ಜಗಳೂರಿನಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಶಾಸಕರ ಚಾಲನೆ

ಜಗಳೂರು, ಜ.16- ಪ್ರಧಾನಿ ಮೋದಿಯವರ ಜನಪರ ಕಾಳಜಿಯಿಂದ ದೇಶವ್ಯಾಪಿ ಮೊದಲ ಬಾರಿಗೆ ಕೋವಿಡ್-19 ವಿರುದ್ಧ ಲಸಿಕೆ‌ ಆರಂಭವಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ಹರ್ಷ ವ್ಯಕ್ತಪಡಿಸಿದರು. 

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾ ಯತ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆಯಿಂದ ಹಮ್ಮಿ ಕೊಂಡಿದ್ದ ಕೋವಿಡ್ ಮೊದಲ ಹಂತದ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದರು. ವರ್ಷವಿಡೀ ಕೋವಿಡ್ ನಿಯಂತ್ರಣಕ್ಕೆ ಹರಸಾಹಸಪಡುವಂ ತಾಗಿತ್ತು. ಇದೀಗ ದೇಶದಲ್ಲಿ  ತಜ್ಞರ ಸತತ ಪರಿಶ್ರಮದ ಫಲವಾಗಿ ಲಸಿಕೆ   ಲಭಿಸಿದೆ. ಆದರೆ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೇ ಸಾಮಾಜಿಕ ಅಂತರ, ಸ್ಯಾನಿಟೈಸರ್‌, ಮಾಸ್ಕ್ ಕಡ್ಡಾಯವಾಗಿ ಬಳಸಿರಿ ಎಂದು ಶಾಸಕರು ಸಲಹೆ ನೀಡಿದರು. ಆಸ್ಪತ್ರೆ ಸಿಬ್ಬಂದಿಗಳಿಗೆ ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಸರ್ಕಾರವೇ ಪೂರ್ಣ ವೆಚ್ಚ ಭರಿಸಲಿದೆ ಆತಂಕಬೇಡ ಎಂದರು. 

ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗ ರಾಜ್ ಮಾತನಾಡಿ, ಸರ್ಕಾರದ ಮಾರ್ಗ ಸೂಚಿಯಂತೆ ಪ್ರತಿನಿತ್ಯ 100 ಜನರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಕೇಂದ್ರಗಳಿಗೆ ಆಗಮಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಬಿಳಿಚೋಡು ಸಮುದಾಯ ಆರೋಗ್ಯ ಕೇಂದ್ರದ 40 ಜನ ಸೇರಿ  ತಾಲ್ಲೂಕಿನಲ್ಲಿ 585 ಫಲಾನುಭವಿಗಳನ್ನು ಗುರುತಿಸ ಲಾಗಿದೆ ಒಟ್ಟು 772 ಲಸಿಕೆಗಳು ಲಭ್ಯವಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷರಾದ ಶಾಂತಕುಮಾರಿ, ಸದಸ್ಯ ಎಸ್.ಕೆ. ಮಂಜುನಾಥ್, ಜಿಪಂ ಸಿಇಓ ಪದ್ಮಾ ಬಸವಂತಪ್ಪ, ತಹಶೀಲ್ದಾರ್ ಡಾ.ನಾಗವೇಣಿ, ತಾಪಂ ಇಓ ಮಲ್ಲಾನಾಯ್ಕ,  ಡಾ. ನೀರಜ್, ಡಾ. ಮಂಜುನಾಥ್, ಡಾ. ಮಲ್ಲಪ್ಪ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!