ದಾ.ವಿ.ವಿ ಯಲ್ಲಿನ ಡಾ.ಎಂ.ಚಿದಾನಂದಮೂರ್ತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ರಾಜಶೇಖರಪ್ಪ
ದಾವಣಗೆರೆ, ಜ.16- ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗಕ್ಕೆ ಡಾ.ಎಂ.ಚಿದಾನಂದ ಮೂರ್ತಿ ಅವರ ಹೆಸರಿಟ್ಟಿರುವುದು ಸಂತೋಷದ ಸಂಗತಿ. ಕನ್ನಡ ವಿದ್ವಾಂಸ ಪರಂಪರೆಗೆ ಸಂದ ಗೌರವ. ಇದರಿಂದ ಕನ್ನಡ ನಾಡು ತನ್ನನ್ನು ತಾನೇ ಗೌರವಿಸಿಕೊಂಡಂತಾಗಿದೆ ಎಂದರೆ ತಪ್ಪಲ್ಲ ಎಂದು ಸಂಶೋಧಕ ಬಿ.ರಾಜಶೇಖರಪ್ಪ ಅವರು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೊನ್ನೆ ಏರ್ಪಾಡಾಗಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಹುಟ್ಟಿದ ಚಿಮೂ ಅವರು ಬಡತ ನದಲ್ಲಿ ಬಂದರೂ ಮೈಸೂರು ವಿಶ್ವವಿದ್ಯಾನಿಲ ಯದಲ್ಲಿ ಕುವೆಂಪು, ಡಿ.ಎಲ್.ಎನ್., ತೀನಂಶ್ರೀ, ಜಿ.ಎಸ್.ಶಿವರುದ್ರಪ್ಪ, ಎಲ್.ಬಸವರಾಜಯ, ತ.ಸು.ಶಾಮರಾಯ ಇಂತಹ ಗುರುಗಳನ್ನು ಪಡೆದು, ಅವರ ಮೆಚ್ಚುಗೆಗೆ ಪಾತ್ರರಾದವರು. ಕನ್ನಡ ಸಂಶೋಧನಾ ಕ್ಷೇತ್ರದ ಮೇರು ಕೃತಿ, ಆಚಾರ್ಯ ಕೃತಿ ಎಂದೇ ಹೆಸ ರಾದ `ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯ ಯನ’ ಎಂಬ ಸಂಶೋಧನಾ ಮಹಾ ಪ್ರಬಂಧದಿಂದ ಅನೇಕ ಸಂಶೋಧಕರಿಗೆ ಸ್ಫೂರ್ತಿಯಾದವರು. ಕಿರಿಯ ಎತ್ತರದವರಾದರೂ ಹಿರಿಯ ವ್ಯಕ್ತಿತ್ವದವರು. ಕರ್ನಾಟಕವಷ್ಟೇ ಅಲ್ಲದೇ, ಹೊರನಾಡಿನಲ್ಲಿ ನೇಪಾಳದಲ್ಲೂ ಸಂಶೋಧನೆ ಕೈಕೊಂಡು, ಅಮೋಘ ಕೃತಿಗ ಳನ್ನು ರಚಿಸಿದವರು. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ತುಂಗ ಭದ್ರಾ ನದಿಯಲ್ಲಿ ಹಾರಿ ಆತ್ಮಾರ್ಪಣೆಗೆ ಪ್ರಯ ತ್ನಿಸಿ, ಅದರ ಸ್ಥಾಪನೆಗೆ ಕಾರಣರಾದವರು.
ಕನ್ನಡ ಶಾಸ್ತ್ರೀಯ ಭಾಷೆ ಎಂಬುದನ್ನು ಸರ್ಕಾರಕ್ಕೆ ಸಮರ್ಥಿಸಿ ತೋರಿಸಿದವರು. ಕನ್ನಡಕ್ಕೆ ಆಘಾತವಾದಗಲೆಲ್ಲ ಅದರ ವಿರುದ್ಧ ಉಸಿರೆತ್ತಿದವರು. ಕನ್ನಡ ಶಕ್ತಿಕೇಂದ್ರದ ಸ್ಥಾಪನೆ ಮಾಡಿ ಹೋರಾಡಿದವರು. ಹಂಪಿ ಪರಿಸರದಲ್ಲಿ ರಾಷ್ಟ್ರ ವಿರೋಧಿಗಳು ಬಂದು ನೆಲೆಸಿರುವುದರ ಬಗ್ಗೆ ಸರ್ಕಾರಕ್ಕೆ ಸಾರ್ವಜನಿಕರಿಗೆ ಧೈರ್ಯದಿಂದ ಮುನ್ಸೂಚನೆ ನೀಡಿದವರು. ಇಂತವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದನ್ನು ಕೆಲವರು ಅಸಹನೆ ಯಿಂದ ತಪ್ಪಿಸಿದರು. ಇಂತಹ ಕನ್ನಡ ಪ್ರೇಮಿ, ದೇಶಪ್ರೇಮಿ, ಸಂಸ್ಕೃತಿ ಪ್ರೇಮಿ, ಶ್ರೇಷ್ಠ ಮಾನವೀಯ ಗುಣಗಳ ವ್ಯಕ್ತಿಯೂ ಆಗಿದ್ದರು ಎಂದು ರಾಜಶೇಖರಪ್ಪ ಅವರು ಬಣ್ಣಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರೂ ಆದ ಸಾಹಿತಿ ಬಾ.ಮ ಬಸವರಾಜಯ್ಯ `ಚಿದಾನಂದ ಮೂರ್ತಿಯವರ ವ್ಯಕ್ತಿತ್ವ ದೊಡ್ಡದು. ಆದರೆ, ಅವರನ್ನು ಕೆಲವು ಕೆಂಭೂತವಾದಿಗಳು ಅವರನ್ನು ಮೂಲಭೂತವಾದಿಗಳು ಎಂದು ಬಿಂಬಿಸುವ ಮೂಲಕ ಅವರಿಗೆ ಸಿಗಬೇಕಾದ ಅನೇಕ ಅವಕಾಶಗಳನ್ನು ಕಳೆದರು. ಇವರಿಗೆ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದಾಗ ಅದನ್ನು ನಿರಾಕರಿಸಿದರು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ದಾವಣಗೆರೆ ವಿವಿ ಕುಲಪತಿ ಪ್ರೊ.ಶಿವಶರಣಪ್ಪ ವಿ. ಹಲಸೆ ಅವರು `ಎಂ.ಚಿದಾನಂದಮೂರ್ತಿ ಅಂತಹ ಸಂಶೋಧನಾ ಮೇರು ವ್ಯಕ್ತಿತ್ವವು ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪ ಕರಿಗೆ ಪ್ರೇರಣೆಯಾಗಬೇಕಿದೆ. ಅವರು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಯು ನಮಗೆಲ್ಲಾ ಅನುಕರಣಿಯ ವಾದುದು’ ಎಂದು ಅಭಿಪ್ರಾಯಪಟ್ಟರು. ಡಾ.ಎಂ.ಚಿದಾನಂದ ಮೂರ್ತಿ ಕನ್ನಡ ಅಧ್ಯಯನ ಮತ್ತು ಸಂಶೋ ಧನಾ ಕೇಂದ್ರದ ಅಧ್ಯಕ್ಷ ಡಾ. ಕೆ.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಲಸಚಿವ ಡಾ.ಬಸವರಾಜ್ ಬಣಕಾರ್, ಹಣಕಾಸು ಅಧಿಕಾರಿಗಳಾದ ಡಾ. ಗೋಪಾಲ ಎಂ.ಅಡವಿರಾವ್, ಪ್ರೊ. ಕೆ.ಬಿ.ರಂಗಪ್ಪ, ಡಾ.ಗಾಯತ್ರಿ ದೇವರಾಜ್, ಡಾ.ಜೆ.ಕೆ.ರಾಜು, ಡಾ.ಶಿವಕುಮಾರ್ ಕಣಸೋಗಿ, ಡಾ.ಜೋಗಿನಕಟ್ಟೆ ಮಂಜುನಾಥ್, ಡಾ. ವಿ.ಜಯರಾಮಯ್ಯ, ಡಾ.ಮಹಾಂತೇಶ್ ಪಾಟೀಲ್, ಡಾ. ಆರ್.ರೂಪೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ಹೆಚ್.ವಿ.ಶಾಂತರಾಜು ಪರಿಚಯಿಸಿದರು. ಡಾ.ಭೀಮಾಶಂಕರ ಜೋಷಿ ನಿರೂಪಿಸಿದರು. ಡಾ. ಬಿ.ಬಸವರಾಜ್ ವಂದಿಸಿದರು.