ದಾವಣಗೆರೆ, ಜ.24- ಹೆಣ್ಣುಮಕ್ಕಳ ಭವಿಷ್ಯ ರಕ್ಷಣೆ ಬಗ್ಗೆ ಸರ್ಕಾರವು ಅನೇಕ ಸುಧಾರಣೆಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ 15 ಜಿಲ್ಲೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆ ಕಂಡಿದ್ದು, ಸಂಖ್ಯೆ ಕಡಿಮೆ ಇರುವ ಇನ್ನುಳಿದ 15 ಜಿಲ್ಲೆಗಳಲ್ಲೂ ಏರಿಕೆ ಕಾಣಲು ಹೆಣ್ಣುಮಕ್ಕಳೂ ಸಹ ಗಂಡು ಮಕ್ಕಳಂತೆ ಸರಿಸಮಾನರು ಎಂಬ ತಿಳುವಳಿಕೆ ಮೂಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಸ್. ವಿಜಯ ಕುಮಾರ್ ಆಶಯ ವ್ಯಕ್ತಪಡಿಸಿದರು.
ನಗರದ ಹೊರ ಹೊಲಯದ ಶ್ರೀರಾಮನಗರದಲ್ಲಿನ ಬಾಲಕಿಯರ ಬಾಲ ಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಕೇಂದ್ರದ ಸಹಯೋಗದಲ್ಲಿ ಇಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಎಂದರೆ ಮೂಗು ಮುರಿಯುತ್ತಿದ್ದರು. ವಂಶ ಬೆಳವಣಿಗೆಗಾಗಿ ಗಂಡು ಮಕ್ಕಳನ್ನೇ ಅಪೇಕ್ಷೆ ಪಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿ, ಮನೆಗೆ ಹೆಣ್ಣು ಮಗು ಲಕ್ಷ್ಮಿಯಾಗಿದ್ದಾಳೆ. ವಯಸ್ಸಾದ ಮೇಲೆ ತಂದೆ-ತಾಯಿಯರನ್ನು ಪೋಷಿಸುತ್ತಾರೆ. ಹೆಣ್ಣು ಮಕ್ಕಳ ಮೇಲೆ ಒಲವು ಮೂಡಿದೆ. ಗಂಡಾಗಲಿ, ಹೆಣ್ಣಾಗಲಿ ಇಬ್ಬರು ಸರಿ ಸಮಾನರು ಎಂಬ ಭಾವನೆ ಬಂದಿದೆ. ಗಂಡು ಮಕ್ಕಳಿಗೆ ಸರಿಸಮಾನವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ, ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ಭವಿಷ್ಯವನ್ನು ಕಟ್ಟುಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳು ಟೆನ್ಷನ್ ಅಲ್ಲ, ಟೆನ್ ಸನ್ಸ್ ಗೆ ಸಮ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ
ರಾಜ್ಯದ 15 ಜಿಲ್ಲೆಗಳಲ್ಲಿ 1000 ಗಂಡಿನ ಸಂಖ್ಯೆಗಿಂತ 1063 ಹೆಣ್ಣು ಮಕ್ಕಳ ಸಂಖ್ಯೆ ಏರಿಕೆ ಆಗಿದೆ. ಹಾಗೆಯೇ ಇನ್ನುಳಿದ 15 ಜಿಲ್ಲೆಗಳಲ್ಲಿ 1000 ಗಂಡುಮಕ್ಕಳ ಸಂಖ್ಯೆ 800ರಿಂದ 930 ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಯಲ್ಲಿ ಜನರಿಗೆ ತಿಳಿವಳಿಕೆ ಮೂಡಿದೆ. ಆದರೆ, ಇನ್ನುಳಿದ ಜಿಲ್ಲೆಗಳಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ 1000 ಗಂಡು ಮಕ್ಕಳ ಸಂಖ್ಯೆಗಿಂತ ಹೆಣ್ಣು ಮಕ್ಕಳ ಸಂಖ್ಯೆ 948 ಇದೆ. ಮುಂದಿನ ದಿನ ಈ ಸಂಖ್ಯೆ ಏರಿಕೆ ಕಾಣಬೇಕು.
– ಕೆ.ಎಸ್. ವಿಜಯಕುಮಾರ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಹೆಣ್ಣು ಸಂತತಿ ಕಡಿಮೆ ಆಗುತ್ತಿದೆ. ಕರ್ನಾಟಕದ ಮಡಿಕೇರಿ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿದಿದೆ. 1000ಕ್ಕೆ 900ರಷ್ಟು ಅನುಪಾತದಲ್ಲಿರುವುದು ಕಾಣಬಹುದು. ಇದರಿಂದ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಲು ಕಾರಣ. ಜೊತೆಗೆ ಸಮ ಸಮಾಜ ನಿರ್ಮಾಣಕ್ಕೆ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತ ಸಮಾನಾಗಿರಬೇಕಿದೆ. ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಲು ಅವರಿಗೆ ಶಿಕ್ಷಣ ನೀಡುವುದೇ ಅಸ್ತ್ರವೆಂದರು.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ. ಬಸವರಾಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಶಿಕ್ಷಣ ಇದ್ದಲ್ಲಿ ಲಿಂಗ ತಾರತಮ್ಯ ದೂರವಾಗಿಸುತ್ತದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಕ್ಕಾಗ ಸಮ ಸಮಾಜದ ಕಲ್ಪನೆಗೆ ಜಯ ದೊರಕಲಿದೆ. ದೌರ್ಜನ್ಯಗಳಿಂದ ರಕ್ಷಣೆ ಇಲ್ಲ ಎಂಬ ಆತಂಕ ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳ ಮೇಲೆ ಮೂಡುತ್ತದೆ. ಆದ್ದರಿಂದ ಮನೆಯಿಂದಲೇ ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂತ ವಾತಾವರಣ ಸೃಷ್ಠಿಸಬೇಕು. ಹೆಣ್ಣು-ಗಂಡು ಇಬ್ಬರೂ ಸಮಾನರು ಎಂಬ ಸಮಾನತೆಯ ದಿನ ಬರಬೇಕೆಂದರು.
ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಾಳಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಾಲಕಿಯರ ಬಾಲ ಮಂದಿರದ ಅಧೀಕ್ಷಕರಾದ ಶೋಭಾ ಸ್ವಾಗತಿಸಿದರು. ಮಕ್ಕಳ ಹಕ್ಕು ರಕ್ಷಣಾ ಘಟಕದ ಲೆಕ್ಕಾಧಿಕಾರಿ ಶೃತಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬೇಟಿ ಬಜಾವೋ ಬೇಟಿ ಪಡಾವೋ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.