ್ದರಿಂದ ಬೇಸಿಗೆಯಲ್ಲಿ ನಾವು ಹೆಚ್ಚು ಮಜ್ಜಿಗೆ ಸೇವಿಸಬೇಕು. ಫ್ರಿಡ್ಜ್ನಲ್ಲಿಟ್ಟ ಮಜ್ಜಿಗೆ ಸೇವನೆ ಒಳಿತಲ್ಲ. ಹೆಚ್ಚು ವಯಸ್ಸಾದವರು ಹೆಚ್ಚು ಮಜ್ಜಿಗೆ ಕುಡಿದರೆ ಒಳ್ಳೆಯದು. ಬೇಸಿಗೆ ಅಷ್ಟೇ ಅಲ್ಲದೆ ಎಲ್ಲಾ ಋತುಗಳಲ್ಲೂ ಉಪಯೋಗಿಸಬಹುದಾದ ಅಮೃತ ಮಜ್ಜಿಗೆ.
12 ವರ್ಷಗಳಿಗೊಮ್ಮೆ ಬರುವ ಕಾವೇರಿ ಕುಂಭಮೇಳ ಪುಷ್ಕರ ಸಂದರ್ಭದಲ್ಲಿ ಮೈಸೂರು, ಶ್ರೀರಂಗಪಟ್ಟಣದಲ್ಲಿ 12 ದಿನಗಳ ಕಾಲ ಬೇರೆ ಬೇರೆ ರಾಜ್ಯ ಮತ್ತು ದೂರ ಪ್ರಾಂತ್ಯಗಳಿಂದ ಬರುವ ಭಕ್ತಾದಿಗಳಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಿದೆ.
2020ರ ನವೆಂಬರ್ನಲ್ಲಿ ನಡೆದ ತುಂಗಭದ್ರಾ ಪುಷ್ಕರ ಕುಂಭಮೇಳದಲ್ಲಿ ಕೊರೊನಾ ನಿವಾರಣೆ ಮತ್ತು ಲೋಕ ಕಲ್ಯಾಣಕ್ಕಾಗಿ 12 ದಿನಗಳ ಕಾಲ ಬ್ರಹ್ಮ ಯಜ್ಞವನ್ನು ಆಚರಿಸಿ, ಅತಿಥಿಗಳಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಕಳೆದ 4 ವರ್ಷಗಳ ಹಿಂದೆ ಅನಾವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ಮಳೆರಾಯನ ಪ್ರಾರ್ಥನೆಗಾಗಿ ವರುಣ ಯಾಗವನ್ನು ಮತ್ತು ಶ್ರೀರಾಮ ತಾರಕ ಯಜ್ಞವನ್ನು ಸಹ ದಾವಣಗೆರೆ ಆರ್.ಹೆಚ್. ಛತ್ರದಲ್ಲಿ ನೆರವೇರಿಸಲಾಗಿತ್ತು.
ಶ್ರಾವಣ ಮಾಸದಲ್ಲಿ ಆರ್.ಹೆಚ್. ಛತ್ರದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಸಾಮೂಹಿಕವಾಗಿ ನಡೆಸಲಾಗಿತ್ತು. `ಮರ ಬೆಳೆಸಿ, ನಾಡು ಉಳಿಸಿ’ ಈ ಕಾರ್ಯಕ್ರಮದಲ್ಲಿ ಪ್ರಕೃತಿ ಪ್ರೇಮಿಗಳಿಗೆ ಸನ್ಮಾನಿಸಿ, ಆರ್ಥಿಕವಾಗಿ ಸಹಾಯ ಮಾಡಲಾಗಿತ್ತು.
65 ವರ್ಷಗಳ ಕಾಲ ದಿನಪತ್ರಿಕೆ ಮಾರುವ ಇಳಿ ವಯಸ್ಸಿನ ಕಾಯಕ ಪುರುಷರನ್ನು ಗುರುತಿಸಿ, ಸನ್ಮಾನಿಸಿ, ಆರ್ಥಿಕ ಸಹಾಯ ನೀಡಲಾಗಿತ್ತು.
ಅನಾಥ ಆಶ್ರಮಗಳಲ್ಲಿದ್ದವರಿಗೆ ಮನರಂಜನೆಗಾಗಿ ಟಿ.ವಿ. ಮತ್ತು ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಹಣ್ಣು ಇತ್ಯಾದಿ ವಿತರಿಸಲಾಗಿದೆ. ಹಲವೆಡೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಗಿದೆ.
2017 ರಲ್ಲಿ ರಾಮಾನುಜ `ಸಹಸ್ರಾಬ್ದಿ’ (1000 ವರ್ಷ) ಕಾರ್ಯಕ್ರಮವನ್ನು ತೊಗಟವೀರ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಗಿತ್ತು. ಹೀಗೆ ಅನೇಕ ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿಕಾಸ ತರಂಗಿಣಿಗೆ ನಗರದ ಅನೇಕ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. 25ರ ಹರೆಯದ ಈ ಸಂಸ್ಥೆ ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಲಿ.