ಮೂಲೆ ಸೇರಿದ ಸ್ಮಾರ್ಟ್ ಆಟೋ

ಪರಿಸರ ಸ್ನೇಹಿ ಎಂದುಕೊಂಡು ಆಟೋ ಪಡೆದ ಫಲಾನುಭವಿಗಳು ಸಾಲದ ಸುಳಿಯಲ್ಲಿ

ದಾವಣಗೆರೆ, ಜ. 18 – ಪರಿಸರ ಮಾಲಿನ್ಯ ಕಡಿಮೆ ಮಾಡಲು ಹಾಗೂ ಉದ್ಯೋಗ ನೀಡಲು ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಒದಗಿಸಲಾಗಿದ್ದ ಇ-ಆಟೋಗಳು ಕೆಲಸ ಮಾಡದೇ ಮೂಲೆ ಗುಂಪಾಗಿವೆ. ಆಟೋ ಒದಗಿಸಿದ ಕಂಪನಿ ವಿರುದ್ಧ ಈಗ ಮೊಕದ್ದಮೆ ದಾಖಲಿಸಲಾಗುತ್ತಿದೆ.

ಒಂದೂವರೆ ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜ ನೆಯ ಮೂಲಕ ಬ್ಯಾಟರಿ ಚಾಲಿತ ಇ – ಆಟೋಗಳನ್ನು ವಿತರಿಸಲಾಗಿತ್ತು. ಆದರೆ, ಈ ಆಟೋಗಳು ಆರಂಭದಲ್ಲೇ ಕೈ ಕೊಟ್ಟಿವೆ. ಆಟೋ ಪಡೆದ ದಿನದಿಂದಲೇ ಆರಂಭವಾದ ಸಮಸ್ಯೆಗಳು ನಂತರ ಉಲ್ಬಣಿಸಿದ್ದು, ಆಟೋಗಳು ತಳ್ಳು ಗಾಡಿ ಐಸ್ಸಾ ಎನ್ನುತ್ತಿವೆ ಎಂದು ಆಟೋ ಪಡೆದವರು ದೂರಿದ್ದಾರೆ.

ದೂರಿನಲ್ಲಿ ಹುರುಳಿದೆ ಎಂದಿರುವ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಆಟೋ ಪೂರೈಸಿದ ಪೂನಾ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಇ-ಆಟೋಗಳಲ್ಲಿ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪೂನಾ ಕಂಪನಿಗೆ ಐದಾರು ಬಾರಿ ಪತ್ರಗಳನ್ನು ಬರೆಯಲಾಗಿತ್ತು. ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

ಇದುವರೆಗೂ ಉತ್ತರ ನೀಡದ ಕಂಪನಿ, ಕಳೆದ ವಾರದಲ್ಲಿ ಪತ್ರ ಬರೆದು, ತಾವು ಪೂರೈಸಿದ ಇ-ಆಟೋ ಸರಿಯಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಸದ್ಯದಲ್ಲೇ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಅಶಾದ್ ಷರೀಫ್ ಅವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಪ್ರಚಾರದೊಂದಿಗೆ ಇ-ಆಟೋಗಳನ್ನು ಫಲಾನುಭವಿಗಳಿಗೆ ನೀಡಲಾಗಿತ್ತು. 

ಇದರ ಬೆಲೆ 1.80 ಲಕ್ಷ ರೂ. ಆಗಿತ್ತು. ಈ ಪೈಕಿ 1.02 ಲಕ್ಷ ರೂ.ಗಳನ್ನು ಸ್ಮಾರ್ಟ್ ಸಿಟಿ ಸಬ್ಸಿಡಿ ರೂಪದಲ್ಲಿ ನೀಡಿದ್ದರೆ, ಉಳಿದ ಹಣವನ್ನು ಫಲಾನುಭವಿಗಳು ಭರಿಸಬೇಕಿತ್ತು.

ಮೊದಲ ಹಂತದಲ್ಲಿ 20 ಇ-ಆಟೋಗಳನ್ನು ಸ್ಮಾರ್ಟ್ ಸಿಟಿ ವತಿಯಿಂದ ವಿತರಿಸಲು ನಿರ್ಧರಿಸಲಾಗಿತ್ತು. ಇವುಗಳ ಪೈಕಿ 9 ಆಟೋಗಳನ್ನು ಈಗಾಗಲೇ ವಿತರಿಸಲಾಗಿದೆ.

ಸ್ಮಾರ್ಟ್ ಸಿಟಿ ಸೂಚನೆಯಂತೆ 72 ಸಾವಿರ ರೂ.ಗಳನ್ನು ಬ್ಯಾಂಕುಗಳಿಂದ ಸಾಲವಾಗಿ ಪಡೆದು ಕಟ್ಟಿದ್ದೆವು. ಆದರೆ, ಮೊದಲ ದಿನದಿಂದಲೇ ಆರಂಭವಾದ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ ಎಂದು ಆಟೋ ಪಡೆದ ಫಲಾನುಭವಿ ಕೊಟ್ರೇಶ್ ದೂರಿದ್ದಾರೆ.

ಮೂರು ಗಂಟೆ ಚಾರ್ಜ್ ಮಾಡಿದರೆ ಆಟೋ 70 ಕಿ.ಮೀ. ಓಡುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಆಟೋ 30 ಕಿ.ಮೀ. ಸಹ ಓಡುತ್ತಿಲ್ಲ. ಅಲ್ಲದೇ ಆಟೋ ಎಷ್ಟು ಕುಲುಕಾಡುತ್ತದೆ ಎಂದರೆ ಒಂದು ಬಾರಿ ಕೂತವರು ಇನ್ನೊಮ್ಮೆ ಎಂದಿಗೂ ಹತ್ತುವುದಿಲ್ಲ ಎಂದವರು ಹೇಳಿದ್ದಾರೆ.

ಈ ಬಗ್ಗೆ ಕಳೆದ ಒಂದು ವರ್ಷದಿಂದ ಆಟೋ ಪೂರೈಸಿದ ಕಂಪನಿ, ಶೋ ರೂಂ ಹಾಗೂ ಸ್ಮಾರ್ಟ್ ಸಿಟಿ ಕಚೇರಿಗಳಿಗೆ ದೂರು ನೀಡುತ್ತಲೇ ಬಂದಿದ್ದೇವೆ. ಆಟೋಗಳು ಈಗ ಮನೆ ಮುಂದೆ ಕೆಲಸ ಮಾಡದೇ ನಿಂತಿವೆ. ನಮಗೆ ನಿಂತ ಆಟೋ ಕಾಯುವುದೇ ಸಮಸ್ಯೆಯಾಗಿದೆ ಎಂದು ಕೊಟ್ರೇಶ್ ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ನೀಗುತ್ತದೆ, ನಮ್ಮ ಜೀವನಕ್ಕೂ ಆಧಾರವಾಗುತ್ತದೆ ಎಂದು ಆಟೋ ಖರೀದಿಸಿದ್ದೆವು. ಆದರೆ, ಈಗ ನೋಡಿದರೆ ನಮ್ಮ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದರೂ ಅದು ಬಗೆಹರಿಯುವುದಕ್ಕೆ ಎಷ್ಟು ದಿನ ಬೇಕೋ ಗೊತ್ತಿಲ್ಲ. ಬ್ಯಾಂಕ್ ಸಾಲದ ಸಮಸ್ಯೆ ಬಗೆಹರಿಸಿ ಆಟೋ ಕಂಟಕದಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದವರು ಮೊರೆ ಇಟ್ಟಿದ್ದಾರೆ.

error: Content is protected !!