ವಿದ್ಯಾರ್ಥಿಗಳ ಸಮಸ್ಯೆಗಳ ಸ್ಪಂದನೆಗೆ ಎಬಿವಿಪಿ ಆಗ್ರಹ

ದಾವಣಗೆರೆ. ಜ.19- ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಜಿಲ್ಲಾ ಘಟಕದ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ ರಾಜ್ಯದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಹಾಗೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರವು ನೀಡುತ್ತಿದ್ದ ಕೆಲ ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳಿಗೆ ಕೊರೊನಾದ ಕಷ್ಟ ಕಾಲದಲ್ಲಿ ತಲುಪದಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ತಕ್ಷಣ ಸರ್ಕಾರ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು. ವಿದ್ಯಾರ್ಥಿಗಳು ತಮ್ಮ ಊರುಗಳಿಂದ ತರಗತಿಗಳಿಗೆ ಹಾಜರಾ ಗಲು ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ತೆರೆದಿದ್ದು, ಉಳಿದ ವಿದ್ಯಾರ್ಥಿಗಳು ಹಾಸ್ಟೆಲ್ ವ್ಯವಸ್ಥೆ ಸಿಗದೇ ಪರದಾಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ಗಳಲ್ಲಿ ವಸತಿ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅನೇಕ ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ಖಾಯಂ ಉಪನ್ಯಾಸಕರು ಇಲ್ಲ. ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಲು ಆದೇಶಿಸಬೇಕು. ವರ್ಷದ 12 ತಿಂಗಳುಗಳ ಕಾಲ ವೇತನ ನೀಡಬೇಕು. ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯು ತರಗತಿಗಳನ್ನು ಸರಿಯಾಗಿ ನಡೆಸಲು ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸಿ ಕೋವಿಡ್ -19 ರ ನಿಯಮಾವಳಿಯ ಪಾಲನೆಗೆ ಬೇಕಾದ ಕ್ರಮಗಳ ಬಗ್ಗೆ ನಿಗಾವಹಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ಶರತ್, ಹಾಸ್ಟೆಲ್ ಪ್ರಮುಖ ರವಿ, ಹೋರಾಟ ಪ್ರಮುಖ ವಿಜಯ್, ಸಂಪರ್ಕ ಪ್ರಮುಖ್ ದೊಡ್ಡೇಶ್, ನಗರ ಕಾರ್ಯಕಾರಿಣಿ ಸದಸ್ಯರಾದ ಕೊಟ್ರೇಶ್, ಚರಣ್, ಸುಮನ್, ನರೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!