ಕೆಂಪು ಕೋಟೆ ಮೇಲೆ ಸಿಖ್ ಧ್ವಜ, ದೇಶದ ಗೌರವಕ್ಕೆ ಪ್ರತಿಭಟನಾಕಾರರ ಮಸಿ
ನವದೆಹಲಿ, ಜ. 26 – ದೆಹಲಿಯ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಪರೇಡ್ ವೇಳೆ ಇಡೀ ದೆಹಲಿಯನ್ನು ಅರಾಜಕಗೊಳಿಸಿದ್ದಷ್ಟೇ ಅಲ್ಲದೇ, ರಾಷ್ಟ್ರಧ್ವಜದ ಉನ್ನತ ಪೀಠವಾದ ಕೆಂಪು ಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸಿ ದೇಶದ ಗೌರವಕ್ಕೆ ಮಸಿ ಬಳಿದಿದ್ದಾರೆ.
ಮಂಗಳವಾರ ನಡೆದ ಟ್ರ್ಯಾಕ್ಟರ್ ಪರೇಡ್ ವೇಳೆ ಪ್ರತಿಭಟನಾಕಾರರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತೆಸೆದಿದ್ದಾರೆ, ಪೊಲೀಸರ ಜೊತೆ ಸಂಘರ್ಷ ನಡೆಸಿದ್ದಾರೆ ಹಾಗೂ ವಾಹನಗಳನ್ನು ಉರುಳಿಸಿದ್ದಾರೆ. ಸಾವಿರಾರು ಜನರು ಹಲವಾರು ಕಡೆ ಪೊಲೀಸರ ಜೊತೆ ಸಂಘರ್ಷ ನಡೆಸಿದ್ದರಿಂದ ರಾಜಧಾನಿಯ ಪ್ರಮುಖ ಸ್ಥಳಗಳು ಅರಾಜಕವಾಗಿದ್ದವು.
ಮೂರು ಕೃಷಿ ಕಾಯ್ದೆಗಳ ವಿರುದ್ಧ ಎರಡು ತಿಂಗಳಿನಿಂದ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಭಗ್ನವಾಗಿದ್ದು, ಹಿಂಸಾಚಾರ ತಾಂಡವವಾಡಿತು.
ಹಲವಾರು ಷರತ್ತುಗಳನ್ನು ವಿಧಿಸಿದ್ದ ದೆಹಲಿ ಪೊಲೀಸರು, ಶಾಂತಿಯುತ ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡಿದ್ದರು. ರಾಜಧಾನಿಯ ಗಣರಾಜ್ಯೋತ್ಸವ ಸಮಾರಂಭ ಮುಗಿದ ನಂತರವೇ ಟ್ರ್ಯಾಕ್ಟರ್ ಪರೇಡ್ ಆರಂಭಿಸಬೇಕೆಂದು ತಿಳಿಸಲಾಗಿತ್ತು.
ಆದರೆ, ಅಧಿಕಾರಿಗಳು ತಿಳಿಸಿದ ಸಮಯಕ್ಕಿಂತ ಎರಡು ಗಂಟೆ ಮೊದಲೇ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಿ ರೈತರು ನಗರಕ್ಕೆ ನುಗ್ಗಿದರು. ಉಕ್ಕು ಹಾಗೂ ಕಾಂಕ್ರೀಟ್ ತಡೆಗಳನ್ನು ಧ್ವಂಸಗೊಳಿಸಲಾಯಿತು. ಟ್ರೇಲರ್ ಟ್ರಕ್ಗಳನ್ನು ಉರುಳಿ ಸಿದ ನಂತರ ನಗರದ ಹಲವೆಡೆ ಸಂಘರ್ಷ ನಡೆಸಲಾಯಿತು.
ರಾಜಪಥದಲ್ಲಿ ದೇಶದ ಹೆಮ್ಮೆಯ ಸಂಕೇತವಾಗಿ ಸೈನಿಕ ಬಲ ಪ್ರದರ್ಶನ ನಡೆಯುವ ಬದಲು, ಪ್ರತಿಭಟನಾ ನಿರತ ರೈತ ಹಿಂಸಾ ಭಂಗದ ಪ್ರದರ್ಶನವನ್ನು ದೇಶ ಆಘಾತದಿಂದ ನೋಡಬೇಕಾಯಿತು. ಅಂತಿಮವಾಗಿ ತ್ರಿವರ್ಣ ಧ್ವಜಕ್ಕೆ ಹೆಮ್ಮೆಯ ಪ್ರತೀಕವಾಗಿರುವ ಕೆಂಪು ಕೇಟೆಯ ಮೇಲೆಯೇ ಸಿಖ್ ಧರ್ಮದ ಧ್ವಜ ಹಾರಿಸಿದ್ದು ಅರಾಜಕತೆಯ ಪರಮಾವಧಿಯಾಗಿತ್ತು. ಧ್ವಜಕಂಭವನ್ನು ಏರಿದ ಕೆಲವರು ಸಿಖ್ ಧ್ವಜವಾದ ನಿಶಾನ್ ಸಾಹಿಬ್ ಹಾರಿಸಿದರು. ಇನ್ನು ಕೆಲವರು ಕೆಂಪು ಕೋಟೆಯ ಗೋಪುರಗಳ ಮೇಲೇರಿ ಸಿಖ್ ಧ್ವಜಗಳನ್ನು ಹಾರಿಸಿದ್ದು ಕಂಡು ಬಂತು.
ಸಂಬಂಧ ಇಲ್ಲ ಎಂದ ರೈತರ ಒಕ್ಕೂಟ
ನವದೆಹಲಿ, ಜ. 26 – ಪ್ರತಿಭಟನಾ ನಿರತ ರೈತರ ಒಕ್ಕೂಟದ ಸಂಯುಕ್ತ ಕಿಸಾನ್ ಮೋರ್ಚಾ, ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರಕ್ಕೂ ತನಗೂ ಸಂಬಂಧ ಇಲ್ಲ ಎಂದು ಹೇಳಿದೆ. ಅನಪೇಕ್ಷಿತ ಹಾಗೂ ಒಪ್ಪಲಾಗದ ಘಟನೆಗಳಿಗೆ ಕೆಲ ಸಮಾಜ ವಿರೋಧಿ ಶಕ್ತಿಗಳು ನುಸುಳಿರುವು ದು ಕಾರಣ ಎಂದು ಒಕ್ಕೂಟ ಹೇಳಿದೆ. ಪ್ರತಿಭಟನೆಯ ವೇಳೆ ಹಲವಾರು ಗುಂಪುಗಳು ಪೂರ್ವ ನಿಯೋಜಿತ ಮಾರ್ಗದಿಂದ ಬೇರೆಡೆ ತೆರಳಿದ್ದವು. ಈ ವೇಳೆ ತೀವ್ರ ಹಿಂಸಾಚಾರ ಹಾಗೂ ಪೊಲೀಸರ ಜೊತೆ ಸಂಘರ್ಷ ಉಂಟಾಗಿತ್ತು.
ಗಣರಾಜ್ಯೋತ್ಸವ ಪರೇಡ್ನಲ್ಲಿ ಅಭೂತಪೂರ್ವ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೂ ಸಂಘಟನೆಗೂ ಸಂಬಂಧ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ ಕೆಲ ಸಂಘಟನೆಗಳು ಹಾಗೂ ವ್ಯಕ್ತಿಗಳು ಮಾರ್ಗವನ್ನು ಉಲ್ಲಂಘಿಸಿದರು ಹಾಗೂ ಖಂಡನಾರ್ಹ ಕೃತ್ಯಗಳಲ್ಲಿ ತೊಡಗಿದರು. ಸಮಾಜ ವಿರೋಧಿ ಶಕ್ತಿಗಳು ಶಾಂತಿಯುತ ಹೋರಾಟದಲ್ಲಿ ನುಸುಳಿದ್ದಾರೆ. ಅಹಿಂಸೆಯೇ ನಮ್ಮ ಅತಿ ದೊಡ್ಡ ಶಕ್ತಿ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಹಿಂಸಾಚಾರ ನಮ್ಮ ಹೋರಾಟಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಟ್ರ್ಯಾಕ್ಟರ್ ಉರುಳಿ ಓರ್ವ ರೈತನ ಸಾವು
ನವದೆಹಲಿ, ಜ. 26 – ಟ್ರ್ಯಾಕ್ಟರ್ ಪರೇಡ್ ವೇಳೆ ರೈತನೋರ್ವನ ಟ್ರ್ಯಾಕ್ಟರ್ ಉರುಳಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ದೆಹಲಿ. ಐ.ಟಿ.ಒ.ದಲ್ಲಿ ಅಪಘಾತ ಸಂಭವಿಸಿದೆ. ಪೂರ್ವ ನಿರ್ಧರಿತ ಮಾರ್ಗದಲ್ಲಿ ತೆರಳುವಾಗ ಅವಘಡವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರೈತರು ಮೃತದೇಹವನ್ನು ತ್ರಿವರ್ಣಧ್ವಜದಿಂದ ಮುಚ್ಚಿದ್ದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದಕ್ಕೂ ಅಡ್ಡಿಪಡಿಸಿದರು.
ಘಟನೆಯ ವಿವರ ಪಡೆಯಲು ತೆಳಿದ್ದ ಮಾಧ್ಯಮದವರ ವಿರುದ್ಧವೂ ಹರಿಹಾಯ್ದರು.
ತಲೆಗೆ ಗುಂಡು ಹಾರಿಸಿದ ಕಾರಣ ಸಾವು ಸಂಭವಿಸಿದೆ ಎಂದು ಕೆಲವರು ಗಾಳಿ ಸುದ್ದಿಯನ್ನು ಹರಡಿದ್ದರು. ಆದರೆ, ಬ್ಯಾರಿಕೇಡ್ಗೆ ಟ್ರ್ಯಾಕ್ಟರ್ ಅನ್ನು ವೇಗವಾಗಿ ಬಡಿಸಿದ ನಂತರ ಅದು ಉರುಳಿದ ದೃಶ್ಯಗಳು ಸಿ.ಸಿ.ಟಿ.ವಿ.ಗಳಲ್ಲಿ ಕಂಡು ಬಂದಿವೆ.
ಐ.ಟಿ.ಒ. ಬಳಿ ಪ್ರತಿಭಟನಾಕಾರರು ಪೊಲೀಸರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಟ್ರ್ಯಾಕ್ಟರ್ಗಳನ್ನು ಬಸ್ಗಳಿಗೆ ಡಿಕ್ಕಿ ಹೊಡೆಸಿದ್ದರು.
ಇದೆಲ್ಲದರ ನಡುವೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇಡೀ ಪ್ರದೇಶ ಅರಾಜಕವಾಗಿ ಪರಿಣಮಿಸಿತ್ತು.
ಹಿಂಸಾಚಾರ; ಅಂತರ್ಜಾಲಕ್ಕೆ ಕತ್ತರಿ
ನವದೆಹಲಿ, ಜ. 26 – ರೈತ ಸಂಘಟನೆಗಳ ಟ್ರ್ಯಾಕ್ಟರ್ ಪರೇಡ್ ವೇಳೆ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹಲವೆಡೆ ಅಂತರ್ಜಾಲ ಸ್ಥಗಿತಗೊಳಿಸಲಾಗಿತ್ತು.
ಸಿಂಘು, ಘಾಜಿಪುರ, ಟಿಕ್ರಿ, ಮುಕರ್ಬ ಚೌಕ್, ನಂಗ್ಲೊಯಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಮಂಗಳವಾರ ಮಧ್ಯರಾತ್ರಿಯವರೆಗೆ ಸ್ಥಗಿತಗೊಳಿಸಲಾಗಿತ್ತು.
ಆರಂಭದಲ್ಲಿ ಸಂಭ್ರಮ ಪುಷ್ಪಗಳಿಂದ ಸ್ವಾಗತ
ರೈತರ ಟ್ರ್ಯಾಕ್ಟರ್ ಪರೇಡ್ನ ಆರಂಭದಲ್ಲಿ ದೃಶ್ಯಗಳು ಭಿನ್ನವಾಗಿದ್ದವು. ಬೆಳಿಗ್ಗೆ ರೈತರು ರಂಗ್ ದೇ ಬಸಂತಿ ಹಾಗೂ ಜೈ ಜವಾನ್ ಜೈ ಕಿಸಾನ್ ಘೋಷಣೆಗಳೊಂದಿಗೆ ಟ್ರ್ಯಾಕ್ಟರ್, ಮೋಟರ್ ಬೈಕ್ ಹಾಗೂ ಕುದುರೆಗಳನ್ನು ಏರಿ ಗಡಿ ದಾಟಿದರು. ಕೆಲವರು ಕ್ರೇನ್ ಮೇಲೇರಿ ಬಂದಿದ್ದರು. ಸ್ಥಳೀಯರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹೂಗಳನ್ನು ಎರಚಿ ರೈತರನ್ನು ಸ್ವಾಗತಿಸಿದರು. ದೇಶಭಕ್ತಿಗೀತೆಗಳ ಸಮೇತ ಪ್ರತಿಭಟನಾ ರೈತರು ನರ್ತಿಸುತ್ತಾ ರಾಷ್ಟ್ರಧ್ವಜ ಹಿಡಿದು ಬರುತ್ತಿದ್ದರು. ಆದರೆ, ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಪರೇಡ್ ಮಾರ್ಗ ಬದಲಿಸಬಾರದು, ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ದೆಹಲಿ ಪೊಲೀಸರು ಮಾಡಿಕೊಂಡ ಮನವಿಯನ್ನು ಲೆಕ್ಕಿಸಲಿಲ್ಲ.
ದಿನವಿಡೀ ಕಂಡು ಬಂದ ಸಂಘರ್ಷ ಸೂರ್ಯ ಮುಳುಗಿದರೂ ಮುಗಿದಿರಲಿಲ್ಲ. ಹಲವಾರು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಗುಂಪುಗಳು ಸಂಘರ್ಷ ನಡೆಸುತ್ತಿದ್ದುದು ಕಂಡು ಬಂತು. ಕೆಲ ಗುಂಪುಗಳು ನಿಯೋಜಿತ ಪ್ರತಿಭಟನಾ ಸ್ಥಳಗಳಿಗೆ ಮರಳಿವೆ. ಆದರೆ, ಸಾವಿರಾರು ಸಂಖ್ಯೆಯ ಜನರು ರಾತ್ರಿಯಾದರೂ ದೆಹಲಿ ಬೀದಿ ಬಿಟ್ಟಿರಲಿಲ್ಲ.
ಮೊಘಲ್ ಕಾಲದ ಕೆಂಪು ಕೋಟೆಯ ಮೇಲಿಂದ ಪ್ರಧಾನ ಮಂತ್ರಿ ಸ್ವಾತಂತ್ರ್ಯೋತ್ಸವದ ವೇಳೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇಂತಹ ಸ್ಥಳದಲ್ಲಿ ಪ್ರತಿಭಟನಾಕಾರರು ದಾಳಿಕೋರತನದಿಂದ ವರ್ತಿಸುತ್ತಿದ್ದರು. ನಂತರ ಅವರನ್ನು ತೆರವುಗೊಳಿಸಲಾಯಿತು ಎಂದು ವರದಿಗಳು ತಿಳಿಸಿವೆ.
ದೆಹಲಿಯ ಐ.ಟಿ.ಒ.ದಲ್ಲಿ ನೂರಾರು ರೈತರು ಬಡಿಗೆ ಹಿಡಿದು ಪೊಲೀಸರ ಬೆನ್ನತ್ತಿದ ದೃಶ್ಯಗಳು ಕಂಡು ಬಂದವು. ಕೆಲವೆಡೆ ಟ್ರ್ಯಾಕ್ಟರ್ಗಳನ್ನು ತಡೆಯಾಗಿ ನಿಲ್ಲಿಸಲಾಗಿದ್ದ ಬಸ್ಗಳಿಗೆ ಅಪ್ಪಳಿಸಲಾಯಿತು.
ಪ್ರತಿಭಟನಾಕಾರರು ಐ.ಟಿ.ಒ.ದಲ್ಲಿ ಕಾರೊಂದನ್ನು ಧ್ವಂಸಗೊಳಿಸಿದರು. ಸಂಘರ್ಷ ತೀವ್ರಗೊಂಡು ಪೊಲೀಸರು ಅಶ್ರುವಾಯು ಸಿಡಿಸಿದರು. ಇಡೀ ರಸ್ತೆ ತುಂಬ ಕಟ್ಟಿಗೆ ಹಾಗೂ ಕಲ್ಲುಗಳು ಬಿದ್ದಿದ್ದವು.
ದಿನ ಕಳೆದಂತೆ ಸಾವಿರಾರು ಅಶಾಂತ ರೈತರು ಕೆಂಪು ಕೋಟೆಯ ಕಡೆ ಕಾಲ್ನಡಿಗೆಯಲ್ಲಿ, ಟ್ರ್ಯಾಕ್ಟರ್ ಮೂಲಕ ಹಾಗೂ ಕೆಲವರು ಕುದುರೆಗಳ ಮೇಲೇರಿ ಬಂದರು. ಕೆಲವರು ಕೆಂಪು ಕೋಟೆಯ ಸಂಕೀರ್ಣಕ್ಕೆ ಟ್ರ್ಯಾಕ್ಟರ್ ನುಗ್ಗಿಸಿದರು.
ಜನರನ್ನು ಕೆಂಪು ಕೋಟೆಯಿಂದ ಚೆದುರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು. ಸಾವು – ನೋವಿನ ವರದಿಗಳು ಬಂದಿದಲ್ಲವಾದರೂ, ಆಂಬುಲೆನ್ಸ್ಗಳು ಕೆಂಪು ಕೋಟೆಯ ಒಳಗೆ ಹೋದ ದೃಶ್ಯಗಳು ಕಂಡು ಬಂದಿವೆ.
ಶಹದಾರಾದಲ್ಲಿ ಚಿಂತಾಮಣಿ ಚೌಕದಲ್ಲಿ ರೈತರು ಕಾರುಗಳ ಕಿಟಕಿಗಳನ್ನು ಪುಡಿ ಮಾಡಿದ್ದಾರೆ. ಸಿಖ್ರ ಸಾಂಪ್ರದಾಯಿಕ ಖಡ್ಗ ಹಿಡಿದಿದ್ದ ಗುಂಪೊಂದು ಅಕ್ಷರಧಾಮ ದೇವಾಲಯದ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷ ನಡೆಸಿದ್ದಾರೆ. ನಂಗ್ಲೊಯಿ ಚೌಕ್ನಲ್ಲಿ ರೈತರು ಸಿಮೆಂಟ್ ತಡೆಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಚೆದುರಿಸಿದರು.
ರೈತರು ದೆಹಲಿಯಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಿರುವ ಸಿಪಿಐ (ಎಂ), ಕೇಂದ್ರ ಸರ್ಕಾರ ಟ್ರ್ಯಾಕ್ಟರ್ ರಾಲಿ ವೇಳೆ ಸರಿಯಾಗಿ ನಡೆಸಿಕೊಂಡಿಲ್ಲ. ಅಶ್ರುವಾಯ ಸಿಡಿಸಿರುವುದು ಹಾಗೂ ಲಾಠಿ ಪ್ರಹಾರ ನಡೆಸಿರುವುದನ್ನು ಒಪ್ಪಲಾಗದು ಎಂದು ಹೇಳಿದೆ.
ಆದರೆ, ರೈತರ ಒಂದು ವರ್ಗ ಕೆಂಪು ಕೋಟೆಗೆ ನುಗ್ಗಿ ವರ್ತಿಸಿರುವ ರೀತಿಯನ್ನು ಖಂಡಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್, ದೇಶದ ಪ್ರಜಾಪ್ರಭುತ್ವದ ಸಂಕೇತದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.