ಮಲೇಬೆನ್ನೂರಿನಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜಾ ಸಮಾರಂಭದಲ್ಲಿ ಸಂಸದ ಸಿದ್ದೇಶ್ವರ
ಭೈರನಪಾದ ಏತ ನೀರಾವರಿ ಮತ್ತು ಕೊಮಾರನಹಳ್ಳಿ ಕೆರೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಗಮನ ಹರಿಸಿ : ಶಾಸಕ ರಾಮಪ್ಪ ಮನವಿ
ಮಲೇಬೆನ್ನೂರು, ಜ.16- ಮರಿಯಮ್ಮನಹಳ್ಳಿ ಯಿಂದ ಶಿವಮೊಗ್ಗ ಸೇರುವ ರಾಜ್ಯ ಹೆದ್ದಾರಿಯನ್ನು ಶೀಘ್ರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ, ಅಭಿವೃದ್ಧಿಪಡಿಸಲಾ ಗುವುದೆಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಅವರು ಶನಿವಾರ ಇಲ್ಲಿನ ನೀರಾವರಿ ಕಛೇರಿ ಎದುರು ಎಸ್.ಹೆಚ್. ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ 4.40 ಕಿ.ಮೀ ಉದ್ದದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ, ಪತ್ರಕರ್ತರೊಂದಿಗೆ ಮಾತನಾಡಿದರು.
ಕೋವಿಡ್ ಕಾರಣದಿಂದಾಗಿ ಕೇಂದ್ರಕ್ಕೆ ರಾಜ್ಯದ ಪಾಲು ಕೊಡುವುದು ವಿಳಂಬ ಆಗಿರುವ ಕಾರಣ ಯೋಜನೆ ಪ್ರಾರಂಭವಾಗಿಲ್ಲ. ದೇಶದಲ್ಲಿ ಇದೇ ರೀತಿ 1 ಲಕ್ಷ ಕಿ.ಮೀ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಎಂದರು.
ಹೊನ್ನಾಳಿ ಮತ್ತು ಶಿವಮೊಗ್ಗ ತಾಲ್ಲೂಕಿನ ರೈತರ ವಿರೋಧದಿಂದಾಗಿ ಹರಿಹರ-ಶಿವಮೊಗ್ಗ ರೈಲ್ವೆ ಮಾರ್ಗದ ಸರ್ವೇ ವಿಳಂಬವಾಗಿದೆ. ರೈತರು ಒಪ್ಪಿಗೆ ಕೊಟ್ಟ ತಕ್ಷಣ ಸರ್ವೇ ಮಾಡಿಸಲಾಗುವುದು. ಈಗಾಗಲೇ ರಾಣೇಬೆನ್ನೂರು-ಶಿವಮೊಗ್ಗ ರೈಲ್ವೆ ಮಾರ್ಗದ ಸರ್ವೇ ಆಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆೆ ಎಂದು ಸಿದ್ದೇಶ್ವರ ತಿಳಿಸಿದರು.
ಹರಿಹರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸು ವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಹರಪನಹಳ್ಳಿಗೆ ಬಿಎಸ್ಎಫ್ ತರಲು ಪ್ರಯತ್ನ ನಡೆದಿದೆ. ಗಬಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಎಥೆನಾಲ್ ಕೈಗಾರಿಕೆ ಕಾಮಗಾರಿ ಮಾರ್ಚ್ ವೇಳೆಗೆ ಪ್ರಾರಂಭವಾಗಲಿದೆ.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರಥಿ-ಚಿಕ್ಕಬಿದರಿ ನಡುವೆ ಸೇತುವೆ ನಿರ್ಮಾಣಕ್ಕೆ 8 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಇಂದು ಆ ಕಾಮಗಾರಿಗೂ ಚಾಲನೆ ನೀಡಿ, ಮುಂದಿನ ಮಳೆಗಾಲದ ವೇಳೆಗೆ ಹೊಸ ಸೇತುವೆ ಸಂಚಾರಕ್ಕೆ ಸಿದ್ದವಾಗಲಿದೆ ಎಂದು ಸಿದ್ದೇಶ್ವರ ಹೇಳಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಸಾರಥಿ-ಚಿಕ್ಕಬಿದರಿ ನಡುವೆ ಸೇತುವೆ ಕಾಮಗಾರಿಗೆ ಈ ಹಿಂದೆಯೇ ಗುದ್ದಲಿ ಪೂಜೆ ಮಾಡಿದ್ದೇವೆ, ಈಗ ಮತ್ತೆ ಪೂಜೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಭೈರನಪಾದ ಏತ ನೀರಾವರಿ ಯೋಜನೆ ಮತ್ತು ಕೊಮಾರನಹಳ್ಳಿ ಕೆರೆ ಅಭಿವೃದ್ಧಿ ಪಡಿಸಿ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಡಿಪಿಆರ್ ಆಗಿ ಸರ್ಕಾರದಿಂದ ಅನುಮತಿಯೂ ಸಿಕ್ಕಿದೆ.
ಅನುದಾನ ಬಿಡುಗಡೆಗೆ ಸಂಸದ ಸಿದ್ದೇಶ್ವರ, ಮಾಜಿ ಶಾಸಕ ಹರೀಶ್ ಅವರು ಶ್ರಮಿಸಲಿ ಎಂದು ಶಾಸಕ ರಾಮಪ್ಪ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಪುರಸಭೆ ಅಧ್ಯಕ್ಷೆ ನಾಹೀದಾ ಅಂಜುಂ ಸೈಯದ್ ಇಸ್ರಾರ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ದಾದಾವಲಿ, ಪಾನಿಪೂರಿ ರಂಗನಾಥ್, ಎಂ.ಬಿ. ಫೈಜು, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ತಾ.ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಕಣ್ಣಾಳ್ ಹನುಮಂತಪ್ಪ, ಪಿ.ಆರ್. ರಾಜು, ಪಿ.ಬಿ. ದೇವರಾಜ್, ಕೊಟ್ರೇಶ್ ನಾಯ್ಕ, ಬಿ. ಮಂಜುನಾಥ್, ಹಾಲಿವಾಣದ ರೇವಣಸಿದ್ದಪ್ಪ, ಜಿಗಳಿ ಹನುಮಗೌಡ, ಪಿಡಬ್ಲ್ಯೂಡಿ ಎಇಇ ನಾಗರಾಜಪ್ಪ, ಎಇ ಕೆ.ಎನ್. ಶಿವಮೂರ್ತಿ, ಪಿಎಸ್ಐ ವೀರಬಸಪ್ಪ, ಪುರಸಭೆ ಅಧಿಕಾರಿ ದಿನಕರ್, ಗುತ್ತಿಗೆದಾರ ಬಿ.ಎಂ. ಜಗದೀಶ್ವರಸ್ವಾಮಿ, ಸಿರಿಗೆರೆಯ ಕುಂದೂರು ಮಂಜಪ್ಪ, ಆದಾಪುರ ಹನುಮಂತಪ್ಪ, ಯಲವಟ್ಟಿ ಸುರೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.