ಕಾಯ್ದೆ : ನಗರದಲ್ಲೂ ಟ್ರ್ಯಾಕ್ಟರ್ ಪರೇಡ್

ಜನಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ ಆಚರಿಸುವ  ಯಾವುದೇ ಅರ್ಹತೆ ಇಲ್ಲ 

– ಹೆಚ್.ಕೆ. ರಾಮಚಂದ್ರಪ್ಪ

ದಾವಣಗೆರೆ, ಜ.26- ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುವ ಗಣರಾಜ್ಯೋತ್ಸವ ಪರೇಡ್‌ ಬೆಂಬಲಿಸಿ, ನಗರದಲ್ಲೂ ಮಂಗಳವಾರ ಟ್ಕಾಕ್ಟರ್ ಪರೇಡ್ ನಡೆಸಲಾಯಿತು. ವಿವಿಧ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಟ್ರಾಕ್ಟರ್ ಪರೇಡ್‌ನಲ್ಲಿ ಭಾಗವಹಿಸಿದ್ದವು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾ ರ್ಪಣೆ ಮಾಡುವ ಮೂಲಕ ಟ್ರ್ಯಾಕ್ಟರ್ ಪರೇಡ್‌ಗೆ ಚಾಲನೆ ನೀಡಲಾಯಿತು. 

25 ಕ್ಕೂ ಹೆಚ್ಚು ಟ್ರಾಕ್ಟರ್‍ಗಳು ಪರೇಡ್‌ ನಡೆಸಿದವು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಅಖಿಲ ಭಾರತ ಕಿಸಾನ್ ಸಭಾ, ಎಐಟಿಯುಸಿ, ನೆರಳು ಬೀಡಿ ಕಾರ್ಮಿಕರ ಸಂಘಟನೆ, ದಲಿತ ಶೋಷಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ, ಕೇಂದ್ರ ಸರಕಾರ ರೈತರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಹೀಗಾಗಿ ಇಂದು ದೇಶದಾದ್ಯಂತ ರೈತರು, ಕಾರ್ಮಿಕರಿಂದ ಗಣರಾಜ್ಯೋತ್ಸವದಲ್ಲಿ ಟ್ರಾಕ್ಟರ್ ಪರೇಡ್ ನಡೆಸಲಾಗಿದೆ ಎಂದು ಹೇಳಿದರು. ಕೃಷಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರಕಾರ ರೈತ, ಕಾರ್ಮಿಕರ ಬೆನ್ನೆಲುಬು ಮುರಿದಿದೆ. ಬಿಎಸ್‍ಎನ್‍ಎಲ್, ಎಲ್‍ಐಸಿ, ಬಿಎಚ್‍ಎಲ್, ರೈಲ್ವೆ, ವಿಮಾನ ಖಾಸಗೀಕರಣ ಮಾಡಿರುವ ಸರಕಾರ ಈಗ ನೂತನ ಕೃಷಿ ಕಾಯ್ದೆಗಳ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ವಹಿಸಲು ಹೊರಟಿದೆ. ದೇಶ ಆಳುತ್ತಿರುವ ಜನಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ ಆಚರಿಸುವ  ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್,  ಕರಾಳ ಕೃಷಿ ಕಾಯ್ದೆ ರದ್ದು ಪಡೆಸುವ ವರೆಗೂ ಹೋರಾಟ ಮುಂದು ವರೆಯಲಿದೆ ಎಂದು ಎಚ್ಚರಿಸಿದರು.

ನೆರಳು ಬೀಡಿ ಕಾರ್ಮಿಕರ ಸಂಘದ ಜಬಿನಾ ಖಾನಂ, ವಿವಿಧ ಸಂಘಟನೆಗಳ ಮುಖಂಡರಾದ ಪೂಜಾರ್ ಅಂಜಿನಪ್ಪ, ಆವರಗೆರೆ ಉಮೇಶ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಆವರಗೆರೆ ಚಂದ್ರು, ಆನಂದರಾಜ್, ಇ.ಶ್ರೀನಿವಾಸ್, ಆವರಗೆರೆ ವಾಸು, ಐರಣಿ ಚಂದ್ರು, ಕೆ.ಬಾನಪ್ಪ, ದಾಕ್ಷಾಯಣಮ್ಮ ಮಲ್ಲಿಕಾರ್ಜುನ್, ಶಿರಿನ್ ಭಾನು, ಕೊಂಡಜ್ಜಿ ಮಲ್ಲಿಕಾರ್ಜುನ್, ಹೆಗ್ಗೆರೆ ರಂಗಪ್ಪ, ಆಲೂರು ಪುಟ್ಟನಾಯ್ಕ, ಹೂವಿನಮಡು ಅಂಜಿನಪ್ಪ, ರಾಜೇಶ್ವರಿ, ಇಂದ್ರಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

error: Content is protected !!