ದಾವಣಗೆರೆ,ಜ.24-ಧಾರವಾಡದ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರ ರಕ್ತಸ್ರಾವ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಗರದ ಮಹಿಳೆಯೋರ್ವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೂಲತಃ ಸ್ಥಳೀಯ ವಿದ್ಯಾನಗರದವ ರಾಗಿದ್ದ ಶಿವಮೊಗ್ಗದ ವಾಸಿ ಶ್ರೀಮತಿ ವೇದಾ ಮಂಜುನಾಥ್ ಅವರು ಸಾವಿಗೀಡಾಗಿದ್ದಾರೆ. ರಸ್ತೆ ಅಪಘಾತದ ಸಂದರ್ಭ ದಲ್ಲಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ವೇದಾ ಅವರು, ತಮ್ಮ ಬಾಲ್ಯದ ಗೆಳೆತಿಯ ರೊಂದಿಗೆ ಇದೇ ದಿನಾಂಕ 15ರಂದು ನಗರದಿಂದ ಗೋವಾ ಪ್ರವಾಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರಿದ್ದ ಮಿನಿ ಬಸ್ ಧಾರವಾಡದ ಬಳಿ ಅಪಘಾತಕ್ಕೀಡಾದ ಪರಿಣಾಮ ಸ್ಥಳದಲ್ಲೇ ನಗರದ 9 ಜನ ಮಹಿಳೆಯರು ಸೇರಿದಂತೆ, ಒಟ್ಟು 11 ಜನರು ಮೃತಪಟ್ಟು, ಐವರು ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ವೇದಾ ಅವರ ನಿಧನದಿಂದಾಗಿ ಈ ರಸ್ತೆ ಅಪಘಾಕದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದಂತಾಗಿದೆ.
ಗಾಯಾಳು ವೇದಾ ಅವರನ್ನು ಏರ್ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ವೇದಾ ಅವರ ಇಚ್ಚೆಯಂತೆ ಎರಡು ಕಿಡ್ನಿ ಹಾಗೂ ಯಕೃತ್ (ಲಿವರ್) ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ವೇದಾ ಕುಟುಂಬ ಸಾವಿನ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ.
ವೇದಾ ಅವರಿಗೆ ಸುಮಾರು 47 ವರ್ಷ ವಯಸ್ಸಾಗಿತ್ತು. ದಾವಣಗೆರೆ ವಿದ್ಯಾನಗರದ ವಾಸಿ ಆರ್.ಎಸ್. ಚನ್ನಬಸಪ್ಪ ಅತ್ತಿಗೆರೆ ಮತ್ತು ಸರೋಜ ದಂಪತಿ ಪುತ್ರಿ ವೇದಾ ಅವರು, ಶಿವಮೊಗ್ಗದ ಹೆಚ್.ಎಂ. ಮಂಜುನಾಥ್ ಅವರ ಪತ್ನಿ. ವೇದಾ, ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಅವರ ಸಹೋದರನ ಸೊಸೆ ಆಗಿದ್ದಾರೆ.
ಪತಿ ಮತ್ತು ಓರ್ವ ಪುತ್ರಿಯನ್ನು ಅಗಲಿರುವ ವೇದಾ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗದ ಅವರ ನಿವಾಸಕ್ಕೆ ತರಲಾಗಿದ್ದು, ನಾಳೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಸಹೋದರ – ನಾರಾಯಣ ಹೃದಯಾಲಯದ ಹೃದಯ ರೋಗ ತಜ್ಞ ಡಾ. ಧನಂಜಯ ಅವರು `ಜನತಾವಾಣಿ’ಗೆ ತಿಳಿಸಿದ್ದಾರೆ.