ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಿ ಸಾಧನೆ ಮಾಡಿದೆ

ಹರಿಹರ : ಗ್ರಾ.ಪಂ. ಕಾಂಗ್ರೆಸ್ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ಹರಿಹರ, ಜ.16- ಕುರುಬ ಸಮಾಜವನ್ನು ಎಸ್.ಟಿ. ಸೇರ್ಪಡೆಗೆ ನನ್ನ ಬೆಂಬಲವಿದೆ. ಆದರೆ, ಸಮಾಜವನ್ನು ದಿಕ್ಕು ತಪ್ಪಿಸುವ ಆರ್‌ಎಸ್‌ಎಸ್ ಕುತಂತ್ರದ ರಾಜಕೀಯ ನಾಟಕದ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಚುನಾಯಿತ ಜನಪ್ರತಿನಿಧಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ವಿರುದ್ಧ ನಮ್ಮದೇ ಸಮಾಜವನ್ನು ಎತ್ತಿಕಟ್ಟಲು, ಅಹಿಂದ ವರ್ಗದ ಒಗ್ಗಟ್ಟು ಹಾಗೂ ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನವನ್ನು ಕದಡಲು ಆರ್‌ಎಸ್‌ಎಸ್‌ನವರು ಎಸ್.ಟಿ. ಹೋರಾಟದ ಸಂಚು ರೂಪಿಸಿದ್ದಾರೆ. 

ನನ್ನ ಅವಧಿಯಲ್ಲಿ ಕುರುಬ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದರೂ, ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸದೇ ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಸಾಮಾಜಿಕ ನ್ಯಾಯದ ಬದ್ಧತೆ ಇಲ್ಲದೇ, ಮೀಸಲಾತಿ ಹಾಗೂ ಮಂಡಲ್ ವರದಿಯನ್ನು ವಿರೋಧಿಸಿದ್ದ ಬಿಜೆಪಿ ಪಕ್ಷದವರು, ಗಂಜಿ ಗಿರಾಕಿಗಳು. ಮೀಸಲಾತಿ ವಿರೋಧಿಸುವ ಇವರು ಕಾಂಗ್ರೆಸ್‌ಗೆ ಮೀಸಲಾತಿ ಪಾಠ ಹೇಳಲು ಯತ್ನಿಸುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಅನ್ನ ಭಾಗ್ಯ ಯೋಜನೆಯ ಅಕ್ಕಿಯಲ್ಲಿ ಕಡಿತ, ವಿದ್ಯಾಸಿರಿ, ಶಾದಿ ಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡದೇ ಸ್ಥಗಿತಗೊಳಿಸಲು ಯತ್ನಿಸುತ್ತಿರುವ ಜನ ವಿರೋಧಿ ಸರ್ಕಾರಕ್ಕೆ ಭವಿಷ್ಯದಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ.  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ನೀಡಲಾಗುವುದು ಎಂದು ಭರವಸೆ ನೀಡಿದರು.

ಆಪರೇಷನ್ ಕಮಲದ ಜನಕ ಯಡಿಯೂ ರಪ್ಪ ನೇತೃತ್ವದ ಬಿಜೆಪಿ ಗ್ರಾಮ ಪಂಚಾಯಿತಿಯಲ್ಲಿ ಜಯ ಗಳಿಸಿದ ಪಕ್ಷದ ಪ್ರತಿನಿಧಿಗಳನ್ನು ಹಣ ಹಾಗೂ ಆಮಿಷಗಳನ್ನು ಒಡ್ಡಿ ಖರೀದಿಗೆ ಯತ್ನಿಸುತ್ತಿದ್ದಾರೆ. ಇಂತಹ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಚುನಾಯಿತ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. 

ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 32,854 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 30,834 ಹಾಗೂ ಜೆಡಿಎಎಸ್ 16 ಸಾವಿರ ಸ್ಥಾನಗಳನ್ನು ಗಳಿಸಿವೆ. ತಾಲ್ಲೂಕಿನಲ್ಲಿ 154 ಸ್ಥಾನಗಳನ್ನು ಗಳಿಸುವ ಮೂಲಕ ಯಶಸ್ವಿ ಸಾಧನೆಗೈದಿದೆ. ಈ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಶಾಸಕ ಎಸ್. ರಾಮಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಶಾಸಕ ಎಂ.ಬಿ. ಪಾಟೀಲ್, ಪಿ.ಟಿ. ಪರಮೇಶ್ವರ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಂಜುನಾಥ ಪಾಟೀಲ್, ಜಿಗಳಿ ಆನಂದಪ್ಪ, ಡಿ.ಬಸವರಾಜ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.

error: Content is protected !!