ಬಾತಿ ಕೆರೆ ಒತ್ತುವರಿ ತೆರವಿಗೆ ಕಮ್ಯುನಿಸ್ಟ್ ಆಗ್ರಹ

ದಾವಣಗೆರೆ, ಜ.20- ಬಾತಿ ಕೆರೆ ಒತ್ತುವರಿ ತೆರವುಗೊಳಿಸುವ ಜೊತೆಗೆ ಅಲಿನೇಷನ್ ಮಾಡಿಸಿಕೊಂಡು ಡೋರ್ ನಂಬರ್ ಪಡೆದಿರುವುದನ್ನು ಹಿಂಪಡೆಯುವಂತೆ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರಿಗೆ ಮನವಿ ಅರ್ಪಿಸಿದ ಪಕ್ಷದ ಮುಖಂಡರ ನಿಯೋಗವು, ಬಾತಿ ಕೆರೆಯನ್ನು ಸಂರಕ್ಷಣೆ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದೆ.

ಪಕ್ಷದ ಹಿರಿಯ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಬಾತಿ ಕೆರೆ ಬಳಿ ಸಿಪಿಐ ಜಿಲ್ಲಾ ಮಂಡಳಿ ಹೋರಾಟ ನಡೆಸಿ, ಬಾತಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದ್ದೆವು. ಅಲ್ಲದೇ, ಕೆರೆ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಅಲಿನೇಷನ್ ಮಾಡಿಸಿಕೊಂಡು ಡೋರ್ ನಂಬರ್ ಪಡೆದಿರುವುದನ್ನು ಹಿಂಪಡೆಯುವಂತೆಯೂ ಒತ್ತಾಯ ಮಾಡಲಾಗಿತ್ತು, ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳು ಕೊಟ್ಟ ಮಾಹಿತಿಯಂತೆ ಬಾತಿ ಕೆರೆ ಅಳತೆಯನ್ನು ಸರ್ವೇ ಮಾಡಿ, ಹದ್ದುಬಸ್ತು ಮಾಡಬೇಕು. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆಸಬೇಕು. ಕೆರೆಯ ಆಳವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಹೆಚ್ಚು ನೀರು ಸಂಗ್ರಹಿಸುವಂತೆ ಮಾಡಬೇಕು.ಇದರಿಂದ ದೊಡ್ಡಬಾತಿ, ಹಳೆ ಬಾತಿ, ನೀಲಾನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ದಾವಣಗೆರೆ ಮಹಾ ನಗರಕ್ಕೆ ನೀರು ಪೂರೈಸುವ ನೀರು ಸಂಗ್ರಹಣಾ ಕೆರೆಯಾಗಿ ಅದನ್ನು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು ಡಿಸಿ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರ, ತಹಸೀಲ್ದಾರ್ ಹಾಗೂ ಸಿಪಿಐ ಮುಖಂಡರ ಸಭೆಯಲ್ಲಿ ಕೆರೆಯ ಸರ್ವೇ ಮಾಡುವಂತೆ, ಸಂಪೂರ್ಣ ವರದಿ ನೀಡುವಂತೆ ಆದೇಶಿಸಿದ್ದರು. ಸುಮಾರು ಎರಡು ತಿಂಗಳಾದರೂ ಕೆರೆಯ ಜಮೀನು ಒತ್ತುವರಿ ಮಾಡಿಕೊಂಡಿರುವವರು 4.5 ಎಕರೆಗೆ ಅಲಿನೇಷನ್ ಸಹ ಡಿಸಿ ಕಚೇರಿಯಿಂದಲೇ ಮಾಡಿಸಿಕೊಂಡಿದ್ದು, ಡೋರ್ ನಂಬರ್ ಸಹ ಪಡೆದಿದ್ದು ಇದು
ಹೇಗೆ ಎಂದು ಪ್ರಶ್ನಿಸಿ, ತಕ್ಷಣವೇ ಆ ಡೋರ್ ನಂಬರ್ ರದ್ಧುಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆನಂದರಾಜ್, ಆವರಗೆರೆ ಹೆಚ್.ಜಿ. ಉಮೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು, ನರೇಗಾ ರಂಗನಾಥ ಸೇರಿದಂತೆ ಇತರರು ಇದ್ದರು.

error: Content is protected !!