ಕೇಂದ್ರದ 3 ಕಾಯ್ದೆಗಳು ಪ್ರತಿ ಪ್ರಜೆಗೂ ಮಾರಕ

ರೈತರ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು: ಡಾ.ಸಿದ್ದನಗೌಡ ಪಾಟೀಲ್

ದಾವಣಗೆರೆ, ಜ. 24- ರೈತರ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕಾಯ್ದೆಗಳು ಕೇವಲ ರೈತನಿಗಷ್ಟೇ ಅಲ್ಲ, ಇಡೀ ದೇಶದ ಪ್ರಜೆಗಳಿಗೂ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿ ಪ್ರಜೆಯೂ ರೈತರ ಹೋರಾಟವನ್ನು ಬೆಂಬಲಿಸಬೇಕಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಮಾಜಿ ರಾಜ್ಯ ಕಾರ್ಯದರ್ಶಿಗಳು, ಹೊಸತು ಪತ್ರಿಕೆ ಸಂಪಾದಕರೂ ಆದ ಡಾ. ಸಿದ್ದನಗೌಡ  ಪಾಟೀಲ ಕರೆ ನೀಡಿದರು.

ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿಯಿಂದ ನಗರದ ಕಾಂ.ಪಂಪಾವತಿ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ `ಜಿಲ್ಲಾ ಮಟ್ಟದ ರೈತ ಪ್ರತಿನಿಧಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಒಕ್ಕೂಟದ ವ್ಯವಸ್ಥೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಎರಡೂ ವ್ಯವಸ್ಥೆಗಳ ಉಳಿವಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಮೇಲ್ನೋಟಕ್ಕೆ ರೈತರ ಬೇಡಿಕೆಗಳಿಗೆ ಮಾತ್ರ ಎನ್ನುವಂತಿದೆ. ಆದರೆ ಇದು ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವಾಗಿದೆ.  ಆಹಾರ ಉಣ್ಣುವ ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.

ದೇಶದ ಇತಿಹಾಸದಲ್ಲಿಯೇ ಇದೊಂದು ಸುದೀರ್ಘ ಹೋರಾಟವಾಗಿದೆ. ನಾಳೆ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವವು ಅನ್ನದಾತನ ಸಂಕೇತವಾದ ಗಣರಾಜ್ಯೋತ್ಸವವಾಗಲಿದೆ. ರಫೇಲ್‌ಗಳಿಗೆ ಎದುರಾಗಿ ರೈತರ ಟ್ರ್ಯಾಕ್ಟರ್ ಗಳು ರಾಜಧಾನಿ ಕಡೆ ಹೊರಟಿವೆ. ದೇಶದ ಐನೂರಕ್ಕೂ ಹೆಚ್ಚು ಸಂಘಟನೆಗಳು ಒಂದೇ ವೇದಿಕೆಗೆ ಬಂದಿವೆ. ಈ ಹೋರಾಟ ಜನವರಿ 26ಕ್ಕೆ ಮುಗಿಯುವುದಿಲ್ಲ. ಹಳ್ಳಿ ಹಳ್ಳಿಗಳಿಗೂ ವ್ಯಾಪಿಸುತ್ತದೆ. ಕಮ್ಯೂನಿಸ್ಟ್ ಪಕ್ಷ ಹಾಗೂ  ಕಿಸಾನ್ ಸಭಾ ದೊಡ್ಡ ಹೋರಾಟ ಕೈಗೊಳ್ಳಬೇಕು ಎಂದು ಹೇಳಿದರು.

ದೇಶದಲ್ಲಿ ರೈತರ ಹೋರಾಟ ನಡೆದಾಗಲೆಲ್ಲಾ ಸರ್ಕಾರಗಳು ಬದಲಾಗಿವೆ. 1980ರಲ್ಲಿ ಗುಂಡೂರಾಯರ ಸರ್ಕಾರ ನಡೆಸಿದ ಗೋಲಿಬಾರ್ ವಿರುದ್ಧ ರೈತ ಚಳವಳಿ ನಡೆದಾಗ 1983ರಲ್ಲಿ ಸರ್ಕಾರ ಬದಲಾಗಿತ್ತು. ರೈತ ದೇಶದ ಅತ್ಯಂತ ಕೆಳಸ್ತರದ ಪ್ರಜೆ. ಆತನಿಗೆ ಅನ್ಯಾಯವಾದರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎನ್ನುವ ವಾಸ್ತವ ಎಲ್ಲರ ಕಣ್ಣ ಮುಂದಿದೆ ಎಂದರು.

ಶಾಸಕರು, ಸಂಸದರು, ಪ್ರಧಾನಿ ನಮ್ಮ ನಾಯಕರಾಗುವ ಬದಲು ಖಳನಾಯಕರಾಗಿದ್ದಾರೆ. ಜನತಂತ್ರವನ್ನು ನಾಶ ಮಾಡುತ್ತಿದ್ದಾರೆ. ಇದನ್ನು ಉಳಿಸಿಕೊಳ್ಳಲೆಂದೇ ರೈತರು ಬೀದಿಗಿಳಿದಿದ್ದಾರೆ. ಕೇಂದ್ರ ಸರ್ಕಾರದ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವವರು ರೈತರಲ್ಲ, ಪಾಕ್ ಪ್ರಚೋದಿತರು, ಖಲಿಸ್ತಾನಿಗಳು, ದಲ್ಲಾಲಿಗಳು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಅವರ ಜೊತೆಯೇ 11 ಸುತ್ತಿನ ಮಾತುಕತೆ ನಡೆಸಿದ್ದೇಕೆ ? ಎಂದು  ಸಿದ್ದನಗೌಡ ಪಾಟೀಲ ಪ್ರಶ್ನಿಸಿದರು.

ಚಹಾ ವ್ಯಾಪಾರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಇದರ ಪರಿಣಾಮ ಸಣ್ಣ ರೈತರು ಭೂಮಿಯಿಂದ ಹೊರ ಬೀಳುತ್ತಾರೆ. ಅಂಬಾನಿಯ ಕಂಪನಿ  ಬೆಳೆಸಲು ಈಗಾಗಲೇ ಬಿಎಸ್ಎನ್ಎಲ್ ನಾಶ ಮಾಡಲಾಗಿದೆ. ಮುಂದೆ ಎಪಿಎಂಸಿ ಮಾರಿ ಖಾಸಗಿ ಮಾರುಕಟ್ಟೆಗೆ ಉತ್ತೇಜಿಸಲು ಮುಂದಾಗಿದ್ದಾರೆ. ಕಾಯ್ದೆಗಳು ಜಾರಿಯಾದರೆ ಮುಂದೊಂದು ದಿನ ಕಾರ್ಪೊರೇಟ್ ಕಂಪನಿಗಳು ರೈತರ ಭೂಮಿ ಖರೀದಿಸುತ್ತವೆ. ರೈತನ ಭೂಮಿ ಕಾಳ ಸಂತೆಕೋರರು, ರಾಜಕಾರಣಿಗಳು, ಅಧಿಕಾರಿಗಳ ಹೆಸರಿಗೆ ವರ್ಗವಾಗಿ,  ರೈತ ಬೀದಿಗೆ ಬರುತ್ತಾನೆ ಎಂದು ಎಚ್ಚರಿಸಿದರು.

ಕಂಪನಿಗಳು ಬಂದು ತನ್ನ ಕೃಷಿ ಭೂಮಿಯನ್ನು ಗುತ್ತಿಗೆ ಪಡೆಯುವುದನ್ನು ರೈತ ಸಂತಸದಿಂದಲೇ ಎದುರು ನೋಡುಷ್ಟರ ಮಟ್ಟಿಗೆ ಒಕ್ಕಲುತನವನ್ನು ಭಾರ ಮಾಡಲಾಗಿದೆ. ಮುಂದೆ ರೈತನನ್ನು ಅನ್ನದಾತ ಎನ್ನಲಾಗದು. ಕಂಪನಿಗಳು ಯಂತ್ರಗಳ ಮೂಲಕ ಒಕ್ಕಲುತನ ಮಾಡುತ್ತವೆ. ಆಗ ರೈತ ಕೃಷಿ ಕಾರ್ಮಿಕನಾಗಿಯೂ ಉಳಿಯುವುದಿಲ್ಲ.  ಒಂದು ಬಾರಿ ರೈತ ತನ್ನ ಭೂಮಿಯನ್ನು ಕಂಪನಿಗೆ ಒಪ್ಪಿಸಿದರೆ, ಉತ್ತಮ ಇಳುವರಿಗಾಗಿ ಅತಿಯಾಗಿ ರಾಸಾಯನಿಕ ಬಳಸಿ ಭೂಮಿಯನ್ನು ಬರಡು ಮಾಡಿಕೊಳ್ಳಬೇಕಾಗುತ್ತದೆ ಹೇಳಿದರು.

2011ರ ಜನಗಣತಿ ಪ್ರಕಾರ ಶೇ.51ರಷ್ಟು ಜನರು ಒಕ್ಕಲುತನ ಕೈ ಬಿಟ್ಟಿದ್ದಾರೆ. ಶೇ.40ರಷ್ಟು ಜನರು ಬೇರೆ ಅವಕಾಶ ಸಿಕ್ಕರೆ ಒಕ್ಕಲುತನ ಬಿಟ್ಟು ಹೋಗುವುದಾಗಿ ಹೇಳಿದ್ದರೆ. ಇಂತಹ ವಾತಾವರಣವನ್ನು ಉದ್ಯಮಿಗಳು, ಸರ್ಕಾರ ದುರುಪಯೋಗ ಪಡಿಸಿಕೊಳ್ಳಲು ಹುನ್ನಾರ ನಡೆಸಿವೆ ಎಂದು ಡಾ.ಸಿದ್ದನಗೌಡ ಪಾಟೀಲ ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಸನ್ಮಾನಿಸಲಾಯಿತು. ಎಐಕೆಎಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಿಸಾನ್ ಸಭಾದ ಅಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ ಅಧ್ಯಕ್ಷೆತ ವಹಿಸಿದ್ದರು. ಎಐಕೆಎಸ್ ರಾಜ್ಯ ಉಸ್ತುವಾರಿ ಪಿ.ಬಿ. ಲೋಕೇಶ್, ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಆನಂದರಾಜ್, ಆವರಗೆರೆ ಚಂದ್ರು, ಟಿ.ಎಸ್. ನಾಗರಾಜ್, ಸಿದ್ದೇಶ್ ಹಾಲೇಕರ್, ಭೀಮಾರೆಡ್ಡಿ ಉಪಸ್ಥಿತರಿದ್ದರು. ಕೆ.ಬಾನಪ್ಪ ನಿರೂಪಿಸಿದರು. ನರಗ ರಂಗನಾಥ್ ವಂದಿಸಿದರು.

error: Content is protected !!