ಪರಿಸರದಿಂದ ಬಂದ ಜೀವ ಸಹಜವಾಗಿ ನೆಲ ಮತ್ತು ಜಲವನ್ನು ನಂಬಿಕೊಂಡು ಮನುಷ್ಯ ಜೀವನವನ್ನು ಸಾಗಿಸುತ್ತಾ ಬಂದಿದ್ದಾನೆ. ನದಿಗಳ ತಟದಲ್ಲಿ ತನ್ನ ನಾಗರಿಕತೆಯನ್ನು ಬೆಳೆಸಿಕೊಂಡಿದ್ದಾನೆ. ಜಗತ್ತಿನ ಯಾವ ಮೂಲೆಯಲ್ಲಿ ಹೋದರೂ ರಾಜ, ಮಹಾರಾಜರುಗಳು ತಮ್ಮ ತಮ್ಮ ರಾಜಧಾನಿಗಳನ್ನು ನದಿಯ ತಟಗಳಲ್ಲಿ ನಿರ್ಮಿಸಿರುವುದು ಕಂಡು ಬರುತ್ತದೆ. ಬದಲಾದ ಸನ್ನಿವೇಶಗಳಲ್ಲಿ ರಾಜ್ಯಗಳು ವಿಸ್ತರಣೆ ಆದಂತೆ, ನದಿಗಳಿಂದ ದೂರವಾದಾಗ ನೀರಿಗಾಗಿ ಕೆರೆ, ಕಟ್ಟೆಗಳನ್ನು ನಿರ್ಮಿಸಿರುತ್ತಾರೆ. ಆಧುನಿಕತೆ ಬೆಳೆದಂತೆ ನದಿ ಪಾತ್ರಗಳಿಗೆ ಅಡ್ಡವಾಗಿ ಅಣೆಕಟ್ಟುಗಳನ್ನು ಕಟ್ಟಿ, ನೀರನ್ನು ಹಾಯಿಸಿ ಬೆಳೆ ಬೆಳೆಯುವುದಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ರೂಪಾಂತರಗೊಳಿಸಿದ್ದಾರೆ. ಮನುಷ್ಯನಿಗಿಂತಲೂ ಮೊದಲೇ ಜನಿಸಿದ ಸಕಲ ಜೀವರಾಶಿಗಳು ಮತ್ತು ಸಸ್ಯರಾಶಿಗಳು ಕೂಡ ನೀರನ್ನೇ ಅವಲಂಬಿಸಿ ಬೆಳೆಯುತ್ತಾ ಬಂದಿರುತ್ತವೆ. ಆದರೆ ಅವುಗಳ ಅಳಿವನ್ನು ಕಂಡು, ಇತ್ತೀಚೆಗೆ ಅವುಗಳ ಉಳಿವಿಗೋಸ್ಕರ ಶತಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ. ನೀರಿನ ಅಗತ್ಯತೆಯನ್ನು ಕಂಡು, ನೀರಿನ ಸಂರಕ್ಷಣೆಯು ಕೂಡ ಬರದಿಂದ ಸಾಗಿದೆ. ಏತ ನೀರಾವರಿ ಮೂಲಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯಗಳು ನಡೆದಿರುತ್ತವೆ. ಕುಡಿಯುವ ನೀರಿಗಾಗಿ ಕೆರೆ, ಕಟ್ಟೆಗಳನ್ನು ತುಂಬಿಸಿಕೊಳ್ಳುವ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಗ್ರಾಮ, ಪಟ್ಟಣಗಳಲ್ಲಿ ಜನಸಂಖ್ಯೆ ಬೆಳೆದಂತೆ, ನೀರಿನ ಅಗತ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಇರುವ ಕೆರೆ, ಕಟ್ಟೆಗಳಲ್ಲಿ ನೀರನ್ನು ಹೆಚ್ಚು ಹೆಚ್ಚಾಗಿ ಹಿಡಿದು ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ, ಹಾಗೆಯೇ ನೀರು ಸೋರಿ ಹೊರಗೆ ಹೋಗದಂತೆ, ಅಶುದ್ಧ ನೀರು ಒಳಗೆ ಬರದಂತೆ ಏರಿಗಳನ್ನು ನಿರ್ಮಿಸಬೇಕಾಗಿದೆ. ಏರಿಗಳಲ್ಲಿ ಗಿಡ, ಗಂಟೆಗಳು ಬೆಳೆಯದಂತೆ ಮತ್ತು ಏರಿಯ ಮೇಲಿರುವ ಗಿಡ, ಮರಗಳು ಉಳಿಯುವಂತೆ ಗಮನ ಹರಿಸಿ, ಕೆರೆಯ ಆಕಾರ ಬದಲಾಗದಂತೆ ಏರಿಯನ್ನು ಎತ್ತರಿಸಿ, ಬಿಗಿಗೊಳಿಸುವ ಅಭಿವೃದ್ಧಿ ಕಾಮಗಾರಿಗಳು ಅವಶ್ಯಕವಾಗಿರುತ್ತವೆ.
ದಾವಣಗೆರೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೋಡಿದಾಗ ಹಳೇ ಊರಿನಲ್ಲಿ ಬೀದಿಗೆ ಒಂದೋ-ಎರಡೋ ಸಾರ್ವಜನಿಕ ಬಾವಿ ಮತ್ತು ಖಾಸಗಿ ಮನೆಗಳಲ್ಲಿ ಬಾವಿಗಳಿರುತ್ತಿದ್ದವು. 1917ರಲ್ಲಿ ದಾವಣಗೆರೆ ನಗರಕ್ಕೆ ತುಂಗಭದ್ರಾ ನದಿಯಿಂದ ನೀರು ತುಂಬುವ ಯೋಜನೆ ಜಾರಿಗೆ ಬಂದಿತು. ದಾವಣಗೆರೆ ನಗರಸಭೆ ಹಿಂದೆ ಇರುವ ಹಳೇ ಟ್ಯಾಂಕ್‍ನಲ್ಲಿ ನೀರು ಸಂಗ್ರಹಿಸಿ ನಲ್ಲಿಗಳ ಮೂಲಕ ಊರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಯಿತು. ನಂತರ 1955-60 ರಲ್ಲಿ ಬಾತಿ ಕೆರೆಯಿಂದ ನೀರನ್ನು ಪೂರೈಕೆ ಮಾಡಲಾಯಿತು. ನಂತರ 1970 ರಲ್ಲಿ ಭದ್ರಾ ಚಾನಲ್‍ನಿಂದ ನೀರು ಸಂಗ್ರಹಿಸಿ 1972 ರಲ್ಲಿ ಟಿ.ವಿ. ಸ್ಟೇಷನ್ ಹತ್ತಿರ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪ್ರಾರಂಭವಾಗಿ, 1977 ರಲ್ಲಿ ಶುದ್ಧೀಕರಿಸಿದ ನೀರನ್ನು ಪೂರೈಸಲಾಯಿತು. ತದನಂತರದಲ್ಲಿ 1998 ರಲ್ಲಿ ಹೊಸ ಯೋಜನೆ ರೂಪಗೊಂಡು ರಾಜನಹಳ್ಳಿ ಬಳಿ ತುಂಗಭದ್ರಾ ನದಿಗೆ ಜಾಕ್‌ವೆಲ್ ನಿರ್ಮಾಣ ಮಾಡಿ ಬಾತಿಗುಡ್ಡದ ಬಳಿ ನೀರು ಶುದ್ಧೀಕರಣ ಕೇಂದ್ರವನ್ನು ಸ್ಥಾಪಿಸಿ, ಅಲ್ಲಿಂದ ನೀರನ್ನು ಸರಬರಾಜು ಮಾಡಲಾಯಿತು. ಬೆಳೆಯುತ್ತಿರುವ ಜನಸಂಖ್ಯೆ, ನಗರ ವಿಸ್ತೀರ್ಣ ಮತ್ತು ನೀರಿನ ಬೇಡಿಕೆ ಮುಂದಿನ ಯೋಜನೆಗಳಿಗೆ ನಾಂದಿಯಾಯಿತು. ಆಗ ನೀರು ಸಂಗ್ರಾಹಕವಾಗಿ ಕುಂದವಾಡ ಕೆರೆಯನ್ನು ಆಯ್ಕೆ ಮಾಡಿಕೊಂಡು 2003 ರಲ್ಲಿ ಕುಂದವಾಡ ಕೆರೆಯನ್ನು ಜಲ ಸಂಗ್ರಹಕವಾಗಿ ಮಾಡಲಾಯಿತು. ಭದ್ರಾ ಚಾನಲ್‌ನಿಂದ ಸಿಮೆಂಟ್ ಪೈಪುಗಳ ಮೂಲಕ ನೀರನ್ನು ತರಲಾಗುತ್ತಿತ್ತು ಮತ್ತು ಬಹಳಷ್ಟು ನೀರು ಸೋರಿಕೆಯಾಗುತ್ತಿತ್ತು. ಅಲ್ಲಿಂದ ಒಟ್ಟಾರೆ ಪ್ರತಿ ದಿನ 60 ಮಿಲಿಯನ್ ಲೀಟರ್ ನೀರನ್ನು ದಾವಣಗೆರೆಗೆ ಸರಬರಾಜು ಮಾಡಲಾಗುತ್ತಿತ್ತು.
ಇನ್ನು ಹೆಚ್ಚಿನ ನೀರಿನ ಸಂಗ್ರಹ ಮತ್ತು ಸರಬರಾಜು ದೃಷ್ಟಿಯಿಂದ, ಹೆಚ್ಚಿನ ಓವರ್ ಹೆಡ್ ಟ್ಯಾಂಕ್‍ಗಳ ನಿರ್ಮಾಣ ಮತ್ತು ಸತತ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಯಿತು. 2008-09 ರಲ್ಲಿ ಹೊಸ ಯೋಜನೆಯನ್ನು ರೂಪಿಸಿ ಇನ್ನು ಹೆಚ್ಚಿಗೆ ಪ್ರತಿ ದಿನ 40 ಮಿಲಿಯನ್ ಲೀಟರ್ ನೀರನ್ನು ನದಿಯಿಂದ ತರುವ ಪ್ರಯತ್ನದಲ್ಲಿ ಯಶಸ್ವಿಯಾದರು. ಪ್ರತಿ ದಿನ 20 ಮಿಲಿಯನ್ ಲೀಟರ್ ನೀರನ್ನು ನೇರವಾಗಿ ಕುಂದವಾಡ ಕೆರೆ ಮತ್ತು 20 ಮಿಲಿಯನ್ ಲೀಟರ್ ನೀರನ್ನು ಬಾತಿ ನೀರು ಶುದ್ಧೀಕರಣ ಕೇಂದ್ರಕ್ಕೆ ತರಲಾಯಿತು. ಈ ಎಲ್ಲಾ ಯೋಜನೆಗಳಿಂದ ಒಟ್ಟಾರೆ ಪ್ರತಿ ದಿನ ದಾವಣಗೆರೆ ನಗರಕ್ಕೆ 100 ಮಿಲಿಯನ್ ಲೀಟರ್ ನೀರನ್ನು ಈಗ ಇರುವ 31 ಓವರ್ ಹೆಡ್ ಟ್ಯಾಂಕ್‍ಗಳಿಗೆ ಭರ್ತಿ ಮಾಡಿ ಸರಬರಾಜು ಮಾಡುವುದರ ಜೊತೆಯಲ್ಲಿ ನೂತನವಾಗಿ ಜಲಸಿರಿ ಯೋಜನೆಯಲ್ಲಿ 18 ಓವರ್ ಹೆಡ್ ಟ್ಯಾಂಕರ್‍ಗಳನ್ನು ನಿರ್ಮಿಸಿ 24×7 ಅಂದರೆ ಪ್ರತಿ ದಿನದ 24 ಗಂಟೆಯು ನೀರು ಕೊಡುವ ಯೋಜನೆ ಪ್ರಗತಿಯಲ್ಲಿದೆ.
ಕೆರೆ ಅಭಿವೃದ್ಧಿ ಏಕೆ…?
ನಮ್ಮ ದಾವಣಗೆರೆಯಲ್ಲಿ ಪ್ರಮುಖವಾಗಿರುವ ಕುಂದವಾಡ ಕೆರೆಯ ಅಭಿವೃದ್ಧಿಯೂ ಕೂಡ ಬಹಳಷ್ಟು ಅವಶ್ಯ ಇರುವುದನ್ನು ಅರಿತು `ದಾವಣಗೆರೆ ಸ್ಮಾರ್ಟ್ ಸಿಟಿ’ ವಿಶೇಷ ತಾಂತ್ರಿಕ ತಜ್ಞರ ಸಲಹೆಯೊಂದಿಗೆ ಕುಂದವಾಡ ಕೆರೆಯ ಏರಿ ಅಭಿವೃದ್ಧಿ ಕಾರ್ಯವನ್ನು ತೆಗೆದುಕೊಂಡಿರುತ್ತದೆ. 265 ಎಕರೆ ವಿಸ್ತೀರ್ಣವುಳ್ಳ ಕುಂದವಾಡ ಕೆರೆ ಸುತ್ತಲೂ 4.91 ಕಿಲೋಮೀಟರ್ ಏರಿಯನ್ನು ಹೊಂದಿರುತ್ತದೆ. 10 ಮೀಟರ್ ನಿಂದ 14 ಮೀಟರ್‍ವರೆಗೆ ಏರಿಯ ಮೇಲೆ ಅಗಲವಾದ ರಸ್ತೆ ಹೊಂದಿರುತ್ತದೆ, ಎರಡೂ ಬದಿಯಲ್ಲಿ ಮರಗಳು ಇದ್ದು ಏರಿಯ ಸೌಂದರ್ಯವನ್ನು ಹೆಚ್ಚಿಸಿರುತ್ತವೆ. ಪ್ರಸ್ತುತ ಕುಂದವಾಡ ಕೆರೆಯಲ್ಲಿ 1.1 Mcum (ಮಿಲಿಯನ್ ಕ್ಯೂಬಿಕ್ ಮೀಟರ್) ನೀರಿನ ಶೇಖರಣೆ ವ್ಯವಸ್ಥೆ ಇರುತ್ತದೆ. ಅದರಲ್ಲಿ 0.1415 Mcum ನೀರು ಸೋರಿಕೆಯಾಗುವುದು ಕಂಡುಬರುತ್ತಿದೆ. ಇದನ್ನು ಸರಿದೂಗಿಸಲು ತಜ್ಞರ ಸಮಿತಿ ಕೆರೆಯ ಏರಿಯನ್ನು 0.183 ಮೀಟರ್ ಎತ್ತರಿಸಲು ಸಲಹೆ ನೀಡುವುದರ ಜೊತೆಗೆ ಏರಿಯನ್ನು ಬಿಗಿಗೊಳಿಸುವ ಸಲಹೆಯನ್ನು ನೀಡಿರುತ್ತಾರೆ. ಜೊತೆಯಲ್ಲಿ ಸೈಕಲ್ ಟ್ರ್ಯಾಕ್ ಸಹ ನಿರ್ಮಿಸಲು ಹೇಳಿರುತ್ತಾರೆ.
ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಮಾಡುತ್ತಿರುವ `ಕುಂದವಾಡ ಕೆರೆ ಅಭಿವೃದ್ಧಿ’ ಯೋಜನೆಯನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಆಧುನಿಕತೆ ಬೆಳೆದಂತೆ ನದಿ ಪಾತ್ರಗಳಿಗೆ ಅಡ್ಡವಾಗಿ ಅಣೆಕಟ್ಟುಗಳನ್ನು ಕಟ್ಟಿ, ನೀರನ್ನು ಹಾಯಿಸಿ ಬೆಳೆ ಬೆಳೆಯುವುದಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ರೂಪಾಂತರಗೊಳಿಸಿದ್ದಾರೆ. ಮನುಷ್ಯನಿಗಿಂತಲೂ ಮೊದಲೇ ಜನಿಸಿದ ಸಕಲ ಜೀವರಾಶಿಗಳು ಮತ್ತು ಸಸ್ಯರಾಶಿಗಳು ಕೂಡ ನೀರನ್ನೇ ಅವಲಂಬಿಸಿ ಬೆಳೆಯುತ್ತಾ ಬಂದಿರುತ್ತವೆ. ಆದರೆ ಅವುಗಳ ಅಳಿವನ್ನು ಕಂಡು, ಇತ್ತೀಚೆಗೆ, ಅವುಗಳ ಉಳಿವಿಗೋಸ್ಕರ ಶತಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ. ನೀರಿನ ಅಗತ್ಯತೆಯನ್ನು ಕಂಡು, ನೀರಿನ ಸಂರಕ್ಷಣೆಯು ಕೂಡ ಬರದಿಂದ ಸಾಗಿದೆ.
ಕೆರೆಯ ಏರಿ ಅಭಿವೃದ್ಧಿ ಹೇಗೆ:
ಕೆರೆ ಏರಿಯ ಒಳಭಾಗದಲ್ಲಿ ಈಗ ಇರುವ ಇಳುಕಲು ಹೆಚ್ಚುಗೊಳಿಸಲು ಮತ್ತು ಕಲ್ಲಿನ Revetment ಕಟ್ಟಲು ಅನುಕೂಲವಾಗಲು ಈಗ ಇರುವ ಕಲ್ಲುಗಳನ್ನು ತೆಗೆದು ಮಣ್ಣನ್ನು ಮಟ್ಟಗೊಳಿಸಿ ಗಟ್ಟಿಗೊಳಿಸುವುದು, ಹೀಗೆ ಒಟ್ಟು ಕೆರೆ ಒಳಭಾಗ 55031 ಚದುರ ಮೀಟರ್ ಕಾಮಗಾರಿ ತೆಗೆದುಕೊಳ್ಳಲಾಗಿದೆ. ನಂತರ ಹೊಸ ಗೊರಸು ಮಣ್ಣನ್ನು ಉಪಯೋಗಿಸಿ ಕೆರೆಯ ಒಳಭಾಗದ ಸುತ್ತಲೂ 84843 Cum (ಘನಮೀಟರ್) ಮಣ್ಣಿನಿಂದ ಏರಿಯನ್ನು ಅಗಲಗೊಳಿಸುವುದು ಮತ್ತು 34580 Cum ಮಣ್ಣಿನಿಂದ ಎತ್ತರಿಸುವುದು. ಸಿದ್ದಪಡಿಸಿದ ಒಳ ಭಾಗದ ಏರಿಯ ಮೇಲ್ಭಾಗಕ್ಕೆ ಏರಿಯ ಮೂಲಕ ನೀರು ಸೋರಿಕೆ ತಡೆಯಲು LDPE ತೆಳುವಾದ ಹಾಸನ್ನು ಹಾಕಿ ನಂತರ ಮರಳನ್ನು ಹರಡುವುದು, ಅದರ ಮೇಲೆ ವಿವಿಧ ಗ್ರೇಡ್‌ನ ಜಲ್ಲಿಯನ್ನು ಉಪಯೋಗಿಸಿ ಪಿಲ್ಟರ್ ಮಿಡಿಯ ಒದಗಿಸುವುದು, ಇದರ ಮೇಲೆ ಇರುವ ಕಲ್ಲನ್ನು ಮತ್ತು ಹೊಸ ಕಲ್ಲನ್ನು ಉಪಯೋಗಿಸಿ ಕಲ್ಲು ಕಟ್ಟಡ ಮಾಡುವುದು.
ಏರಿಯ ಮೇಲೆ ಹೊಸ ಗೊರಸು ಮಣ್ಣನ್ನು ಹಾಕಿ ಓಡಾಡುವ ಹಾದಿ, ಸೈಕಲ್ ಟ್ರ್ಯಾಕ್ ಮಾಡಲಾಗುವುದು. ಒಟ್ಟು 16.61 ಮೀಟರ್ ಅಗಲ ಏರಿಯ ಮೇಲ್ಬಾಗದಲ್ಲಿ ಇರುತ್ತದೆ. ಪ್ರಮುಖವಾಗಿ ಈಗ ಇರುವ ಮರ, ಗಿಡಗಳನ್ನು ಉಳಿಸಿಕೊಳ್ಳುವುದು ಇದರಲ್ಲಿನ ಆದ್ಯ ಕರ್ತವ್ಯವಾಗಿದೆ. ಏರಿಯ ಮುಂಭಾಗದಿಂದ (2m + 0.20 (kerb) ) ಇರುವ ಮರಗಳಿಗೆ ಸುತ್ತಲೂ ಜಾಗವನ್ನು ಬಿಟ್ಟು, 2.5 ಮೀಟರ್ ಅಗಲದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ. ಸೈಕಲ್ ಟ್ರ್ಯಾಕ್ ಗೊರಸು ಮಣ್ಣಿನ ಮೇಲ್ಭಾಗದಲ್ಲಿ ಜಲ್ಲಿಕರಣ ಮಾಡಿ ಡಾಂಬರಿಕರಣ ಮಾಡಲಾಗತ್ತದೆ. ನಂತರ 0.20 (kerb) +4.81+ 0.20 (kerb) = 5.41 ಮೀಟರ್ ನಡೆದಾಡುವ ಹಾದಿ (Walking path) ಮಾಡಲಾಗುತ್ತಿದೆ. ನಂತರ ಕೆರೆಯ ಒಳಭಾಗದಲ್ಲಿ ಈಗ ಇರುವ ಮರಗಳನ್ನು ಉಳಿಸಿಕೊಳ್ಳಲು ಏರಿಯ ಸುತ್ತಲೂ 1.5 ಮೀಟರ್ ಅಗಲವಾಗಿ ಜಾಗವನ್ನು ಬಿಡಲಾಗಿದೆ. ನಂತರ 2.5ಮೀ ನಡೆದಾಡುವ ಹಾದಿ ನಿರ್ಮಿಸಲಾಗುತ್ತಿದೆ. ಅದಾದ ನಂತರ 0.2 mm (kerb) + 2.5m + 0.2m = 2.9 m ಹೂವಿನ ಹಾಸಿಗೆ ನಿರ್ಮಿಸಲಾಗುತ್ತದೆ. ಮಧ್ಯಂತರಗಳಲ್ಲಿ ಕುಳಿತುಕೊಳ್ಳಲು ಸಾದರಹಳ್ಳಿ ಕಲ್ಲಿನ ಬೆಂಚ್‍ಗಳನ್ನು ಹಾಕಲಾಗುತ್ತದೆ. ನಂತರ ಸುತ್ತಲು ಯಾರೂ ಕೆರೆಯ ನೀರಿಗೆ ಇಳಿಯದಂತೆ ಮಾಡಲು ಸುಂದರವಾದ ಬೇಲಿಯನ್ನು ನಿರ್ಮಿಸಲಾಗುತ್ತದೆ. ಇದರ ಜೊತೆಯಲ್ಲಿ ಮಣ್ಣಿನ ಮೇಲೆ 24 watts 348 LED (ಹುಲ್ಲಿನ ಹೊದಿಕೆ) ಮಾಡಲಾಗುತ್ತದೆ. ಕಸ ಹಾಕಲು UV Stabilized Polyethelene ಕಸದ ತೊಟ್ಟಿಗಳನ್ನು ಇಡಲಾಗುತ್ತದೆ. ಹೊಸ kerb Stoneಗಳನ್ನು ಹಾಕುವುದರೊಂದಿಗೆ ಏರಿಯನ್ನು ಸಂಪೂರ್ಣವಾಗಿ ಅಲಂಕರಿಸಲಾಗುತ್ತದೆ.
ಈ ಮೊದಲು ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಅವುಗಳು ಸಂಪೂರ್ಣವಾಗಿ ಹಾಳಾಗಿದ್ದು, ಕಾರ್ಯನಿರ್ವಹಿಸುತ್ತಿರುವುದಿಲ್ಲ. ಆದ ಕಾರಣ ಹೊಸದಾಗಿ 24 watts 348 LED ಬೀದಿ ದೀಪಗಳನ್ನು ಹಾಕಲಾಗುತ್ತದೆ. HDPE ಪೈಪುಗಳ ಮೂಲಕ HDPEನ್ನು ಅಳವಡಿಸಲಾಗುತ್ತಿದೆ. ರಾತ್ರಿ ಪೂರ್ತಿ ಬೆಳಕು ಇರುವುದರಿಂದ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಕೆರೆಯ ಏರಿಯ ಹೊರಭಾಗದಲ್ಲಿ ಮಳೆ ನೀರು ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಚರಂಡಿಯನ್ನು ಕಾಂಕ್ರೀಟ್ ಸ್ಲಾಬ್‍ಗಳಿಂದ ಮುಚ್ಚಲಾಗುವುದು ಮತ್ತು ಚರಂಡಿಯ ಸುತ್ತಲೂ ಕಾಂಕ್ರೀಟ್ ಪ್ಲಾಂಗಿಗ್ ಮಾಡಲಾಗುತ್ತಿದೆ ಮತ್ತು ಬೇರೆ ಯಾವುದೇ ಕಾಂಕ್ರೀಟೀಕರಣ ಇರುವುದಿಲ್ಲ.
ಮೆ|| ಸೌಹಾರ್ದ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು. ಇವರು ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುತ್ತಾರೆ. 12 ತಿಂಗಳ ಅವಧಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬ ಕರಾರಿನೊಂದಿಗೆ ಗುತ್ತಿಗೆ ನೀಡಿರುತ್ತದೆ. ಯಶಸ್ವಿಯಾಗಿ ಈ ಕಾಮಗಾರಿ ಪೂರ್ಣಗೊಳ್ಳಲೆಂದು ಹಾರೈಸೋಣ.
ಹೆಚ್.ಎನ್. ಶಿವಕುಮಾರ್, ಬಿ.ಇ. (ಸಿವಿಲ್)
ಮಾಜಿ ಸದಸ್ಯರು, ಮಹಾನಗರಪಾಲಿಕೆ
ದಾವಣಗೆರೆ ಸಲಹಾ ಮಂಡಳಿ ಸದಸ್ಯರು,
ದಾವಣಗೆರೆ ಸ್ಮಾರ್ಟ್ ಸಿಟಿ ಪ್ರೈ.ಲಿ.
[email protected]