26 ಅಡಿ ಎತ್ತರ 17 ಅಡಿ ಅಗಲವುಳ್ಳ ಗೇಟ್ ವೇ ಆಫ್ ಇಂಡಿಯಾದ ಪ್ರತಿರೂಪ ಈ ವರ್ಷದ ಆಕರ್ಷಣೆ
ದಾವಣಗೆರೆ, ಜ. 22- ನಗರದ ಗಾಜಿನ ಮನೆಯ ಆವರಣದಲ್ಲಿ ನಾಳೆ ದಿನಾಂಕ 23 ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಕಚೇರಿಯಲ್ಲಿಂದು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಬಗ್ಗೆ ಸಾರ್ವಜನಿಕರಲ್ಲಿ ಅಭಿರುಚಿ ಹೆಚ್ಚಿಸಲು ಹಾಗೂ ಮಕ್ಕಳಲ್ಲಿ ಗಿಡಗಳ ಬಗ್ಗೆ ಕುತೂಹಲ ಹೆಚ್ಚಿಸಲು ಗಣರಾಜ್ಯೋತ್ಸವದ ಅಂಗವಾಗಿ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆ 26 ಅಡಿ ಎತ್ತರ 17 ಅಡಿ ಅಗಲವುಳ್ಳ ಗೇಟ್ ವೇ ಆಫ್ ಇಂಡಿಯಾದ ಪ್ರತಿರೂಪ. ಇದನ್ನು 2,10,000 ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಸೇವಂತಿಗೆ ಹೂ ಹಾಗೂ 36,000 ಕೆಂಪು ಗುಲಾಬಿ ಹಾಗೂ ಎಲೆಗಳಿಂದ ನಿರ್ಮಿಸಲಾಗುತ್ತಿದೆ. 45,000 ಹೂಗಳಿಂದ 10 ಅಡಿ ಎತ್ತರ 7 ಅಡಿ ಅಗಲದ 4 ಫೋಟೋ ಫ್ರೇಮ್ಗಳನ್ನು ಹೂವಿನ ಕಲಾಕೃತಿಯಿಂದ ಅಲಂಕರಿಸಿ ಪ್ರದರ್ಶಿಸಲಾಗುವುದು ಎಂದರು.
ಪ್ರದರ್ಶನದ ವೀಕ್ಷಣೆಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ, ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕವಿರುತ್ತದೆ ಎಂದು ಹೇಳಿದರು.
ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆ ವ್ಯವಸ್ಥೆ
ಇರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ
ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವಂತೆ ಕೋರಿದರು.
ಮನೆಗಳಲ್ಲಿ ವಿವಿಧ ಅಲಂಕಾರಿಕ ಗಿಡಗಳು ಹಾಗೂ ಹೂ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ತೋಟಗಾರಿಕೆ ಬಗ್ಗೆ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಹಾಗೂ ಆಹ್ಲಾದಕರ ವಾತಾವರಣ ನಿರ್ಮಿಸುವುದಕ್ಕಾಗಿ ನಾಲ್ಕು ದಿನಗಳ ಪುಷ್ಪ ಪ್ರದರ್ಶನ ಆಯೋಜಿಸ ಲಾಗಿದ್ದು, ಶಾಸಕ ಎಸ್.ಎ.ರವೀಂದ್ರನಾಥ್ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದರು.