ಕುಂದುವಾಡ ಕೆರೆ ಅಭಿವೃದ್ಧಿ : ವರದಿ ನೀಡಲು ಡಿಸಿಗೆ ಸೂಚನೆ

ದಾವಣಗೆರೆ, ಜ.22- ಕುಂದುವಾಡ ಕೆರೆ ಅಭಿವೃದ್ಧಿಯ ಹಗ್ಗ ಜಗ್ಗಾಟ ಇದೀಗ ಜಿಲ್ಲಾಧಿಕಾರಿ ಕಚೇರಿ ಅಂಗಳಕ್ಕೆ ಬಂದು ನಿಂತಿದೆ.

ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಮುಖಂಡರು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ಅಭಿವೃದ್ಧಿ ಅನಗತ್ಯ ಎಂದು ಕಾಂಗ್ರೆಸ್ ಆರಂಭದಿಂದಲೂ ವಿರೋಧಿಸುತ್ತಿದೆ. ಈ ನಡುವೆ ಪರಿಸರವಾದಿಗಳೂ ಸಹ ಕೆರೆ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ.

ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ನಿಯಮ 2014 ಉಲ್ಲಂಘಿಸಿ ಅಭಿವೃದ್ಧಿ ನೆಪದಲ್ಲಿ ಅವೈಜ್ಞಾನಿಕವಾಗಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ ಎಂದು 11 ಜನರು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಪ್ರಾಧಿಕಾರವು ಜಿಲ್ಲಾಮಟ್ಟದ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ಕ್ರಮ ವಹಿಸಿ ಕಚೇರಿಗೆ ವರದಿ ನೀಡುವಂತೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಯುವ ಭಾರತ್ ಗ್ರೀನ್ ಬ್ರಿಗೇಡ್, ಕೆ.ಎಸ್. ಮುರುಗೇಶ್, ನರೇಂದ್ರ ಬಾಬು, ವೈ.ಆರ್. ಜಾಹ್ನವಿ, ಗಿರೀಶ್ ದೇವರಮನೆ, ಮೇಧಾ ಭಟ್, ಗಿರೀಶ್ ಸಾಯಿ, ಬಿ.ಎಂ. ಪ್ರಶಾಂತ್, ಡಾ.ಎಸ್.ಶಿಶುಪಾಲ, ಡಾ.ನೇತ್ರಾ ಹರಿಪ್ರಸಾದ್, ಎ.ಸಿ. ಬಾಪೂಜಿ, ದಿನೇಶ್ ಕುಮಾರ್  ಇವರುಗಳು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ.

ಸದ್ಯ ಕುಂದುವಾಡ ಕೆರೆಗೆ ಸುಮಾರು 150ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳು ಆಗಮಿಸುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಅವೈಜ್ಞಾನಿಕ ಕಾಮಗಾರಿಯಿಂದ ಈ ಎಲ್ಲಾ ಪಕ್ಷಿ ಪ್ರಭೇದಗಳಿಗೆ ಧಕ್ಕೆಯಾಗಲಿದೆ. 

ನಡೆಸಲುದ್ದೇಶಿಸಿರುವ ಕಾಮಗಾರಿಗಳು ಮಾನವ ಕೇಂದ್ರಿತ ಅಭಿವೃದ್ಧಿಯೇ ವಿನಃ ಪರಿಸರ ಸ್ನೇಹಿ ಅಭಿವೃದ್ಧಿಯಲ್ಲ.  ಚಿಕ್ಕ ಪ್ರಮಾಣದಲ್ಲಿ ನೆಲದಲ್ಲಿ ನೀರು ಇಂಗಿದಾಗ ಅಂತರ್ಜಲ ವೃದ್ಧಿಯಾಗುತ್ತದೆ. ಆದರೆ  ಕೆರೆಯ 4.9 ಕಿ.ಮೀ. ವ್ಯಾಪ್ತಿಯಲ್ಲಿ ಕಾಂಕ್ರೀಟೀಕರಣ  ಸಾಧುವಲ್ಲ. ಕೆರೆಯ ಉತ್ತರ  ಭಾಗದಲ್ಲಿ ಇರುವ ಪ್ರಭಾವಿ ಉದ್ಯಮಿಯ ಲೇಔಟ್‌ಗೆ ಅನುಕೂಲವಾಗಲು ನೀರು ಸೋರಿಕೆ ನೆಪದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.

ಈಗಾಗಲೇ ದಾನಿಗಳು ನೀಡಿರುವ ಕಲ್ಲು ಬೆಂಚುಗಳು ಸಾಕಷ್ಟಿವೆ. ಹೆಚ್ಚಿನ ಬೆಂಚುಗಳ ಅಗತ್ಯವಿಲ್ಲ. ಬಣ್ಣದ ವಿದ್ಯುತ್ ಬೆಳಕಿನಿಂದ ಪ್ರಾಕೃತಿಕ  ಸೊಬಗು ನಾಶವಾಗಿ ಅನೇಕ ಜೀವಿಗಳಿಗೆ ತೊಂದರೆಯಾಗುತ್ತದೆ. ವಿದ್ಯುತ್ ಬೆಳಕಿನ ಕಾರಣ ರಾತ್ರಿಯೂ ಜನ ಅಲ್ಲಿಗೆ ತೆರಳುವುದರಿಂದ ಆ ಸ್ಥಳದಲ್ಲಿ ಅನೈತಿಕ ಚಟುವಟಿಕೆಗೆ ಆಸ್ಪದ ಕೊಟ್ಟಂತಾಗುತ್ತದೆ ಎಂದು ಯುವ ಭಾರತ್ ಗ್ರೀನ್ ಬ್ರಿಗೇಡ್‌ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಕೇಂದ್ರವಾಗಬೇಕಾದ ಜಾಗವಿದು. ಅಸಂಖ್ಯಾತ ಸಸ್ಯ, ಪ್ರಾಣಿಗಳ ಸಂಕುಲಗಳ ಅಧ್ಯಯನಕ್ಕೆ ಪ್ರಶಸ್ತ ಸ್ಥಳ. ಕಾರಣ ಈಗಿರುವ ಜಾಗವನ್ನು ಬಳಸಿಕೊಂಡು ಚಿಟ್ಟೆ ಪಾರ್ಕ್ ನಿರ್ಮಿಸಬಹುದು. ಒಣಗಿದ ಮರ ತೆಗೆದು ಹೊಸದಾಗಿ ಸ್ಥಳೀಯವಾಗಿ ಮರಗಳನ್ನು ನೆಡಬಹುದು ಎಂದೂ ಸಹ ಸಲಹೆ ನೀಡಲಾಗಿದೆ.  ತಕ್ಷಣ ಅವೈಜ್ಞಾನಿಕ ಕಾಮಗಾರಿಗೆ ತಡೆ ನೀಡಿ ಆದೇಶ ಹೊರಡಿಸುವಂತೆ ದೂರಿದಲ್ಲಿ ಮನವಿ ಮಾಡಲಾಗಿದೆ. 

error: Content is protected !!